ಬೀಜ ಮೇಳ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿ ಪರ ರೈತ
ಮಳೆಯನ್ನೇ ನಂಬಿ ಬೆಳೆಯುವ ಬದಲು ಒಣ ಬೇಸಾಯ ವ್ಯವಸ್ಥೆಯಿಂದ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ಈ ನಿಟ್ಟಿನತ್ತ ರೈತರು ಚಿಂತನೆ ನಡೆಸಿ ಆಗುತ್ತಿರುವ ನಷ್ಟ ತಪ್ಪಿಸಬಹುದು ಎಂದು ಪ್ರಗತಿ ಪರ ರೈತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೋಮನಾಥ ರೆಡ್ಡಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಇಕ್ರಾ ಸಂಸ್ಥೆ ಮತ್ತು ಭೂಮಿ ಮಿತ್ರ ಸಾವಯವ ರೈತರ ಒಕ್ಕೂಟ ಆಯೋಜಿಸಿದ್ದ ಬೀಜ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.ರೈತರು ಭೂಮಿಯಲ್ಲಿ ಒಂದೇ ಬೆಳೆ ಬೆಳೆಯದೇ ಮಿಶ್ರ ಬೆಳೆ ಬೆಳೆಯಬೇಕು. ಕ್ರಮೇಣ ಬದಲಾದ ವಾತಾವರಣ, ಅತಿಯಾದ ಅಥವಾ ವಿರಳವಾದ ಮಳೆಯಿಂದ ಸಹಜ ಬೆಳೆಯೇ ಇಲ್ಲವಾಗಿ ಅಸಹಜ ಬೆಳೆಯೇ ಪ್ರಾಮುಖ್ಯತೆ ಪಡೆಯುತ್ತಿದೆ. ಮಳೆ ನಂಬಿ ಕೃಷಿಗಾಗಿ ರೈತರು ಹೆಚ್ಚು ವೆಚ್ಚ ಮಾಡದೇ ಒಣ ಬೇಸಾಯ ಪದ್ಧತಿಯನ್ನು ರೂಢಿ ಮಾಡಿಕೊಳ್ಳಬೇಕು. ತೊಗರಿ ಇತರೆ ಬೆಳೆಗಳು ಬೆಳೆಯುತ್ತಿರುವಾಗ ಕುಡಿ ಚಿವುಟುತ್ತಿದ್ದರೆ ಅಧಿಕ ಇಳುವರಿ ಸಿಗುತ್ತದೆ. ಸಾಮಾನ್ಯವಾಗಿ ಬೆಳೆದರೆ ಇಳುವರಿ ಕಡಿಮೆಯಾಗಿ ಲಾಭ ಇಲ್ಲವಾಗುತ್ತದೆ. ನಾನು ಇಂದಿಗೂ ಒಣ ಬೇಸಾಯ ಪದ್ಧತಿಯಲ್ಲಿ ಉತ್ತಮ ಬೆಳೆ ತೆಗೆದು ಅಧಿಕ ಲಾಭ ಪಡೆಯುತ್ತಿರುವೆ ಎಂದರು.
ಮತ್ತೊಬ್ಬ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹುಲಿಕೆರೆಯ ವಿಶ್ವೇಶ್ವರ ಸಜ್ಜನ್ ಮಾತನಾಡಿ, ಕಳೆದು ಹೋದ ಜವಾರಿ ಬೀಜೋತ್ಪಾದನೆ ಗತ ಕಾಲ ಮತ್ತೆ ಬರುವಂತಾಗುವಲ್ಲಿ ನಾರೀಶಕ್ತಿಯೇ ಕಾರಣ. ನಾಲ್ಕು ತಿಂಗಳು ಶ್ರಮ ವಹಿಸಿ ಗಿಡ ಬೆಳೆಸಿದರೆ ನೂರಾರು ವರ್ಷ ಕಾಲ ಅದು ಫಲ ನೀಡುತ್ತದೆ. ಹವಾಮಾನ ವೈಪರೀತ್ಯಗಳಿಗೆ ಹೊಂದಿಕೊಂಡು ಬೆಳೆಯುವ ಶಕ್ತಿ ಗಿಡ ಮರಗಳಿದೆ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಕೃಷಿ ವೆಚ್ಚಗಳಿಂದ ರೈತರು ನಷ್ಟಕ್ಕೊಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಹೊಲಗಳ ಬದುವಿನಲ್ಲಿ ಸುತ್ತಲೂ ಬೇಲ, ಸೀತಾಫಲ, ಮಾವು, ಬಿಲ್ವ ಸೇರಿ ಇತರೆ ಮರಗಳನ್ನು ಬೆಳೆಸಿ ವರ್ಷ ಪೂರ್ತಿ ಆದಾಯ ಕಾಣಬಹುದು ಎಂದರು.
ಇಕ್ರಾ ಸಂಸ್ಥೆ ಕೊಟ್ಟೂರು ಘಟಕದ ಕೆ.ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ಕೊಟ್ರೇಶ ಮಾತನಾಡಿದರು. ಮೇಳದಲ್ಲಿ ತಾಲೂಕಿನ ಅನೇಕ ರೈತರು 60ಕ್ಕೂ ಹೆಚ್ಚು ಬಗೆಯ ಬಿತ್ತನೆ ಬೀಜಗಳ ಮಾರಾಟ ಹಾಗೂ ಪ್ರಾತ್ಯಕ್ಷತೆ ನಡೆಸಿದರು.