ಗೋಮಾಳ ಜಾಗ ಒತ್ತುವರಿ: ಕ್ರಮಕ್ಕೆ ಒತ್ತಾಯ

KannadaprabhaNewsNetwork |  
Published : Jul 01, 2024, 01:54 AM IST
ಕಲ್ಮನೆ ಗ್ರಾಮಸ್ಥರು ಮನವಿ ಸಲ್ಲಿಸಿದರು | Kannada Prabha

ಸಾರಾಂಶ

ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ಎಫ್.ಐ.ಆರ್ ಹಾಕಿದೆ. ತಕ್ಷಣ ಇಲಾಖೆ ಗ್ರಾಮಸ್ಥರ ಮೇಲೆ ಉದ್ದೇಶಪೂರ್ವಕವಾಗಿ ಹಾಕಿರುವ ಕೇಸನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯ

ಕನ್ನಡಪ್ರಭವಾರ್ತೆ ಸಾಗರ

ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಮುಫತ್ತಾಗಿ ಇರಿಸಿದ್ದ ಜಾಗವನ್ನು ಅರಣ್ಯ ಇಲಾಖೆ ಒತ್ತುವರಿ ಮಾಡುತ್ತಿರುವುದರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ಆರ್.ಜಯಂತ್ ಮಾತನಾಡಿ, ಆವಿನಹಳ್ಳಿ ಹೋಬಳಿ ಕಲ್ಮನೆ ಗ್ರಾಮದ ಸ.ನಂ. ೧೦೧ರ ಜಮೀನನ್ನು ಗೋವುಗಳಿಗೆ ಮೇಯಲು ಕಾಯ್ದಿರಿಸಲಾಗಿದೆ. ಈ ಭೂಮಿಯು ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಇದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ಎಫ್.ಐ.ಆರ್ ಹಾಕಿದೆ. ತಕ್ಷಣ ಇಲಾಖೆ ಗ್ರಾಮಸ್ಥರ ಮೇಲೆ ಉದ್ದೇಶಪೂರ್ವಕವಾಗಿ ಹಾಕಿರುವ ಕೇಸನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಅರಣ್ಯ ಇಲಾಖೆ ಈ ಧೋರಣೆಯನ್ನು ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ. ಕಂದಾಯ ಭೂಮಿಯನ್ನು ಉಳಿಸುವ ಹೊಣೆಗಾರಿಕೆ ತಹಸೀಲ್ದಾರರದ್ದಾಗಿದೆ. ಆದರೆ ಅರಣ್ಯ ಇಲಾಖೆಯು ಕಂದಾಯ ಇಲಾಖೆ ಭೂಮಿಯನ್ನು ತನ್ನ ಭೂಮಿಯೆಂದು ಹೇಳಿ ಗಿಡ ನೆಡುವ ಮೂಲಕ ಭೂಮಿ ಒತ್ತುವರಿ ಮಾಡುವ ಪ್ರಯತ್ನ ನಡೆಸುತ್ತಿದೆ. ತಕ್ಷಣ ಉಪವಿಭಾಗಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿ, ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸುತ್ತಿರುವುದು ಸರಿಯಲ್ಲ. ಪಹಣಿಯಲ್ಲಿ ಕಂದಾಯ ಭೂಮಿ ಎಂದು ನಮೂದಾಗಿದೆ. ಗ್ರಾಮಸ್ಥರಿಗೆ ತಮ್ಮ ಜಾನುವಾರುಗಳನ್ನು ಮೇಯಿಸಲು ಬೇರೆ ಕಡೆ ಜಾಗವಿಲ್ಲ. ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಕೇಸ್‌ ಹಿಂದಕ್ಕೆ ಪಡೆದು ಗೋಮಾಳ ಜಾಗವನ್ನು ಉಳಿಸಿ ಕೊಡಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸತ್ಯನಾರಾಯಣ, ವೆಂಕಟರಮಣ, ಕೃಷ್ಣಪ್ಪ, ಬಸವರಾಜ್, ಕೆ.ಅಶೋಕ್, ಕೃಷ್ಣಮೂರ್ತಿ, ಅಶೋಕ್, ಸೀತಾರಾಮ್, ಮಹಾಬಲಗಿರಿ, ಕೊಲ್ಲೂರ, ಜನಾರ್ದನ್, ಸುರೇಶ್, ಮಂಜುನಾಥ್, ಕೇಶವ ಇನ್ನಿತರರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ