ಉತ್ತಮ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

KannadaprabhaNewsNetwork | Published : Jun 15, 2024 1:07 AM

ಸಾರಾಂಶ

ಅಫಜಲ್ಪುರ ತಾಲೂಕಿನಲ್ಲಿ ಮೇ ತಿಂಗಳು ಎರಡು ಮೂರು ಬಾರಿ ಉತ್ತಮ ಮಳೆ ಸುರಿದಿದೆ.ಮುಂಗಾರು ಪೂರ್ವದ ಮಳೆಯ ಸಿಂಚನದಿಂದ ಕಳೆದ ಬಾರಿ ಅನಾವೃಷ್ಟಿಯಿಂದ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಬಿಂದುಮಾಧವ ಮಣ್ಣೂರ

ಕನ್ನಡಪ್ರಭ ವಾರ್ತೆ ಅಫಜಲ್ಪುರ

ತಾಲೂಕಿನಲ್ಲಿ ಮೇ ತಿಂಗಳು ಎರಡು ಮೂರು ಬಾರಿ ಉತ್ತಮ ಮಳೆ ಸುರಿದಿದೆ.ಮುಂಗಾರು ಪೂರ್ವದ ಮಳೆಯ ಸಿಂಚನದಿಂದ ಕಳೆದ ಬಾರಿ ಅನಾವೃಷ್ಟಿಯಿಂದ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಜೋರು ಪಡೆದುಕೊಂಡಿವೆ.ಕೊಟ್ಟಿಗೆಯಲ್ಲಿದ್ದ ಎತ್ತುಗಳು,ಉಳುಮೆ ಸಾಮಗ್ರಿಗಳು ಜಮೀನಿನಲ್ಲಿ ಕಾಣತೊಡಗಿವೆ.

ಒಣ ಬೇಸಾಯ (ಖುಷ್ಕಿ) ಜಮೀನುಗಳಲ್ಲಿ ಈಗಾಗಲೇ ಶೇ 80ರಷ್ಟು ಹದಗೊಳಿಸುವ ಕಾರ್ಯ ಪೂರ್ಣಗೊಂಡಿವೆ.ಜಮೀನಿನ ಅಲ್ಲಲ್ಲಿ ಬೆಳೆದಿದ್ದ ಕಳೆಯನ್ನು ತೆಗೆದಿರುವ ರೈತರು ಭೂಮಿಯನ್ನು ಅಂದವಾಗಿಸಿದ್ದಾರೆ.

ಎರಡ್ಮೂರು ದಿನ ಮಳೆ ಬಿಡುವು ನೀಡಿದರೆ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಆರಂಭವಾಗಲಿದೆ ಈಗಾಗಲೇ ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪೂರೈಕೆ ನಡೆದಿದೆ. ಖಾಸಗಿ ವರ್ತಕರಲ್ಲೂ ಬಿತ್ತನೆ ಬೀಜದ ವ್ಯಾಪಾರ ನಡೆದಿದೆ.

ತಾಲೂಕಿನಲ್ಲಿ ಮುಂಗಾರು ಬಿತ್ತನೆಯ ಭೌಗೋಳಿಕ ವಿಸ್ತೀರ್ಣ 1.30479 ಹೆಕ್ಟೇರ್ ಇದ್ದು ಇದರಲ್ಲಿ 1.10590 ಹೆಕ್ಟೇರ್ ಸಾಗುವಳಿ ವಿಸ್ತೀರ್ಣ ಇದೆ

.ಪ್ರಸಕ್ತ ಸಾಲಿನಲ್ಲಿ 1.06220 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 69300 ಹೆಕ್ಟೇರ್ ತೊಗರಿ ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ ವರ್ಷ 69554 ಹೆಕ್ಟೇರ್ ಗುರಿ ಹೊಂದಲಾಗಿತ್ತು.ಪ್ರಸಕ್ತ ಸಾಲಿನಲ್ಲಿ 254 ಹೆಕ್ಟೇರ್ ತೊಗರಿ ಬಿತ್ತನೆ ಗುರಿ ಕಡಿಮೆಯಾಗಿದೆ.

ಪ್ರಸಕ್ತ ಸಾಲಿನಲ್ಲಿ 20050 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ ವರ್ಷ 13306 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 6744 ಹೆಕ್ಟೇರ್ ಹತ್ತಿ ಬಿತ್ತನೆ ಕ್ಷೇತ್ರ ಹೆಚ್ಚಾಗಿದೆ. ಪ್ರಸಕ್ತ ಸಾಲಿನಲ್ಲಿ 12800 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ನಾಟಿ ಮಾಡುವ ಗುರಿ ಹೊಂದಲಾಗಿದೆ. ಕಳೆದ ವರ್ಷ 28554 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ನಾಟಿ ಮಾಡುವ ಗುರಿ ಹೊಂದಲಾಗಿತ್ತು. ಈ ಬಾರಿ 15744 ಹೆಕ್ಟೇರ್ ಕಬ್ಬು ನಾಟಿ ಮಾಡುವ ಕ್ಷೇತ್ರ ಕಡಿಮೆಯಾಗಿದೆ. ಪ್ರಸಕ್ತ ಸಾಲಿನಲ್ಲಿ 4070 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಹೆಸರು ಸೋಯಾಬಿನ್ ಅಲಸಂದಿ ಶೇಂಗಾ ಬಿತ್ತನೆ ಗುರಿ ಹೊಂದಲಾಗಿದೆ.

ತಾಲೂಕಿನಲ್ಲಿ 667.3 ಮಿಲಿ ಮೀಟರ್ ವಾರ್ಷಿಕ ಮಳೆಯಾಗಬೇಕಾಗಿದೆ. ಜನೇವರಿ 1ರಿಂದ ಮೇ 31ರ ವರೆಗೆ 59.9 ಮಿಲಿ ಮೀಟರ್ ಮಳೆ ಆಗಬೇಕಾಗಿತ್ತು. ಆದರೆ 108 ಮಿಲಿ ಮೀಟರ್ ಮಳೆಯಾಗಿದೆ. ವಾಡಿಕೆಗಿಂತ 48.8 ಮಿಲಿ ಮೀಟರ್ ಜಾಸ್ತಿ ಮಳೆಯಾಗಿದೆ.

ತಾಲೂಕಿನ ಕರಜಗಿ ಅತನೂರ ಅಫಜಲ್ಪುರ ಗೊಬ್ಬೂರ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ ಹೆಸರು ಉದ್ದು ದಾಸ್ತಾನು ಲಭ್ಯವಿದೆ ಸಜ್ಜೆ ಶೇಂಗಾ ಸೋಯಾಬಿನ್ ಸೂರ್ಯಕಾಂತಿ ಮೆಕ್ಕೆಜೋಳ ಬೀಜಗಳು ಶೀಘ್ರದಲ್ಲಿಯೇ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ದೊರೆಯಲಿವೆ. ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್ ಐಡಿ ಸಂಖ್ಯೆ ತೋರಿಸಿ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಬಹುದು. ತಾಲೂಕಿನ ಮೂರು ಕೃಷಿ ಕೇಂದ್ರಗಳಲ್ಲಿ ಎಲ್ಲಾ ಬಿತ್ತನೆ ಬೀಜಗಳ ದಾಸ್ತಾನು ಲಭ್ಯವಿದ್ದು ರೈತರು ತಮ್ಮ ಎಫ್ ಐಡಿ ಸಂಖ್ಯೆ ತೋರಿಸಿ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Share this article