ಮಿಶ್ರ ಬೇಸಾಯ ಪದ್ಧತಿಯಿಂದ ಉತ್ತಮ ಆದಾಯ

KannadaprabhaNewsNetwork |  
Published : Aug 10, 2024, 01:39 AM IST
ಫೋಟೊ ಶೀರ್ಷಿಕೆ: 8ಆರ್‌ಎನ್‌ಆರ್3ರಾಣಿಬೆನ್ನೂರು ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಖುಷ್ಕಿ ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಬಹುವಾರ್ಷಿಕ ಮೇವಿನ ಬೆಳೆಗಳ ಪಾತ್ರ ಕುರಿತು ಹೊರ ಆವರಣ ತರಬೇತಿ ಜರುಗಿತು.  | Kannada Prabha

ಸಾರಾಂಶ

ರಾಣಿಬೆನ್ನೂರು ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಿಕ್ರಾ ಯೋಜನೆ ಅಡಿಯಲ್ಲಿ ಸುಸ್ಥಿರ ಆದಾಯಕ್ಕಾಗಿ ಖುಷ್ಕಿ ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಬಹುವಾರ್ಷಿಕ ಮೇವಿನ ಬೆಳೆಗಳ ಪಾತ್ರ ಕುರಿತು ಹೊರ ಆವರಣ ತರಬೇತಿ ನೀಡಲಾಯಿತು.

ರಾಣಿಬೆನ್ನೂರು: ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಿಕ್ರಾ ಯೋಜನೆ ಅಡಿಯಲ್ಲಿ ಸುಸ್ಥಿರ ಆದಾಯಕ್ಕಾಗಿ ಖುಷ್ಕಿ ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಬಹುವಾರ್ಷಿಕ ಮೇವಿನ ಬೆಳೆಗಳ ಪಾತ್ರ ಕುರಿತು ಹೊರ ಆವರಣ ತರಬೇತಿ ನೀಡಲಾಯಿತು.

ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ.ಎಸ್. ಮಾತನಾಡಿ, ನಿಕ್ರಾ ಯೋಜನೆಯಡಿ ಪರಿಶಿಷ್ಟ ಜಾತಿ ಉಪಯೋಜನೆಯನ್ನು ಆರಂಭಿಸಿದ್ದು, ಗ್ರಾಮದ ರೈತರು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಹವಾಮಾನ ವೈಪರಿತ್ಯ ಪರಿಸ್ಥಿತಿಯಲ್ಲಿ ರೈತರು ಮಿಶ್ರ ಬೇಸಾಯ ಪದ್ಧತಿ, ಬೆಳೆಗಳಿಗೆ ಪೋಷಕಾಂಶ ಸಿಂಪರಣೆ, ಖುಷ್ಕಿ ತೋಟಗಾರಿಕೆ ಬೆಳೆಗಳು, ಕೃಷಿ ಭೂಮಿಯಲ್ಲಿ ನೀರು, ತೇವಾಂಶ ಸಂರಕ್ಷಣಾ ಕ್ರಮಗಳು, ಪಶುಸಂಗೋಪನೆ ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರಿಂದ ಸಂಭಾವ್ಯ ನಷ್ಟವನ್ನು ಕಡಿಮೆಗೊಳಿಸಿ ಉತ್ತಮ ಆದಾಯ ಪಡೆಯಬಹುದು ಎಂದರು.

ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಎಚ್.ಎಂ. ಮಾತನಾಡಿ, ನುಗ್ಗೆ ಬೆಳೆಯ ಸುಧಾರಿತ ತಳಿಯಾದ ಭಾಗ್ಯ, ನಾಟಿ ಮಾಡಿದ 7ರಿಂದ 9 ತಿಂಗಳಲ್ಲಿ ಕಾಯಿ ಕಚ್ಚುವ ಗುಣ ಹೊಂದಿದೆ. ಸಾಮಾನ್ಯವಾಗಿ ಒಂದು ಗಿಡದಿಂದ 400 ಕಾಯಿಗಳು ಈಗಿನ ಮಾರುಕಟ್ಟೆ ದರದಂತೆ ₹ 1 ಬೆಲೆ ಇದ್ದರೂ ₹ 400 ಲಾಭ ಬರುತ್ತದೆ. ಅದರಂತೆ, ಪ್ರತಿ ಎಕರೆಗೆ 9*9 ಅಡಿ ಅಂತರದಲ್ಲಿ ಸುಮಾರು 450 ಗಿಡಗಳಂತೆ ನಾಟಿ ಮಾಡಿದಾಗ ₹1,80,000 ಒಟ್ಟು ಆದಾಯ ಪಡೆಯಬಹುದು. ಸುವಾಸಿನಿ ಕರಿಬೇವು ಸಸಿಗಳು ಎಲೆಗಳಲ್ಲಿ ಹೆಚ್ಚಿನ ಎಣ್ಣೆ ಅಂಶ ಹೊಂದಿದೆ ಹಾಗೂ ಸ್ಥಳೀಯ ತಳಿಗಳಿಗಿಂತ ಹೆಚ್ಚಿನ ಸುವಾಸನೆ ಹೊಂದಿರುವುದರಿಂದ ಎಲೆ ಚುಕ್ಕೆ ರೋಗಕ್ಕೆ ನಿರೋಧಕತೆಯನ್ನು ಪಡೆದಿದೆ. ಇಂತಹ ಬೆಳೆಗಳು ಸುಸ್ಥಿರ ಆದಾಯವನ್ನು ನೀಡುತ್ತವೆ. ಖುಷ್ಕಿ ತೋಟಗಾರಿಕೆ ಬೆಳೆಗಳು ಕಡಿಮೆ ಖರ್ಚಿನಲ್ಲಿ ರೈತರ ಆದಾಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು. ಕೇಂದ್ರದ ಪಶು ವಿಜ್ಞಾನಿ ಡಾ. ಮಹೇಶ ಕಡಗಿ ಮಾತನಾಡಿ, ಏಕದಳ ಮತ್ತು ದ್ವಿದಳ ಮೇವುಗಳನ್ನು ಜಾನುವಾರುಗಳಿಗೆ ಶೇ. 75 ಮತ್ತು 25ರ ಪ್ರಮಾಣದಲ್ಲಿ ನೀಡುವುದರಿಂದ ಅವುಗಳ ಆರೋಗ್ಯ ಸುಧಾರಿಸುವುದರೊಂದಿಗೆ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಾಗುತ್ತದೆ. ಬಹು ಕಟಾವಿನ ಮೇವಿನ ಜೋಳ (ಸಿ.ಒ.ಎಫ್.ಎಸ್-31) ಇದು ಒಂದು ಮಳೆಯಾಶ್ರಿತ ಮೇವಿನ ಬೆಳೆಯಾಗಿದ್ದು, ಸುಮಾರು 4-6 ವರ್ಷದ ವರೆಗೆ ಪ್ರತಿ ವರ್ಷಕ್ಕೆ ಸುಮಾರು 110-120 ಟನ್ ಪ್ರತಿ ಎಕರೆಗೆ ಹಸಿರು ಮೇವಿನ ಇಳುವರಿ ನೀಡಬಲ್ಲದು. ಬೇಲಿ ಮೆಂತೆ ಇದು ದ್ವಿದಳ ಬಹುವಾರ್ಷಿಕ ಬೆಳೆಯಾಗಿದ್ದು, ವರ್ಷಕ್ಕೆ 60-70 ಟನ್ ವರೆಗೆ ಇಳುವರಿಯನ್ನು ನೀಡಬಲ್ಲದು. ರೈತರು ಇವೆರಡು ಮೇವಿನ ಬೆಳೆಗಳಿಂದ ಉತ್ತಮವಾದ ಬೀಜೋತ್ಪಾದನೆಯನ್ನು ಕೈಗೊಂಡು ಇತರ ರೈತರಿಗೆ ನೀಡಬಹುದು. ಈ ಮೇವಿನ ಬೆಳೆಗಳ ಜತೆಗೆ ಮೇವಿನ ಚೊಗಚೆ ಮತ್ತು ನುಗ್ಗೆ ಮರಗಳನ್ನು ತಮ್ಮ ಹೊಲಗಳ ಬದುವಿನಲ್ಲಿ ಹಚ್ಚುವುದರಿಂದ ಉತ್ತಮವಾದ ಸಸಾರಜನಕಯುಕ್ತ ಮೇವನ್ನು ಪಡೆಯಬಹುದಾಗಿದೆ ಎಂದರು.

ನಿಕ್ರಾ ಯೋಜನೆ ಹಿರಿಯ ಸಂಶೋಧಕಿ ಡಾ. ಲಕ್ಷ್ಮೀ ಪಾಟೀಲ, ಹೊನ್ನಪ್ಪ ಗೌಡ್ರ, ನೀಲಪ್ಪ ಬಣಕಾರ ಹಾಗೂ ಗ್ರಾಮದ 30ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...