ಪುಸ್ತಕಗಳು ನಡೆದಾಡುವ ದೇವರು: ಗಂಗಾವತಿ ಪ್ರಾಣೇಶ

KannadaprabhaNewsNetwork | Published : Mar 5, 2024 1:33 AM

ಸಾರಾಂಶ

ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಪುಸ್ತಕಗಳು ಸಹಾಯಕವಾಗುತ್ತವೆ. ಶಾಲೆಯ ಮಕ್ಕಳಿಗೆ ಕಥೆ, ಕವನ, ಹಾಡು, ನಾಟಕ, ಚಿತ್ರಗಳ ಪುಸ್ತಕಗಳನ್ನು ಕೊಡುವ ಮೂಲಕ ಜ್ಞಾನದ ಜೊತೆ ಓದುವ ಖುಷಿ ಕೊಡಲು ಸಾಧ್ಯ.

ಕಾರಟಗಿ: ಪುಸ್ತಕಗಳು ಅಂದರೆ ನಡೆದಾಡುವ ದೇವರು. ಅವು ನಮ್ಮ ಕೈಯಲ್ಲಿದ್ದರೆ ನಮ್ಮ ಆತ್ಮೀಯ ಸ್ನೇಹಿತರಿದ್ದಂತೆ. ಮುಚ್ಚಿಟ್ಟರೆ ಸುಮ್ಮನೆ ಇರುವ ಪುಸ್ತಕಗಳನ್ನು ತೆರೆದರೆ ಸಾಕು ನೋಡಲಾರದ ದೇಶ ತೋರಿಸುತ್ತವೆ ಎಂದು ಖ್ಯಾತ ಹಾಸ್ಯ ಮಾತುಗಾರ ಗಂಗಾವತಿ ಬೀಚಿ ಪ್ರಾಣೇಶ ಹೇಳಿದರು.ತಾಲೂಕಿನ ಲಕ್ಷ್ಮೀಕ್ಯಾಂಪ್ ಕುಂಟೋಜಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಪುಸ್ತಕಗಳು ಸಹಾಯಕವಾಗುತ್ತವೆ. ಶಾಲೆಯ ಮಕ್ಕಳಿಗೆ ಕಥೆ, ಕವನ, ಹಾಡು, ನಾಟಕ, ಚಿತ್ರಗಳ ಪುಸ್ತಕಗಳನ್ನು ಕೊಡುವ ಮೂಲಕ ಜ್ಞಾನದ ಜೊತೆ ಓದುವ ಖುಷಿ ಕೊಡಲು ಸಾಧ್ಯ. ಪುಸ್ತಕಗಳು ಅನೇಕ ಹೊಸ ವಿಚಾರಗಳನ್ನು ತಿಳಿಸುತ್ತವೆ. ಹೊರಗಿನ ಪುಸ್ತಕಗಳನ್ನು ಓದುವುದರಿಂದ ಹೊರಪ್ರಪಂಚ ತಿಳಿಯುತ್ತದೆ ಎಂದರು.ಗಂಗಾವತಿಯ ಮಕ್ಕಳ ವೈದ್ಯ ಡಾ.ಅಮರೇಶ ಪಾಟೀಲ್ ಮಾತನಾಡಿ, ಮಕ್ಕಳು ದೇಶದ ಭವಿಷ್ಯತ್ತು. ಜಗತ್ತಿನ ಯಾವ ದೇಶಕ್ಕೆ ಬೇಕಾದರೂ ಹೋಗುವ ಶಕ್ತಿ ಮಕ್ಕಳಿಗೆ ಇದೆ. ಪುಸ್ತಕಗಳನ್ನು ಓದಬೇಕು. ಓದಿ ಜ್ಞಾನವನ್ನು ಪಡೆಯಬೇಕು ಎಂದು ಹೇಳಿದರು.ಗ್ರಂಥಾಲಯದ ಕುರಿತು ಮಾತನಾಡಿದ ಮುಖ್ಯ ಶಿಕ್ಷಕ ಸೋಮು ಕುದರಿಹಾಳ, ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ, ಕಂಪ್ಯೂಟರ್ ಶಿಕ್ಷಣದಂಥ ವಿಶೇಷ ಅವಕಾಶವನ್ನು ಮಕ್ಕಳಿಗೆ ಕಟ್ಟಿ ಕೊಡಬೇಕು. ಅನುಭವಗಳು ಮಕ್ಕಳ ಮನಸ್ಸನ್ನು ಪ್ರಭಾವಿಸುತ್ತವೆ. ಈ ಗ್ರಂಥಾಲಯೂ ಶಾಲೆಗೆ ಮಾತ್ರ ಸೀಮಿತವಲ್ಲ. ಅಕ್ಕಪಕ್ಕದ ಊರಿನ ವಿದ್ಯಾರ್ಥಿಗಳು ಓದಬಹುದು. ಗ್ರಂಥಾಲಯ ನಿರ್ಮಾಣಕ್ಕೆ ಕೊಡುಗೆ ನೀಡಿದ ದೇವೇಂದ್ರಕುಮಾರ್ ಹಾಗೂ ಪ್ರತೀಕ್ ಎಸ್. ಬಾದಾಮಿ ಸಹಕಾರ ಅತ್ಯಂತ ದೊಡ್ಡದು. ಅವರಿಂದ ರಾಜ್ಯದ ಇತರೆ ಸರ್ಕಾರಿ ಶಾಲೆಗಳಿಂತೆ ಇಂಥ ಸೇವೆ ದೊರೆಯಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಸಾಹಿತಿ ಪವನಕುಮಾರ ಗುಂಡೂರ, ಚಂದ್ರಶೇಖರ ಗಣವಾರಿ, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಶರಣಪ್ಪ, ದುರುಗಮ್ಮ, ಕರಿಯಪ್ಪ, ಬಾಗಪ್ಪ, ಶ್ರೀದೇವಿ, ಸಿದ್ದಲಿಂಗಣ್ಣ ಉಪಸ್ಥಿತರಿದ್ದರು.

Share this article