ಬಡತನದಲ್ಲೇ ಅರಳಿದ ಚಿನ್ನದ ಪ್ರತಿಭೆಗಳು

KannadaprabhaNewsNetwork | Published : Apr 12, 2025 12:51 AM

ಸಾರಾಂಶ

ಬಡತನದ ಬೇಗೆಯಲ್ಲೇ ಕಷ್ಟ ಪಟ್ಟು ಓದಿ ಚಿನ್ನದ ಬೇಟೆಯಾಡುವ ಮೂಲಕ ಬಡತನ ಸಾಧನೆಗೆ ಅಡ್ಡಿ ಆಗದು ಎಂಬುದನ್ನು ಈ ಮಕ್ಕಳು ಸಾಬೀತುಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಡತನದ ಬೇಗೆಯಲ್ಲೇ ಕಷ್ಟ ಪಟ್ಟು ಓದಿ ಚಿನ್ನದ ಬೇಟೆಯಾಡುವ ಮೂಲಕ ಬಡತನ ಸಾಧನೆಗೆ ಅಡ್ಡಿ ಆಗದು ಎಂಬುದನ್ನು ಈ ಮಕ್ಕಳು ಸಾಬೀತುಪಡಿಸಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗಣ್ಯರಿಂದ ಚಿನ್ನದ ಪದಕದೊಂದಿಗೆ ಪ್ರಮಾಣ ಪತ್ರ ಸ್ವೀಕರಿಸಿದರು. ಈ ಘಳಿಗೆಗೆ ಮಕ್ಕಳ ಪೋಷಕರು ಸಾಕ್ಷಿಯಾದರು. ತಮ್ಮ ಮಕ್ಕಳ ಸಾಧನೆ ಕಂಡು ಹಿರಿಹಿರಿ ಹಿಗ್ಗಿದರು. ಕಣ್ಣಲ್ಲಿ ಆನಂದ ಭಾಷ್ಪವೂ ಹರಿಯಿತು. ತಮ್ಮ ಮಕ್ಕಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.ಹೌದು, ಬಡತನದಲ್ಲಿ ಉನ್ನತ ವ್ಯಾಸಂಗ ಮಾಡಿ, ಅದರಲ್ಲಿಯೂ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಕಥೆ ಎಲ್ಲರದ್ದೂ ಒಂದೊಂದು ತರ.ಆಶಾ ಕಾರ್ಯಕರ್ತೆ ಮಗನಿಗೆ 2 ಚಿನ್ನದ ಪದಕ

ಅಥಣಿ ತಾಲೂಕಿನ ಅರಟಾಳ ಗ್ರಾಮದ ಶಿವಶಂಕರ ಕಾಂಬಳೆ ಅವರು ಎಂಎ ಕನ್ನಡ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ. ತಂದೆ ಕೂಲಿ ಕೆಲಸ ಮಾಡುತ್ತಿದ್ದರೆ, ತಾಯಿ ಆಶಾ ಕಾರ್ಯಕರ್ತೆ. ಈ ಎರಡೂ ಚಿನ್ನದ ಪದಕಗಳನ್ನು ನನ್ನ ತಂದೆ, ತಾಯಿಗೆ ಸಮರ್ಪಿಸುತ್ತೇನೆ. ನನಗೆ ತುಂಬ ಸಂತೋಷ ಆಗುತ್ತಿದೆ. ನಿರಂತರ ಓದು, ಅಧ್ಯಾಪಕರ ಒಳ್ಳೆಯ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನಿತ್ಯ 6 ಗಂಟೆ ಓದುತ್ತಿದ್ದೆ. ಪರೀಕ್ಷೆ ಸಮೀಪಿಸುತ್ತಿದ್ದಂತೆ ಹೆಚ್ಚು ಸಮಯ ಅಭ್ಯಾಸ ಮಾಡಿದೆ. ಮುಂದೆ ಪ್ರಾಧ್ಯಾಪಕನಾಗುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಶಿವಶಂಕರ ಕಾಂಬಳೆ ಹೇಳಿದರು.ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕಾತರಕಿ ಗ್ರಾಮದ ಶ್ರೀದೇವಿ ಅರಕೇರಿ ಗಣಿತ ವಿಷಯದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಬಹು ದಿನದ ಪರಿಶ್ರಮಕ್ಕೆ ಇಂದು ಯಶಸ್ಸು ಸಿಕ್ಕಿದೆ. ಇದು ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು‌ ಮೆಟ್ಟಿಲು. ಮುಂದೆ ಸರ್ಕಾರಿ‌ ಕಾಲೇಜಿನಲ್ಲಿ ಉಪನ್ಯಾಸಕಿ ಆಗಬೇಕು ಎಂದುಕೊಂಡಿದ್ದೇನೆ. ತಂದೆ ಮಾಜಿ ಸೈನಿಕರು, ತಾಯಿ ಗೃಹಿಣಿ ಆಗಿದ್ದಾರೆ. ತರಗತಿಯಲ್ಲಿ ಶಿಕ್ಷಕರು ಹೇಳಿದ್ದು ಗಮನವಿಟ್ಟು ಕೇಳುತ್ತಿದ್ದೆ. ಹಾಸ್ಟೇಲ್ ರೂಮಿಗೆ ಬಂದು ಪುನಃ ಓದಿಕೊಳ್ಳುತ್ತಿದ್ದೆ. ಏನಾದರೂ‌ ಗೊಂದಲ ಇದ್ದರೆ ಉಪನ್ಯಾಸಕರಿಂದ ಪರಿಹರಿಸಿಕೊಳ್ಳುತ್ತಿದ್ದೆ ಎಂದು ಶ್ರೀದೇವಿ ಹೇಳಿದರು.ನಾನು ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಚಿನ್ನದ ಪದಕ ಪಡೆದ‌ ಮೊದಲ ವಿದ್ಯಾರ್ಥಿನಿ. ಮೊದಲು ನನ್ನದು ಉರ್ದು ಮಾಧ್ಯಮ. ಎಂ.ಬಿ.ಎ ದಲ್ಲಿ ಚಿನ್ನದ ಪದಕ ಸಿಕ್ಕಿದೆ. ಮುಂದೆ ಎಂಎನ್ಸಿ‌ ಕಂಪನಿ ಇಲ್ಲವೇ ಪ್ರಾಧ್ಯಾಪಕಿಯಾಗುವ ಆಶಯವಿದೆ. ನನ್ನ ತಂದೆ-ತಾಯಿ ಓದಿಲ್ಲ. ಆದರೆ, ನನಗೆ ಕಷ್ಟ ಪಟ್ಟು ಓದಿಸಿದ್ದಾರೆ. ಅವರಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಇನ್ನು ನನ್ನ ಅಣ್ಣಾ ನನಗೆ ತುಂಬಾ ಸಹಾಯ ಮಾಡಿದ್ದಾನೆ. ತಂದೆ - ತಾಯಿ‌ ಬಿಟ್ಟರೆ ನನಗೆ ಎಲ್ಲವೂ ಅಣ್ಣನೇ ಎಂದು ಹೀನಾ ಕೌಸರ್ ಮೌಲಾಬಿನ್ ತುಬಾಕಿ ಹೇಳಿದರು.

Share this article