ಚಿನ್ನ ಕಳವು ಪ್ರಕರಣ ಆರೋಪಿ ಡಿವೈಎಸ್ಪಿಗೆ ಸಿಎಂ ಪದಕಕ್ಕೆ ಶಿಫಾರಸ್ಸು

KannadaprabhaNewsNetwork | Published : Jun 14, 2024 1:04 AM

ಸಾರಾಂಶ

ವಿವಿಧ ಆರೋಪಗಳನ್ನು ಹೊತ್ತ ಕಳಂಕಿತ ಈ ಅಧಿಕಾರಿ ಬಗ್ಗೆ ಮಾಹಿತಿಯಿದ್ದರೂ ಕೂಡ, ಎಲ್ಲವನ್ನೂ ಮರೆಮಾಚಿ ಸಿಎಂ ಪದಕಕ್ಕೆ ಶಿಫಾರಸ್ಸು ಮಾಡಿರುವ ಮೇಲಧಿಕಾರಿಗಳ ಕ್ರಮದ ಬಗ್ಗೆಯೂ ತನಿಖೆ ನಡೆಸುವಂತೆ ಶಾಸಕ ಕಂದಕೂರು ಕೋರಿದ್ದಾರೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಜಪ್ತಿ ಮಾಡಿದ್ದ 4.9 ಕೆಜಿ ಚಿನ್ನದ ದಾಸ್ತಾನು ಕಳವು ಪ್ರಕರಣ ಆರೋಪ ಹೊತ್ತ ಹಾಗೂ ಕೋಟ್ಯಂತರ ರುಪಾಯಿಗಳ ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮ ದಂಧೆಕೋರನಿಗೆ ಸನ್ಮಾನಿಸಿ ವ್ಯಾಪಕ ಟೀಕೆಗೊಳಗಾಗಿದ್ದ ಜಿಲ್ಲೆಯ ಸುರಪುರ ಉಪ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಂದಾರ್ ಅವರಿಗೆ 2023ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಶಿಫಾರಸ್ಸು ಮಾಡಿರುವುದು ಆಶ್ರರ್ಯ ಮೂಡಿಸಿದ್ದು, ವ್ಯಾಪಕ ಟೀಕೆಗೆ ಒಳಗಾಗಿದೆ.

ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಮಾಡಿರುವುದನ್ನು ಮರು ಪರಿಶೀಲಿಸಬೇಕೆಂದು ಗುರುಮಠಕಲ್‌ ಮತಕ್ಷೇತ್ರದ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದ್ದಾರೆ. "ಕನ್ನಡಪ್ರಭ "ಕ್ಕೆ ಲಭ್ಯ ಪತ್ರದಲ್ಲಿರುವಂತೆ, ವಿವಿಧ ಆರೋಪಗಳನ್ನು ಹೊತ್ತ ಕಳಂಕಿತ ಈ ಅಧಿಕಾರಿ ಬಗ್ಗೆ ಮಾಹಿತಿಯಿದ್ದರೂ ಕೂಡ, ಎಲ್ಲವನ್ನೂ ಮರೆಮಾಚಿ ಸಿಎಂ ಪದಕಕ್ಕೆ ಶಿಫಾರಸ್ಸು ಮಾಡಿರುವ ಮೇಲಧಿಕಾರಿಗಳ ಕ್ರಮದ ಬಗ್ಗೆಯೂ ತನಿಖೆ ನಡೆಸುವಂತೆ ಶಾಸಕ ಕಂದಕೂರು ಕೋರಿದ್ದಾರೆ. ಕಳಂಕಿತರಿಗೆ ಸಿಎಂ ಪದಕ ನೀಡಿದರೆ ಪ್ರಾಮಾಣಿಕ ಅಧಿಕಾರಿಗಳ ಸ್ಥೈರ್ಯ ಕುಗ್ಗಿಸಿದಂತೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಅಕ್ಕಿ ಅಕ್ರಮ ಆರೋಪಿಗೆ ಸನ್ಮಾನ: ಕಳೆದ ವರ್ಷ ಯಾದಗಿರಿ ಜಿಲ್ಲೆ ಸುರಪುರದಲ್ಲಿ 2 ಕೋಟಿ ರು.ಗಳಿಗೂ ಹೆಚ್ಚಿನ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಬೇಕಾಗಿದ್ದ ಡಿವೈಎಸ್ಪಿ ಇನಾಂದಾರ್‌, ಅಕ್ಕಿ ಅಕ್ರಮದ ಆರೋಪಿ ಶಹಾಪುರ ತಾಲೂಕಿನ ಚಾಮನಾಳದ ಮಲ್ಲಿಕ್‌ ಎಂಬಾತನಿಗೆ ಹೂ ಹಾರ ಸನ್ಮಾನಿಸಿದ್ದರು.

ಡಿವೈಎಸ್ಪಿ ಅವರ ಈ ನಡೆ ವ್ಯಾಪಕ ಟೀಕೆಗೊಳಗಾಗಿತ್ತು. "ಕನ್ನಡಪ್ರಭ " ಈ ಕುರಿತು 2023 ರ ಡಿ.4 ರಂದು ವಿಶೇಷ ವರದಿ ಮಾಡಿತ್ತು. ಕಿಂಗ್ಪಿನ್‌ ಮಲ್ಲಿಕ್‌ನನ್ನು ಪಾರು ಮಾಡಲು ಅಮಾಯಕರನ್ನು ಡಿವೈಎಸ್ಪಿ ಸಿಲುಕಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಮೂಡಿಬಂದಿದ್ದವು. ಬೆಳಗಾವಿ ಅಧಿವೇಶನದಲ್ಲಿ ಶಾಸಕ ಕಂದಕೂರು ಈ ಬಗ್ಗೆ ಪ್ರಸ್ತಾಪಿಸಿದ್ದರು.

ಚಿನ್ನ ಕಳ್ಳ ಸಾಗಣೆ ಆರೋಪ: 2021 ರಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ ಉಪ ವಿಭಾಗದ ಯಮನಕರಡಿ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾಗಿದ್ದ 4.9 ಕೆ.ಜಿ. ಚಿನ್ನ ದಾಸ್ತಾನು ಕಳವು ಪ್ರಕರಣದಲ್ಲಿ ಅಂದಿನ ಅಲ್ಲಿನ ಡಿವೈಎಸ್ಪಿ ಜಾವೀದ್‌ ಇನಾಂದಾರ್‌ ಸೇರಿದಂತೆ ಹಲವರ ವಿರುದ್ಧ ಆರೋಪಗಳು ಕೇಳಿ ಬಂದಿದ್ದರಿಂದ ಸರ್ಕಾರ ಸಿಐಡಿ ತನಿಖೆಗೆ ಇದನ್ನು ಒಪ್ಪಿಸಿತ್ತು. ಈಗಲೂ ಈ ಕುರಿತಂತೆ ಸಿಐಡಿ ತನಿಖೆ ಮುಂದುವರಿದಿದೆ.ಪೊಲೀಸ್‌ ಮಹಾನಿರ್ದೇಶಕರಿಗೆ ಡಿವೈಎಸ್ಪಿ ಜಾವೀದ್ ಇನಾಂದಾರ ಅವರ ಕುರಿತು ನೀಡಿದ್ದಾರೆನ್ನಲಾದ ಗುಣಕಥನ ವರದಿಯಲ್ಲಿ, ವಾಸ್ತವಾಂಶಗಳ ಮರೆ ಮಾಚಲಾಗಿದೆ. ಸಿಎಂ ಪದಕ ಗಿಟ್ಟಿಸುವ ನಿಟ್ಟಿನಲ್ಲಿ ಸರ್ಕಾರಕ್ಕೇ ಸುಳ್ಳು ಮಾಹಿತಿ ನೀಡಲಾಗಿದೆ.

- ಶರಣಗೌಡ ಕಂದಕೂರ, ಶಾಸಕರು, ಗುರುಮಠಕಲ್‌ ಮತಕ್ಷೇತ್ರ

Share this article