ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳತುಳುನಾಡು ಕೇವಲ ಭೌಗೋಳಿಕ ಪ್ರದೇಶವಲ್ಲ, ಇದು ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಜನಪದಸಾಹಿತ್ಯದ ಜೀವಂತ ನೆಲೆ. ಪಾರ್ದನ ಹಾಡುಗಳು, ಭೂತಕೋಲ, ಯಕ್ಷಗಾನ, ದೈವಾರಾಧನೆ, ಪಿಲಿ ನಲಿಕೆ, ನಾಗಾರಾಧನೆ ಮತ್ತು ನಾಟಿ ಹಬ್ಬಗಳ ಮೂಲಕ ಈ ನಾಡು ತನ್ನ ಸಂಸ್ಕೃತಿಯ ಮೂಲವನ್ನು ದಿನನಿತ್ಯದಲ್ಲಿ ಉಳಿಸಿಕೊಂಡಿದೆ.
ಜನರ ಜೀವನಶೈಲಿಯಲ್ಲೇ ಸಂಸ್ಕೃತಿ ಬೆರೆತಿರುವ ಈ ನಾಡಿನಲ್ಲಿ ಹಾಡು, ಕತೆ, ನೃತ್ಯ ಎಲ್ಲವೂ ಇಲ್ಲಿನ ಮಣ್ಣಿನ ಸುವಾಸನೆ ಹೊತ್ತಿದೆ. ಇಲ್ಲಿ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೂ ದಾಟಿಸುವ ಕಾರ್ಯ ನಡೆಯುತ್ತಿದೆ. ಅದಕ್ಕೊಂದು ತಾಜಾ ಉದಾಹರಣೆ ಕಾರ್ಕಳ ತಾಲೂಕಿನ ಮರ್ಣೆಗ್ರಾಮದ ಹೆರ್ಮುಂಡೆಯ ನಡುಗುಡ್ಡೆ ಮನೆಯ ಗೋಪಿಯಕ್ಕರ ಗದ್ದೆ.89 ವರ್ಷ ವಯಸ್ಸಿನ ಗೋಪಿಯಕ್ಕ, ಹಳೆಯ ಕಾಲದ ಪಾಡ್ದನಗಳನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಮಹತ್ವದ ಕಾರ್ಯ ಮಾಡುತ್ತಿದ್ದಾರೆ.
ಹಿರಿಯರಾದ ಗೋಪಿಯಕ್ಕ ತಮ್ಮ ಜ್ಞಾಪಕಶಕ್ತಿಯಿಂದ ಮರೆತುಹೋಗುತ್ತಿರುವ ಪಾಡ್ದನಗಳನ್ನು ತಮ್ಮ ಗದ್ದೆಗೆ ಕೆಲಸಕ್ಕೆ ಬರುವ ಮಹಿಳೆಯರು ಮಕ್ಕಳಿಗೆ ಕಲಿಸಿಕೊಡುತ್ತಾ, ಸಂಪ್ರದಾಯವನ್ನು ಪುನಃ ಜೀವಂತಗೊಳಿಸುತ್ತಿದ್ದಾರೆ. ಇವರ ಶ್ರಮಕ್ಕೆ ಸುಲೋಚನ, ಸರೋಜಿನಿಯಕ್ಕ, ಕಾಳಿಯಕ್ಕ, ಕುಸುಮ, ಗಿಲಾಬಿ, ಮಾಲತಿ, ಪ್ರೇಮ, ನೀಲು, ರುಕ್ಮಿಣಿ, ಸುಮನ, ಸುಕನ್ಯ, ಉಷಾ ಮೊದಲಾದವರು ಸಾಥ್ ನೀಡಿದ್ದಾರೆ.ಪಾಡ್ದನ ಹಾಡುಗಳು, ಹರಟೆ, ಒಗಟುಗಳಿಂದ ನಾಟಿ ಮಾಡುವಾಗ ಮಹಿಳೆಯರು ಆಯಾಸವಿಲ್ಲದೆ ಕೆಲಸ ನಿರ್ವಹಿಸುತ್ತಾರೆ. 89 ವರ್ಷದ ಗೋಪಿಯಕ್ಕ ಗದ್ದೆಗೆ ಇಳಿದು ಗದ್ದೆ ನಾಟಿ ಮಾಡುತ್ತಾ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.ಗದ್ದೆಯಲ್ಲಿ ಪಾಡ್ದನಗಳ ಜೊತೆಗೆ ಓಬೇಲೆ, ಹೊಯ್ಯಾ, ಕೋಟಿ ಚೆನ್ನಯ್ಯರ ಪಾರ್ದನಗಳು, ರಾಜ-ಮಹಾರಾಜರ ಕಥೆಗಳು, ಗುಮ್ಮ ಮತ್ತು ಗುಡುಗುಂಟಪ್ಪನ ಕತೆಗಳು, ಗರ್ಭಿಣಿಯ ತುಮುಲಗಳು, ಸೀಮಂತದ ಹಾಡುಗಳು, ಪ್ರಾಣಿ ಪಕ್ಷಿಗಳ ಜನಪದ ಗೀತೆಗಳು ಮೂಡಿಬಂದವು...................
ನಾವು ಹೊಸ ಸಮುದಾಯಕ್ಕೆ ಪಾಡ್ದನಗಳನ್ನು ತಿಳಿಸಿದರೆ ಮಾತ್ರ ಅದು ಉಳಿಯಬಹುದು. ಇಲ್ಲದಿದ್ದರೆ ನಮ್ಮ ಕಾಲಕ್ಕೆ ಕೊನೆಯಾಗಬಹುದು. ಅದಕ್ಕಾಗಿ ಪಾಡ್ದನ ಉಳಿಸಲು ನಮ್ಮ ಗದ್ದೆಯಲ್ಲಿ ನಾಟಿ ಮಾಡುವ ಸಂದರ್ಭ ಎಲ್ಲರಿಗೂ ಹೇಳಿಕೊಡುತಿದ್ದೇನೆ. ಇದಕ್ಕೆ ಎಲ್ಲರು ಸ್ವರ ಕೊಡುತ್ತಿದ್ದಾರೆ.। ಗೋಪಿಯಕ್ಕ, ಪಾಡ್ದನ ಕಲಿಸುವವರು
----------------------ನಡುಗುಡ್ಡೆ ಮನೆ ಹೆರ್ಮುಂಡೆ ಗೋಪಿಯಕ್ಕ ಸುಮಾರು ಹತ್ತು ವರ್ಷಗಳಿಂದ ಪಾಡ್ದನ ಹೇಳಿಕೊಡುತ್ತಿದ್ದಾರೆ. ಹೇಳಿಕೊಟ್ಟಿದ್ದ ಪಾರ್ದನಗಳು ಈಗಲೂ ಹಾಡುತ್ತೇನೆ. ಅವರ ಉತ್ಸಾಹವು ನಮಗೆಲ್ಲ ಮಾದರಿ. ಇಂದಿನ ಜನಾಂಗಕ್ಕೆ ಪಾಡ್ದನಗಳು ತಿಳಿದಿಲ್ಲ. ಆದರೆ ನಾವು ತಿಳಿದುಕೊಂಡರೆ ಸಂಸ್ಕೃತಿಯನ್ನು ತಮ್ಮ ಮಕ್ಕಳಿಗೆ ತಿಳಿಸಬಹುದು.
। ಸರೋಜಿನಿ, ಪಾಡ್ದನ ಕಲಿತವರು