ಮಂಜುನಾಥ್ ಟಿ.ಎನ್.
ಕನ್ನಡಪ್ರಭವಾರ್ತೆ ವಿರಾಜಪೇಟೆಗ್ರಾಮ ಪಂಚಾಯಿತಿಗಳೆಂದರೆ ಯಾವುದೇ ಪಕ್ಷಭೇದವಿಲ್ಲದೆ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸ್ಥಳೀಯ ಸರ್ಕಾರ ಎಂಬ ಭಾವನೆ ಜನರಲ್ಲಿ ಮೂಡಿದೆ. ಅದರಲ್ಲೂ ಸರ್ಕಾರಿ ಅಧಿಕಾರಿ ರಾಜಕೀಯ ರಹಿತವಾಗಿ ಜನರ ಸೇವೆ ಮಾಡಬೇಕಾದವರು ಒಂದು ಪಕ್ಷದ ಪರವಾಗಿ ಕೆಲಸ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಎದುರಾಗಿದ್ದು, ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ.
ಗ್ರಾಪಂ ಪಿಡಿಒ ಒಬ್ಬರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಚುನಾಯಿತ ಸದಸ್ಯರು ಆಧಾರ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜ.29ರಂದು ನಿಗದಿಯಾಗಿದೆ. ಒಟ್ಟು 21 ಸ್ಥಾನಬಲ ಇರುವ ಪಂಚಾಯಿತಿಯಲ್ಲಿ 12 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ, ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಬಿಸಿಎಂಗೆ ಮೀಸಲಾಗಿದೆ. ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಪ್ರಮೋದ್ ಗಣಪತಿ ಅವರು ಅಕಾಂಕ್ಷಿಯಾಗಿದ್ದು, ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಯನ್ನು ಸೂಚಿಸಿಲ್ಲ, ಇದರ ನಡುವೆ ಸ್ವತಃ ಪಿಡಿಒ ಆರ್ಥಿಕವಾಗಿ ಹಿಂದುಳಿದಿರುವ ಸದಸ್ಯರನ್ನು ಕರೆದು ಅವರಿಗೆ ವಿವಿಧ ಆಮಿಷಗಳನ್ನು ಒಡ್ಡಿ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರ ಪರವಾಗಿ ಮತ ಚಲಾಯಿಸುವಂತೆ ಮನವೊಲಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆಡಿಯೋ ಬಿಡುಗಡೆ: ಪಂಚಾಯಿತಿ ಸದಸ್ಯರಾದ ಗೀತ ಅವರಿಗೆ ನಿವೇಶನ, ಮನೆ ಹಾಗೂ ಗೋಣಿಕೊಪ್ಪ ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದಾಗ ನಿಮಗೆ ಸ್ಥಾನ ಕೊಡಿಸುವುದಾಗಿ ಪಿಡಿಒ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಬಿಜೆಪಿ ಸದಸ್ಯರು ಬಿಡುಗಡೆ ಮಾಡಿದ್ದಾರೆ. ಪಿಡಿಒ ಅವರ ಈ ವರ್ತನೆಗೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಅವರಿಗೆ ದೂರು ನೀಡಿದ್ದಾರೆ. ಪಿಡಿಒ ಸರ್ಕಾರಿ ಅಧಿಕಾರಿಯಾಗಿ ಒಂದು ಪಕ್ಷದ ಪರವಾಗಿ, ಪಕ್ಷದ ವಕ್ತಾರನಂತೆ ಕೆಲಸ ಮಾಡುವುದು ಎಷ್ಟು ಸರಿ. ಜೊತೆಗೆ ಪಂಚಾಯಿತಿಯಲ್ಲಿಯೂ ಅವರ ಇಷ್ಟದಂತೆ ವರ್ತಿಸುತ್ತಿದ್ದಾರೆ. ಪಂಚಾಯಿತಿ ಸದಸ್ಯರಿಗೆ ಸ್ವಲ್ಪವೂ ಗೌರವ ಕೊಡುವುದಿಲ್ಲ ಎಂದು ಸದಸ್ಯರಾದ ಗೀತಾ ಮತ್ತು ಭೋಜಮ್ಮ ಗಂಭೀರ ಆರೋಪ ಮಾಡಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆಗೆ ಮೀಸಲಾಗಿದ್ದು ಹೆಚ್ಚಿನ ಬಲ ಹೊಂದಿರುವ ಬಿಜೆಪಿ ಬೆಂಬಲಿತರು ಆಡಳಿತದ ಚುಕ್ಕಾಣಿ ಹಿಡಿಯಲು ಅವಕಾಶವಿದೆ. 9 ಸದಸ್ಯರ ಬಲ ಇರುವ ಕಾಂಗ್ರೆಸ್ ಪರವಾಗಿ ಬಿಜೆಪಿಯ ಮೂವರು ಮತ ಚಲಾಯಿಸಿದರೆ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡುವುದರಿಂದ ಕಾಂಗ್ರೆಸ್ ಬೆಂಬಲಿತರ ಪರವಾಗಿ ಮತ ಹಾಕುವಂತೆ ಪಿಡಿಒ ಆಮಿಷವೊಡ್ಡುತ್ತಿದ್ದಾರೆಂದು ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ. ಪಿಡಿಒ ವಿರುದ್ಧ ಕ್ರಮ ಕೈಗೊಂಡು ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಒ, ಇದ್ಯಾವುದೇ ವಿಷಯಗಳು ನನ್ನ ಗಮನಕ್ಕೆ ಬಂದಿಲ್ಲ. ಚುನಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಸದಸ್ಯೆ ಗೀತಾ ಅವರನ್ನು ಸಂಪರ್ಕಿಸಿದಾಗ, ಗ್ರಾಪಂನ ಇನ್ನೊಬ್ಬ ಸದಸ್ಯರಾದ ರಾಮದಾಸ್ ತನಗೆ ಕರೆ ಮಾಡಿ, ಯಾಕೆ ಕೆಲಸದ ಬಗ್ಗೆ ಪಿಡಿಒ ಅವರಲ್ಲಿ ಮಾತನಾಡುತ್ತಿಲ್ಲ ಎಂದು ವಿಚಾರಿಸಿದರು. ಹಣದ ಅಭಾವ ಇದೆ, ಅದಕ್ಕೆ ಸಂಪರ್ಕ ಮಾಡಿಲ್ಲ ಎಂದು ತಿಳಿಸಿದ್ದೆ. ಆಗ ಅವರು ಯಾವುದಕ್ಕೂ ನೀವು ಪಿಡಿಒ ಅವರನ್ನು ಸಂಪರ್ಕಿಸಿ ಎಂದು ಹೇಳಿದ್ದರು. ನಾನು ಅವರಿಗೆ ಕರೆ ಮಾಡಿದಾಗ, ಅವರು ಮಾತನಾಡುತ್ತ ಪಕ್ಷದ ವಿಚಾರಗಳನ್ನು ಮಾತನಾಡುತ್ತಿದ್ದರು. ಆಗ ರೆಕಾರ್ಡ್ ಆನ್ ಮಾಡಿಕೊಂಡಿದ್ದೆ. ನಿಮಗೆ ನಿವೇಶನ ಜೊತೆಗೆ ಮನೆಯನ್ನು ಕಟ್ಟಿಕೊಡಲು ಶಾಸಕರೊಂದಿಗೆ ಮಾತನಾಡುತ್ತೇನೆ. ಕಾಂಗ್ರೆಸ್‌ಗೆ ಮತ ಚಲಾಯಿಸಬೇಕು ಎಂದು ಪಿಡಿಒ ಒತ್ತಾಯ ಮಾಡಿದರು. ನನಗೆ ನಿವೇಶನದ ಅವಶ್ಯಕತೆ ಇರುವದು ಎಲ್ಲರಿಗೂ ಮೊದಲೇ ತಿಳಿದಿತ್ತು. ಅದಕ್ಕಾಗಿ ನಿವೇಶನದ ಆಮಿಷವೊಡ್ಡಿದ್ದಾಗಿ ಗೀತಾ ಆರೋಪಿಸಿದ್ದಾರೆ. ಪಿಡಿಒ ಪದೇ ಪದೇ ವರ್ಗಾವಣೆ: ಈ ಪಿಡಿಒ ಕರ್ತವ್ಯ ನಿರ್ವಹಿಸಿದ ಎಲ್ಲ ಕಡೆಯಲ್ಲೂ ಅಧಿಕಾರ ದುರುಪಯೋಗ ಮಾಡಿದ ಆರೋಪವಿದ್ದು, ಅವರನ್ನು ಪದೇಪದೇ ವರ್ಗಾವಣೆ ಮಾಡಿರುವುದ ಕಂಡುಬಂದಿದೆ. ಇಲ್ಲಿಯೂ ಅವರ ಮೇಲೆ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುವ ಆರೋಪ ಕೇಳಿಬಂದಿದೆ.ಗೋಣಿಕೊಪ್ಪ ಗ್ರಾಪಂ ಬಗ್ಗೆ ನನಗೆ ಈಗಾಗಲೇ ಮಾಹಿತಿ ದೊರಕಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಪರಿಶೀಲಿಸಲು ಸಾಧ್ಯವಾಗಿಲ್ಲ.ಇದೀಗ ಕುಲಂಕುಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ- ವೆಂಕಟ್ ರಾಜಾ, ಜಿಲ್ಲಾಧಿಕಾರಿ