ಕವಿ ಪ್ರತಿಭಟನಾಕಾರನಾಗದೇ ಒಳ್ಳೆಯ ಕವಿತೆ ಹುಟ್ಟಲಾರದು: ಮನೋಜ್ ಬೊಗಾಟೆ

KannadaprabhaNewsNetwork |  
Published : Feb 13, 2025, 12:45 AM IST
ಬಳ್ಳಾರಿಯ ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ‘ಸಮಕಾಲೀನ ಕಾವ್ಯ ಮತ್ತು ಸಂವೇದನೆ ‘ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾರ್ಜಲಿಂಗಿನ ನೇಪಾಳಿ ಭಾಷೆಯ ಕವಿ ಮನೋಜ್ ಬೊಗಾಟೆ ಮಾತನಾಡಿದರು.  | Kannada Prabha

ಸಾರಾಂಶ

ಕವಿ ಪ್ರತಿಭಟನಾಕಾರನಾಗದೇ ಒಳ್ಳೆಯ ಕವಿತೆ ಹುಟ್ಟಲಾರದು. ಹುಟ್ಟಿದರೂ ಅದಕ್ಕೆ ಸಾಮಾಜಿಕ ಜವಾಬ್ದಾರಿ ಇರದು

ಬಳ್ಳಾರಿ: ಕವಿ ಪ್ರತಿಭಟನಾಕಾರನಾಗದೇ ಒಳ್ಳೆಯ ಕವಿತೆ ಹುಟ್ಟಲಾರದು. ಹುಟ್ಟಿದರೂ ಅದಕ್ಕೆ ಸಾಮಾಜಿಕ ಜವಾಬ್ದಾರಿ ಇರದು ಎಂದು ಡಾರ್ಜಿಲಿಂಗ್‌ನ ನೇಪಾಳಿ ಕವಿ ಮನೋಜ್ ಬೊಗಾಟೆ ಅಭಿಪ್ರಾಯಪಟ್ಟರು.

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜೆನ ಸಭಾಂಗಣದಲ್ಲಿ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ಸಮಕಾಲೀನ ಕಾವ್ಯ ಮತ್ತು ಸಂವೇದನೆ ವಿಷಯ ಕುರಿತು ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಂಕಣಿ ಭಾಷೆಯ ಕವಿ ವಿಲ್ಸನ್ ಕಟೀಲ್ ಹೇಳುವಂತೆ, ಈ ಹೊತ್ತಿನ ಕಾಲದಲ್ಲಿ ಕವಿ ಪ್ರತಿಭಟನಾಕಾರನಾಗಬೇಕಿದೆ. ಕಾವ್ಯವೇ ಒಂದು ಪ್ರತಿಭಟನೆ ಮತ್ತು ಪ್ರತಿರೋಧವಾಗಿದೆ. ತಾಯಿಯ ಕರಳು ಬಳ್ಳಿಯಂತಿರುವ ಕಾವ್ಯದ ಭಾಷೆಗೆ ಯಾವುದೇ ಗಡಿಗಳಿಲ್ಲ. ನಮ್ಮೆಲ್ಲರನ್ನು ಅರ್ಥಪೂರ್ಣವಾಗಿ ಬೆಸೆಯುವ ಶಕ್ತಿ ಕಾವ್ಯಕ್ಕಿದೆ. ಪ್ರೇಮ, ಸಿಟ್ಟು, ಆಕ್ರೋಶ, ಪ್ರತಿರೋಧ ಇವೆಲ್ಲವೂ ಸಮಕಾಲೀನ ಕಾವ್ಯದಲ್ಲಿ ಹಾಸುಹೊಕ್ಕಾಗಿವೆ. ಕಾವ್ಯ ಸುತ್ತಲಿನ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಮಾನವೀಯ ಗುಣಗಳಿಂದ ನಮ್ಮನ್ನು ಮನುಷ್ಯರನ್ನಾಗಿಸುತ್ತದೆ ಎಂದು ಪ್ರತಿಪಾದಿಸಿದರು.

ಸಾಮಾಜಿಕ ಜಾಲತಾಣಗಳ ವರ್ತಮಾನದ ಕಾಲದಲ್ಲಿ ಬರೀ ಪುಸ್ತಕಗಳ ಮಾರಾಟದಿಂದ ಓದುಗರನ್ನು ಅಳೆಯಲಾಗದು. ಇವತ್ತು ಬೇರೆ ಬೇರೆ ಮಾಧ್ಯಮಗಳ ಮುಖಾಂತರ ಕಾವ್ಯ ಜನರನ್ನು ತಲುಪುತ್ತಿದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಕವಿ ಮನೋಜ್ ಬೊಗಾಟೆ ವಿಶ್ಲೇಷಿಸಿದರು.

ಕನ್ನಡದ ಕವಿ ಆರಿಫ್ ರಾಜ ಮಾತನಾಡಿ, ಇಂದು ಕವಿತೆ ಪ್ರಕಟಿಸುವ ವಿಧಾನ ತುಂಬ ಬದಲಾಗಿದೆ. ಪತ್ರಿಕೆ, ಪುಸ್ತಕಕಷ್ಟೇ ಸೀಮಿತವಾಗಿದ್ದ ಕವಿತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹೊಸ ತಲೆಮಾರಿನ ಯುವ ಮನಸುಗಳಾದ ನೀವು ಶ್ರೇಷ್ಠ ಸಾಹಿತ್ಯವನ್ನು ಅಧ್ಯಯನ ಮಾಡುವುದರ ಜೊತೆಗೆ ಕಾವ್ಯದೊಂದಿಗೆ ಮುಖಾಮುಖಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರಾಲಿ ಮಾತನಾಡಿ, ಭಾರತದ ಒಳಗಡೆ ವಲಸೆ, ನಿರಾಶ್ರಿತ, ಹಸಿದ, ನೊಂದವರ ಹೀಗೆ ಹಲವು ಭಾರತಗಳಿವೆ. ಅವರ ಸಂಕಷ್ಟಗಳನ್ನು ಇಂದಿನ ಕವಿತೆ ದನಿಯಾಗಿಸಿಕೊಂಡು ಸಾಗುತ್ತಿರುವುದು ಸಂತಸದ ಸಂಗತಿ ಎಂದರು.

ಪ್ರಾಂಶುಪಾಲ ಡಾ.ಪ್ರಹ್ಲಾದ ಚೌದ್ರಿ, ಕನ್ನಡ ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ, ಡಾ.ಹುಚ್ಚುಸಾಬ್ ಇದ್ದರು. ಲೇಖಕರಾದ ವೀರೇಂದ್ರ ರಾವಿಹಾಳು, ವಿ.ಬಿ.ಮಲ್ಲಪ್ಪ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಳಿಕ ವಿದ್ಯಾರ್ಥಿಗಳು ಕವಿ ಮನೋಜ್ ಬೊಗಾಟೆಯೊಂದಿಗೆ ಸಂವಾದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ