ಕನ್ನಡಪ್ರಭ ವಾರ್ತೆ ಶಹಾಪುರ
ಸಾಧನೆಗೆ ಬಡತನ ಶ್ರೀಮಂತಿಕೆ ಕಾರಣವಲ್ಲ. ನಿರಂತರ ಪರಿಶ್ರಮ ಹಾಗೂ ಸತತ ಪ್ರಯತ್ನವಿದ್ದರೆ ಉತ್ತಮ ಸಾಧನೆ ಮಾಡಬಹುದು. ಗುರಿ ಸಾಧಿಸುವ ಛಲ ಹಾಗೂ ಆತ್ಮ ವಿಶ್ವಾಸ ಇರಬೇಕೆಂದು ರಾಜ್ಯ ಸಪನ್ಮೂಲ ವ್ಯಕ್ತಿ ದೇವದುರ್ಗದ ರಮೇಶ ಬಲ್ಲಿದ ಹೇಳಿದರು.ನಗರದ ಸಾಯಿರಾಮ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಂತಾಗಬೇಕು. ಪುಸ್ತಕದಿಂದ ದೊರೆತ ಜ್ಞಾನ ನಮಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸಬಹುದು. ಅದೇ ರೀತಿ ನಾವು ಅಳವಡಿಸಿಕೊಳ್ಳುವ ಜೀವನ ಕೌಶಲ್ಯ ನಮಗೆ ಯಶಸ್ಸು ತಂದು ಕೊಡುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಡಾ.ವಿಶ್ವರಾಧ್ಯ ಶಿವಾಚಾರ್ಯರು ಬೃಹನ್ಮಠ ಮಾಗಣಗೇರಾ ಹಾಗೂ ವಿಶ್ವರಾಧ್ಯ ಸ್ವಾಮಿಗಳು ಜ್ಯೋತಿರ್ಲಿಂಗ ದೇವಸ್ಥಾನ ಅವರು ಆಶೀರ್ವಚನ ನೀಡಿದರು.ಕಾಲೇಜಿನ ಅಧ್ಯಕ್ಷ ಚನ್ನಣ್ಣಗೌಡ ಎಸ್.ಪಾಟೀಲ್ ಮಾತನಾಡಿ, ಸತತ 7 ವರ್ಷಗಳಿಂದ ನಮ್ಮ ಕಾಲೇಜು ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಫಲಿತಾಂಶ ನೀಡಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿ, ನಿಮ್ಮ ಮುಂದಿನ ವಿದ್ಯಾಭ್ಯಾಸದ ಜೀವನ ಯಶಸ್ಸಿನಿಂದ ಕೂಡಿರಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ. ಗದ್ದುಗೆ ಮತ್ತು ತಾಲೂಕು ಹಿಂದಳಿದ ವರ್ಗಗಳ ಕಲ್ಯಾಣಾಧಿಕಾರಿ ಚನ್ನಪ್ಪಗೌಡ ಚೌದರಿ ಮಾತನಾಡಿದರು.ಕಾಲೇಜಿನ ವತಿಯಿಂದ ಶರಣಗೌಡ ಪಾಟೀಲ್ ಹೇರುಂಡಿ ನಿವೃತ್ತ ಉಪನ್ಯಾಸಕರು ಹಾಗೂ ಶಿವಣ್ಣಗೌಡ ಎಸ್. ಪಾಟೀಲ್ ಶಿರವಾಳ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಮಹಾನಗರ ಪಾಲಿಕೆ ಕಲಬುರಗಿ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಎಂ.ಪಿ. ಸಾಸನೂರ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇದ್ದರು. ಉಪನ್ಯಾಸಕ ಮೌನೇಶ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.