ಉತ್ತಮ ಮಳೆ, ಭರದಿಂದ ಸಾಗಿದೆ ಭತ್ತ ನಾಟಿ ಕಾರ್ಯ

KannadaprabhaNewsNetwork | Published : Aug 8, 2024 1:38 AM

ಸಾರಾಂಶ

ತಾಲೂಕಿನ ೧೦ ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ನಾಟಿ ಕಾರ್ಯ ಭರದಿಂದ ನಡೆಯುತ್ತಿದೆ. ಭತ್ತದ ಕಣಜವಾಗಿದ್ದ ಹಾನಗಲ್ಲ ತಾಲೂಕಿನಲ್ಲಿ ಗೋವಿನ ಜೋಳ ಮುನ್ನಡೆ ಸಾಧಿಸಿದ್ದರೂ ಒಂದೂವರೆ ತಿಂಗಳ ಮಳೆಗೆ ಜೌಗು ಹಿಡಿದು ಚೇತರಿಸಿಕೊಳ್ಳದ ಸ್ಥಿತಿಯಲ್ಲಿದೆ. ಇಲ್ಲಿ ಜುಲೈ ತಿಂಗಳಿನ ವಾಡಿಕೆ ಮಳೆ ೨೯೯ ಮಿಮೀ, ಆದರೆ ಬಿದ್ದ ಮಳೆ ೫೦೪ ಮಿಮೀ, ಸರಾಸರಿ ೧೬೮ ಮಿಮೀ ಆಗಿದೆ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ತಾಲೂಕಿನ ೧೦ ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ನಾಟಿ ಕಾರ್ಯ ಭರದಿಂದ ನಡೆಯುತ್ತಿದೆ. ಭತ್ತದ ಕಣಜವಾಗಿದ್ದ ಹಾನಗಲ್ಲ ತಾಲೂಕಿನಲ್ಲಿ ಗೋವಿನ ಜೋಳ ಮುನ್ನಡೆ ಸಾಧಿಸಿದ್ದರೂ ಒಂದೂವರೆ ತಿಂಗಳ ಮಳೆಗೆ ಜೌಗು ಹಿಡಿದು ಚೇತರಿಸಿಕೊಳ್ಳದ ಸ್ಥಿತಿಯಲ್ಲಿದೆ. ಇಲ್ಲಿ ಜುಲೈ ತಿಂಗಳಿನ ವಾಡಿಕೆ ಮಳೆ ೨೯೯ ಮಿಮೀ, ಆದರೆ ಬಿದ್ದ ಮಳೆ ೫೦೪ ಮಿಮೀ, ಸರಾಸರಿ ೧೬೮ ಮಿಮೀ ಆಗಿದೆ.ಅರೆ ಮಲೆನಾಡಾಗಿರುವ ಹಾನಗಲ್ಲ ತಾಲೂಕಿನಲ್ಲಿ ಶೇಕಡಾ ೬೦ಕ್ಕೂ ಅಧಿಕ ಕೃಷಿ ಭೂಮಿಯಲ್ಲಿ ಭತ್ತದ ಬಿತ್ತನೆ ನಾಟಿಯಾಗುತ್ತಿತ್ತು. ಇಲ್ಲಿ ೪೭ ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. ಆದರೆ ಎರಡು ದಶಕಗಳಿಂದ ಭತ್ತದ ಪ್ರದೇಶವನ್ನು ಗೋವಿನ ಜೋಳ ಆಕ್ರಮಿಸಿದೆ. ಇದಕ್ಕೆ ಕಾರಣ ಮಳೆಯ ಕೊರತೆ. ಹಾನಗಲ್ಲ ತಾಲೂಕಿನಲ್ಲಿ ಹರಿದ ಧರ್ಮಾ ಹಾಗೂ ವರದಾ ನದಿಗಳನ್ನು ಅವಲಂಬಿಸಿ ನೀರಾವರಿ ಮೂಲಕ ಭತ್ತದ ಬಿತ್ತನೆ ನಾಟಿ ನಡೆಯುತ್ತಿತ್ತು. ಎಲ್ಲದಕ್ಕೂ ಮುಖ್ಯವಾಗಿ ಹಾನಗಲ್ಲ ತಾಲೂಕಿನಲ್ಲಿ ೭ ನೂರಕ್ಕೂ ಅಧಿಕ ನೀರಾವರಿ ಕೆರೆಗಳಿವೆ. ನೂರಾರು ಎಕರೆಯಿಂದ ಒಂದು ಎಕರೆವರೆಗೂ ಈ ಕೆರೆಗಳಿವೆ. ತಾಲೂಕಿನಲ್ಲಿ ಸಾವಿರಾರು ಕೊಳವೆ ಬಾವಿಗಳಿವೆ. ಆದರೆ ಮಳೆ ಕೊರತೆಯಿಂದ ಕೆರೆಯಲ್ಲಿ ನೀರಿಲ್ಲ. ಕೊಳವೆಬಾವಿಗಳು ಬತ್ತುತ್ತಿವೆ. ನದಿಗಳು ಹರಿಯುತ್ತಿಲ್ಲ ಎಂಬ ಕಾರಣಕ್ಕಾಗಿ ರೈತರು ಕಡಿಮೆ ಮಳೆ ಆಶ್ರಯದ ಗೋವಿನ ಜೋಳವನ್ನು ಆಶ್ರಯಿಸಿದರು. ಈಗ ಹಾನಗಲ್ಲ ತಾಲೂಕಿನಲ್ಲಿ ಕೇವಲ ೭ ಸಾವಿರ ಹೆಕ್ಟೇರ್ ಭತ್ತ ಬಿತ್ತನೆಯಾಗಿದೆ. ಆದರೆ ೨೬೩೧೭ ಹೆಕ್ಟೇರ್‌ನಲ್ಲಿ ಗೋವಿನ ಜೋಳ ಬಿತ್ತನೆಯಾಗಿದೆ. ಆದಾಗ್ಯೂ ಹಾನಗಲ್ಲ ತಾಲೂಕಿನಲ್ಲಿ ೧೦ ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭತ್ತದ ನಾಟಿ ನಡೆಯುತ್ತಿದೆ. ಇನ್ನು ಕೇವಲ ೨೧೫೦ ಹೆಕ್ಟೇರನಷ್ಟು ನಾಟಿ ಕಾರ್ಯ ಉಳಿದಿದೆ. ಇದು ಬಹುತೇಕ ವರದಾ, ಧರ್ಮಾ ನದಿ ಹಾಗೂ ಕೊಳವೆ ಬಾವಿಗಳನ್ನು ಅವಲಂಬಿಸಿದೆ. ಅದರೊಂದಿಗೆ ಬಸಾಪುರ, ಬಾಳಂಬೀಡ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆಗಳು ಸಹಕಾರಿಯಾಗಿವೆ. ಹೊಸ ಬಾಳಂಬೀಡ ಹಾಗೂ ಹಿರೆಕಾಂಸಿ ಯೋಜನೆಯಿಂದಾಗಿ ಬಹುಪಾಲು ಕರೆಗೆಗಳು ತುಂಬಿವೆ. ಮಳೆಯಿಂದ ತುಂಬಬೇಕಾದ ಬಹುತೇಕ ನೀರಾವರಿ ಕೆರೆಗಳು ಈವರೆಗೂ ತುಂಬಿಲ್ಲ. ಮುಂಗಾರಿನಲ್ಲಿ ದೊಡ್ಡ ಮಳೆ ಬೀಳದಿರುವುದು ಹಾಗೂ ಒಂದೂವರೆ ತಿಂಗಳಿನಿಂದ ಹಿಡಿದು ಮಳೆ ದೊಡ್ಡ ಪ್ರಮಾಣದಲ್ಲಿ ಇರದೇ ಇರುವುದು ಮುಖ್ಯ ಕಾರಣ.ಇಲ್ಲಿನ ಭತ್ತದ ಬೆಳೆಯನ್ನು ಅವಲಂಬಿಸಿ ಹೆಚ್ಚು ಅಕ್ಕಿ ಮಿಲ್ಲುಗಳು ಇದ್ದವು. ಭತ್ತದ ವ್ಯಾಪಾರಸ್ಥರ ಸಂಖ್ಯೆಯೂ ಅತಿ ಹೆಚ್ಚು ಇತ್ತು. ಆದರೀಗ ಇಲ್ಲಿ ಗೋವಿನ ಜೋಳದ ವ್ಯಾಪಾರಕ್ಕೆ ಹೆಚ್ಚು ಬೆಲೆ ಬಂದಿದೆ. ಭತ್ತದ ವ್ಯಾಪಾರ ಗೌಣವಾಗಿದೆ.ಈ ಬಾರಿ ಅತ್ಯುತ್ತಮ ಮಳೆ ಬಂದಿದೆ. ಭತ್ತದ ಬೆಳೆಗೆ ಯಾವುದೇ ತೊಂದರೆಯಾಗದು. ಈ ಭತ್ತದ ನಾಟಿ ಮಾಡುತ್ತಿರುವ ಕ್ಷೇತ್ರ ಬಹುತೇಕ ನೀರಿನ ನಿರೀಕ್ಷೆ ಇರುವ ಪ್ರದೇಶಗಳಲ್ಲೇ ನಡೆಯುತ್ತಿದೆ. ನದಿಗಳು, ಕೊಳವೆ ಬಾವಿಗಳು, ಕೆರೆಗಳನ್ನು ಅವಲಂಬಿಸಿದೆ. ಅಲ್ಲದೆ ಮಳೆಯಿಂದ ಅಂತರ್ಜಲ ಮರುಪೂರಣವೂ ಆಗಿರುವುದರಿಂದ ಕೊಳವೆ ಬಾವಿಗಳನ್ನು ಬಳಸಿಯೂ ಭತ್ತದ ನಾಟಿ ನಡೆಯುತ್ತಿದೆ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಕೆ. ಮೋಹನಕುಮಾರ ಹೇಳಿದರು.

Share this article