ಕಾಫಿ ನಾಡಲ್ಲಿ ಗಾರ್ಮೆಂಟ್ ಉದ್ಯಮಕ್ಕೆ ಶುಕ್ರ ದೆಸೆ

KannadaprabhaNewsNetwork | Published : Feb 16, 2024 1:48 AM

ಸಾರಾಂಶ

ಕಾಫಿಯ ನಾಡಲ್ಲಿ ಗಾರ್ಮೆಂಟ್ ಸ್ಥಾಪನೆ. - ಇದು, ರಾಜ್ಯ ಸರ್ಕಾರದ 2024-25ರ ರ ಬಜೆಟ್ ಘೋಷಣೆ ಅಲ್ಲ. ಆದರೆ, ಸದ್ದಿಲ್ಲದೆ ಗಾರ್ಮೆಂಟ್ ಉದ್ಯಮ ಜಿಲ್ಲೆಯಲ್ಲಿ ಜನ್ಮ ತಾಳುತ್ತಿದೆ. ಅಂದುಕೊಂಡಂತೆ ಚುರುಕಾಗಿ ಕಾಮಗಾರಿ ನಡೆದರೆ ಈ ವರ್ಷದಲ್ಲೇ ಸುಮಾರು 8 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಬೆಂಗಳೂರು, ಅರಸೀಕೆರೆ, ತುಮಕೂರುಗಳ ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡಲು ವಲಸೆ ಹೋಗಿರುವವರಿಗೆ ನಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ಸಿಗಲಿದೆ.

- 8 ಸಾವಿರ ಜನರಿಗೆ ಉದ್ಯೋಗ ಸೃಷ್ಟಿ । ಸರ್ಕಾರದಿಂದ 25 ಎಕರೆ ಮಂಜೂರು । ಚೀಲನಹಳ್ಳಿ, ನಯಾದಿಯತ್ ಕಾವಲ್‌ನಲ್ಲಿ ಗಾರ್ಮೆಂಟ್ ಉದ್ಯಮ। ಇನ್ನು 6 ತಿಂಗಳಲ್ಲಿ ಯೂನಿಟ್‌ಗಳ ಕಾಮಗಾರಿ ಪೂರ್ಣ,

ಆರ್. ತಾರಾನಾಥ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿಯ ನಾಡಲ್ಲಿ ಗಾರ್ಮೆಂಟ್ ಸ್ಥಾಪನೆ. - ಇದು, ರಾಜ್ಯ ಸರ್ಕಾರದ 2024-25ರ ರ ಬಜೆಟ್ ಘೋಷಣೆ ಅಲ್ಲ. ಆದರೆ, ಸದ್ದಿಲ್ಲದೆ ಗಾರ್ಮೆಂಟ್ ಉದ್ಯಮ ಜಿಲ್ಲೆಯಲ್ಲಿ ಜನ್ಮ ತಾಳುತ್ತಿದೆ. ಅಂದುಕೊಂಡಂತೆ ಚುರುಕಾಗಿ ಕಾಮಗಾರಿ ನಡೆದರೆ ಈ ವರ್ಷದಲ್ಲೇ ಸುಮಾರು 8 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಬೆಂಗಳೂರು, ಅರಸೀಕೆರೆ, ತುಮಕೂರುಗಳ ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡಲು ವಲಸೆ ಹೋಗಿರುವವರಿಗೆ ನಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ಸಿಗಲಿದೆ. ರಸ್ತೆ, ರೈಲ್ವೆ ಸಂಪರ್ಕ ಹೊಂದಿರುವ ಕಡೂರು ತಾಲೂಕು ಕೇಂದ್ರದಲ್ಲಿ ಎರಡು ಕಡೆಗಳಲ್ಲಿ ಗಾರ್ಮೆಂಟ್ ನಿರ್ಮಾಣ ಮಾಡಲು ಈಗಾಗಲೇ ಜಾಗ ಗುರುತು ಮಾಡಿರುವುದು ಅಷ್ಟೆ ಅಲ್ಲ, ಸರ್ಕಾರ ಜಾಗವನ್ನು ಸಹ ಮಂಜೂರು ಮಾಡಿದೆ. ಕಡೂರಿನ ಬಿ.ಎಚ್. ರಸ್ತೆಯಲ್ಲಿರುವ ನಯಾಧಿಯತ್‌ ಕಾವಲ್‌ನಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮ್ಯಾಫ್‌ (ಎಂಎಎಫ್‌) ಸಂಸ್ಥೆಗೆ ಗಾರ್ಮೆಂಟ್ ತೆರೆಯಲು 20 ಎಕರೆ ಜಾಗ ಮಂಜೂರು ಮಾಡಲಾಗಿದೆ. ಈ ಸಂಸ್ಥೆ 200 ಕೋಟಿ ಬಂಡವಾಳ ಹೂಡಲು ಪ್ಲಾನ್ ಮಾಡಿಕೊಂಡಿದೆ. ಇಲ್ಲಿ ಸುಮಾರು 6 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಸದ್ಯದಲ್ಲಿ ಉದ್ಯಮ ಸ್ಥಾಪನೆ ಪ್ರಕ್ರಿಯೆ ಆರಂಭವಾಗಲಿದ್ದು, ಇನ್ನೂ 6 ತಿಂಗಳೊಳಗೆ ಗಾರ್ಮೆಂಟ್ ಆರಂಭವಾಗಲಿದೆ. ಈ ಗಾರ್ಮೆಂಟ್ ಸಮೀಪದ ಚೀಲನಹಳ್ಳಿ ಸರ್ವೆ ನಂಬರ್ 53 ರಲ್ಲಿ 13 ಎಕರೆ, ಸರ್ವೆ ನಂಬರ್ 54 ರಲ್ಲಿ 12 ಎಕರೆ ಜಾಗ ಗಾರ್ಮೆಂಟ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕಳೆದ ಜನವರಿ 10 ರಂದು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯಿಂದ ಕೈಮಗ್ಗ ಮತ್ತು ಜವಳಿ ಇಲಾಖೆಗೆ ಈ ಜಾಗ ಹಸ್ತಾಂತರ ಆದ ನಂತರ ಗಾರ್ಮೆಂಟ್ ಉದ್ಯಮಿ ಗಳಿಗೆ ತಲಾ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಟ 6 ತಿಂಗಳಾದರೂ ಬೇಕು. ಹೀಗೆ ಎರಡು ಕಡೆಗಳಲ್ಲಿ ಗಾರ್ಮೆಂಟ್ ನಿರ್ಮಾಣಗೊಂಡರೆ ಸುಮಾರು 8 ಸಾವಿರ ಜನರಿಗೆ ಸ್ಥಳೀಯವಾಗಿ ಉದ್ಯೋಗ ಸಿಗಲಿದೆ. 2024 ರ ವರ್ಷದಲ್ಲಿ ಗಾರ್ಮೆಂಟ್ ಉದ್ಯಮಕ್ಕೆ ಶುಕ್ರದೆಸೆ ವರ್ಷವಾಗಲಿದೆ.

ಬೇಡಿಕೆ: ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಮಳೆ ಅವಲಂಬಿತ ತಾಲೂಕುಗಳು. ಇಲ್ಲಿನ ಜನರ ಜೀವನ ಹೋರಾಟದ ಬದುಕಾಗಿರುತ್ತದೆ. ಮಳೆ ಇಲ್ಲದೆ ಬೆಳೆ ಮಾತ್ರ ಅಲ್ಲ ಕುಡಿಯುವ ನೀರಿನ ಸಮಸ್ಯೆಗಳು ಕೂಡ ಗಂಭೀರ ವಾಗಿರುತ್ತವೆ. ಈ ರೀತಿ ವಾತಾವರಣದಲ್ಲಿ ಇಂದಿನ ಯುವ ಪೀಳಿಗೆ ಬದುಕಲು ಇಷ್ಟಪಡುವುದಿಲ್ಲ. ಹಾಗಾಗಿ ಹಲವು ಮಂದಿ ಯುವಕ, ಯುವತಿಯರು ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಕೆಲವು ಮನೆಗಳಲ್ಲಿ ವಯೋವೃದ್ಧ ತಂದೆ ತಾಯಿಗಳು ಮಾತ್ರ ಇದ್ದಾರೆ. ಕೋವಿಡ್ ಸಂದರ್ಭದಲ್ಲಿ ಗಾರ್ಮೆಂಟ್ ಕಂಪನಿಗಳು ಮುಚ್ಚಿದ್ದರಿಂದ ಸಾವಿರಾರು ಮಂದಿ ತಮ್ಮ ಗ್ರಾಮಗಳಿಗೆ ವಾಪಸ್ ಆಗಿದ್ದರು. ಲಾಕ್ ಡೌನ್ ಸಡಿಲಗೊಂಡು ಉದ್ಯಮಗಳು ಪುನಾರಂಭಗೊಂಡ ಬಳಿಕ ಬಯಲುಸೀಮೆ ಜನರು ಮರಳಿ ಬೆಂಗಳೂರಿಗೆ ಪಯಣ ಬೆಳೆಸಿದರು. ಕಡೂರು ಹಾಗೂ ತರೀಕೆರೆ ತಾಲೂಕುಗಳ ಸುಮಾರು 5 ಸಾವಿರ ಜನ ಬೆಂಗಳೂರು, ಅರಸೀಕೆರೆ, ತುಮಕೂರು ಗಳಲ್ಲಿರುವ ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಡೂರಿನಲ್ಲಿಯೇ ಗಾರ್ಮೆಂಟ್ ತೆರೆದರೆ ಅವರಿಗೆ ಸ್ಥಳೀಯವಾಗಿ ಕೆಲಸ ಸಿಗುವ ಜತೆಗೆ ವಯೋವೃದ್ಧ ತಂದೆ, ತಾಯಿಗೆ ಆಶ್ರಯವಾಗಿರುತ್ತಾರೆ. ಈಗಾಗಲೇ ಟೈಲರಿಂಗ್ ತರಬೇತಿ ಪಡೆದು ಮನೆಯಲ್ಲಿರುವ ಮಹಿಳೆಯರಿಗೂ ಕೂಡ ಗಾರ್ಮೆಂಟ್‌ಗಳಲ್ಲಿ ಉದ್ಯೋಗ ಲಭ್ಯವಾಗಲಿದೆ. ---- ಬಾಕ್ಸ್ ---ಗಾರ್ಮೆಂಟ್ ತೆರೆಯಲು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಕಡೂರು ತಾಲೂಕಿನ ಚೀಲನಹಳ್ಳಿಯಲ್ಲಿ 25 ಎಕರೆ ಮಂಜೂರು ಮಾಡಿದೆ. ಸದ್ಯದಲ್ಲೇ ಜಿಲ್ಲಾಧಿಕಾರಿ ಈ ಕುರಿತು ಆದೇಶ ಹೊರಡಿಸಲಿದ್ದಾರೆ. ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ದೇಶಕರು ಇತ್ತೀಚೆಗೆ ಚಿಕ್ಕಮಗಳೂರಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜಾಗದ ಹಸ್ತಾಂತರ ಪ್ರಕ್ರಿಯೆ ಆರಂಭವಾಗಬೇಕಾಗಿದೆ.

- ಇ.ಇ. ಅಶೋಕ್ ಸಹಾಯಕ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ

ಪೋಟೋ ಫೈಲ್ ನೇಮ್ 15 ಕೆಸಿಕೆಎಂ 1

Share this article