ಕನ್ನಡಪ್ರಭವಾರ್ತೆ ಪುತ್ತೂರು
ಧರ್ಮ ರಕ್ಷಣೆ, ಲವ್ ಜಿಹಾದ್, ಗೋ ರಕ್ಷಣೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅಮಾಯಕ ಹಿಂದೂ ಯುವಕರ ಮೇಲೆ ರಾಜ್ಯ ಸರ್ಕಾರವು ಗೂಂಡಾ ಕಾಯ್ದೆ ಹಾಕಿ ಅವರನ್ನು ಗಡೀಪಾರು ಮಾಡುತ್ತಿರುವುದು ಖಂಡನೀಯವಾಗಿದೆ. ಈ ಹಿಂದೂ ವಿರೋಧಿ ನೀತಿಯನ್ನು ನಿಲ್ಲಿಸದಿದ್ದಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಗುವುದು ಹಾಗೂ ಪೊಲೀಸ್ ಇಲಾಖೆಯ ಮುಂಭಾಗದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಗೋ ರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ. ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಎಚ್‌ಪಿ ಮತ್ತು ಬಜರಂಗದಳದಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಇಬ್ಬರಿಗೆ ಗಡೀಪಾರು ಆದೇಶ ಹಾಗೂ ಇನ್ನೋರ್ವರಿಗೆ ಗೂಂಡಾ ಕಾಯಿದೆ ಹಾಕಲಾಗಿದೆ. ಯಾವುದೇ ಗಂಭೀರ ಪ್ರಕರಣ ಇಲ್ಲದಿದ್ದರೂ ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು ಹಾಗೂ ಉಪ್ಪಿನಂಗಡಿಯ ಜಯರಾಮ ಅವರಿಗೆ ಗಡೀಪಾರು ಆದೇಶ ಮಾಡಲಾಗಿದ್ದು, ಮಂಗಳೂರಿನ ಜಯಪ್ರಕಾಶ್ ಎಂಬವರಿಗೆ ಗೂಂಡಾ ಕಾಯಿದೆಯ ಆದೇಶ ಮಾಡಲಾಗಿದೆ. ಇವರ ಮೇಲೆ ಯಾವುದೇ ಗಂಭೀರವಾದ ಪ್ರಕರಣಗಳಿಲ್ಲ. ಹಿಂದೂ ಸಮಾಜಕ್ಕಾಗಿ ಶ್ರಮಿಸುವ ವ್ಯಕ್ತಿಗಳನ್ನು ಸರ್ಕಾರ, ಇಲಾಖೆಯೇ ಗೂಂಡಾಗಳನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದೆ. 4 ತಿಂಗಳ ಹಿಂದೆಯೇ ಈ ಪಟ್ಟಿಯನ್ನು ತಯಾರಿಸಿಕೊಂಡು ಇದೀಗ ಗಡೀಪಾರು ಮಾಡಲಾಗುತ್ತಿದೆ. ಹಿಂದೂ ಸಮಾಜಕ್ಕಾಗಿ ಕೆಲಸ ಮಾಡುವ ಸಾವಿರ ಕಾರ್ಯಕರ್ತರ ಪಟ್ಟಿಯನ್ನು ನಾವೇ ಕೊಡುತ್ತೇವೆ. ತಾಕತ್ತಿದ್ದರೆ ಸರ್ಕಾರ ಅವರಿಗೆ ಗಡೀಪಾರು, ಗೂಂಡಾ ಕಾಯಿದೆ ಹಾಕಲಿ ಎಂದು ಸವಾಲು ಹಾಕಿದರು.ಕೆಲವು ದಿನಗಳ ಹಿಂದೆ ಕಡಬದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುವ ಸಂದರ್ಭ ವ್ಯಕ್ತಿಯೊಬ್ಬರ ಮೇಲೆ ವಾಹನ ಹರಿಸಿದ ಪ್ರಕರಣ ನಡೆದಿದೆ. ಗಾಂಜಾ ಸೇವಿಸಿ ಗೋಸಾಟ ಮಾಡುತ್ತಿರುವ ಪ್ರಕರಣಗಳು, ಆ ಮೂಲಕ ಹಿಂದೂ ಸಮಾಜಕ್ಕೆ ಭೀತಿ ಹುಟ್ಟಿಸುವ ಕೆಲಸ ನಿರಂತರ ನಡೆಯುತ್ತಿದೆ. ಕಬಕದಲ್ಲಿ ಗೋವನ್ನು ಹಿಂಸಾತ್ಮಕವಾಗಿ ಕಾರಿನಲ್ಲಿ ಸಾಗಾಟ ಮಾಡಿದ ಪ್ರಕರಣವನ್ನು ಕಾರ್ಯಕರ್ತರು ಪತ್ತೆ ಹಚ್ಚಿದ್ದರು. ಆರೋಪಿಗಳ ಫೋನ್, ವಾಹನ ಸಿಕ್ಕಿದೆ. ಆದರೂ ಆರೋಪಿಗಳ ಬಂಧನ ಮಾಡಿಲ್ಲ. ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿರುವ ಬಗ್ಗೆ ಸಂಶಯವಾಗುತ್ತಿದೆ. ಕಾನೂನು ರಕ್ಷಣೆಯ ವೈಫಲ್ಯವನ್ನು ನಾವು ಸಹಿಸುವುದಿಲ್ಲ. ಪೊಲೀಸರು ಗೋಸಾಗಾಟ ತಡೆಯದಿದ್ದಲ್ಲಿ ನಮ್ಮ ಕಾರ್ಯಕರ್ತರು ರಸ್ತೆಯಲ್ಲಿ ತಡೆಯುತ್ತಾರೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಬಜರಂಗದಳ ಪುತ್ತೂರು ಪ್ರಖಂಡದ ಜಯಂತ ಕುಂಜೂರುಪಂಜ, ನ್ಯಾಯವಾದಿ ಮಾಧವ ಪೂಜಾರಿ ಉಪಸ್ಥಿತರಿದ್ದರು.