ಸಿದ್ದರಬೆಟ್ಟದ ಶ್ರೀ ವೀರಭದ್ರ ಶ್ರೀ ಅಭಿಮತ । ಶ್ರೀ ಪ್ರಸನ್ನ ಪಾರ್ವತಿ ಮಲ್ಲೇಶ್ವರಸ್ವಾಮಿ ದೇಗುಲದಲ್ಲಿ ಶಿವ ಜಾಗರಣೆ
ಕನ್ನಡಪ್ರಭ ವಾರ್ತೆ ಮಧುಗಿರಿದೇವರ ಹೆಸರಿನಲ್ಲಿ ನಡೆಸುವ ಆಚಾರ - ವಿಚಾರಗಳು ಮನುಷ್ಯನ ಆರೋಗ್ಯ ರಕ್ಷಣೆಗೆ ಸಹಕಾರಿ, ಮಹಾಶಿವರಾತ್ರಿ ಆಚರಣೆಯಿಂದ ವೈಜ್ಞಾನಿಕವಾಗಿ ನಮಗೆ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಪ್ರಸನ್ನ ಪಾರ್ವತಿ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಕ್ತ ಮಂಡಳಿಯಿಂದ ಆಯೋಜಿಸಿದ್ದ ಶಿವರಾತ್ರಿ ಜಾಗರಣೆ ಆಚರಣೆ ಪ್ರಯುಕ್ತ ನಡೆದ ಮೂರನೇ ಯಾಮ ಪೂಜೆಯಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.ದಕ್ಷಿಣ ಮತ್ತು ಉತ್ತರ ಭಾರತದ ಶಿವರಾತ್ರಿ ಆಚರಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದರೂ ಆಧ್ಯಾತ್ಮಿಕ ರಕ್ಷಣೆ ಮತ್ತು ಹಾರೈಕೆಯ ದೃಷ್ಟಿಯಿಂದ ಉತ್ತಮ ಕಾರ್ಯ ನಿರ್ವಹಣೆಯಾಗುತ್ತದೆ. ಮಾಗಮಾಸ ಚತುರ್ದಶಿಯಂದು ಮಾತ್ರ ಮಹಾಶಿವರಾತ್ರಿ ಆಚರಿಸುತ್ತೇವೆ. ಅದೇ ಉತ್ತರ ಭಾರತದಲ್ಲಿ ಪ್ರತಿ ತಿಂಗಳೂ ಮಾಸ ಶಿವರಾತ್ರಿ ಆಚರಿಸುತ್ತಾರೆ.ಶಿವರಾತ್ರಿಯಂದು ಉಪವಾಸವಿದ್ದರೆ ಜಠರ ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಇದರ ಬಗ್ಗೆ ತಮ್ಮ ಅಬಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಾಶಿವರಾತ್ರಿ ಆಚರಣೆಯಿಂದ ನಮ್ಮ ಆರೋಗ್ಯ ಮತ್ತು ಮನಸ್ಸು ಪರಿಮಾಮಕಾರಿಯಾಗಿರಲು ಸಾಧ್ಯ ಎಂದರು.
ಶಿವಾರಾಧನೆ ಮಾಡುವುದರಿಂದ ಸಕಲ ಕಷ್ಟಗಳೂ ಪರಿಹಾರವಾಗುತ್ತವೆ. ವಿಷ್ಣುವೇ ರಾಕ್ಷಸನ ಸಂಹಾರಕ್ಕಾಗಿ ಶಿವನ ಮೊರೆ ಹೋಗಿ ಸುದರ್ಶನ ಚಕ್ರ ಪಡೆದಿದ್ದು ವಿಷ್ಣು ಪುರಾಣದಲ್ಲಿದೆ. ಭಕ್ತರಿಗೆ ಶೀಘ್ರ ವರ ನೀಡುವ ಶಿವನನ್ನು ದೇವಾನುದೇವತೆಗಳೇ ಪೂಜಿಸಿದ್ದಾರೆ. ರಾವಣ ಸಂಹಾರದ ವೇಳೆ ರಾಮನು ಲಿಂಗವನ್ನು ಪೂಜಿಸಿದ್ದು ಪ್ರಸ್ತುತ ರಾಮೇಶ್ವರವಾಗಿದೆ .ಶಿವನನ್ನು ಒಂದು ಬಿಲ್ವಪತ್ರೆಯಲ್ಲಿ ಪೂಜಿಸಿದರೆ ಸಾಕು, ನೂರು ಜನ್ಮಗಳ ಪಾಪ ನಿವಾರಣೆಯಾಗುತ್ತದೆ ಎಂದರು.ಪ್ರಸ್ತುತ ಸಾಕಷ್ಟು ಬಿಸಿಲು ಹೆಚ್ಚಿದ್ದು ಬರಗಾಲದಿಂದ ಪ್ರಾಣಿ - ಪಕ್ಷಿಗಳಿಗೆ ಕುಡಿವ ನೀರು ಸಿಗುತ್ತಿಲ್ಲ, ಕೆರೆ, ಕಟ್ಟೆ, ಕೊಳವೆಬಾವಿಗಳಲ್ಲಿ ನೀರು ಬತ್ತಿದ್ದು, ಭಕ್ತರು ಪ್ರಾಣಿ, ಪಕ್ಷಿಗಳಿಗೆ ನೀರು ಕೊಡುವುದರ ಜೊತೆಗೆ ಮುಂದಿನ ವರ್ಷವಾದರೂ ಉತ್ತಮ ಮಳೆ,ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ,ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಗೋವಿಂದರಾಜು,ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಶೇಕರ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್, ಪ್ರಧಾನ ಅರ್ಚಕ ನಟರಾಜ ಧೀಕ್ಷಿತ್, ವಿದ್ವಾನ್ ತುಮಕೂರಿನ ಕೆ.ಮನೋಹರ್ ಕುಮಾರ್, ಭಕ್ತ ಮಂಡಳಿಯ ಕೆ.ವಿ.ಮಂಜುನಾಥ ಗುಪ್ತ, ಎಸ್‌ವಿಎಲ್ ಶ್ರೀಧರ್, ಜಿ.ಆರ್.ಧನ್‌ಪಾಲ್, ದೋಲಿಬಾಬು, ಜಿ.ನಾರಾಯಣರಾಜು, ಎಸ್‌ಬಿಐ ಗೋಪಾಲ್, ಗಣೇಶ್, ಸುರೇಶ್, ಪುರಸಭೆ ಮಾಜಿ ಸದಸ್ಯ ರಘು ಯಾದವ್ ಇನ್ನೂ ಅನೇಕರಿದ್ದರು. ವೇದ ಬ್ರಹ್ಮ ನಾಗರಾಜಶಾಸ್ರ್ತಿ,ಯಾಮದ ಪೂಜಾ ಕೈಂಕರ್ಯಗಳನ್ನು ನಡೆಸಿ ಕೊಟ್ಟರು.