ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜಯಂತ್ಯುತ್ಸವ

KannadaprabhaNewsNetwork | Published : Jul 10, 2024 12:34 AM

ಸಾರಾಂಶ

ಗೊರೂರು ಗ್ರಾಮದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಕೃಷ್ಣ ಉದ್ಘಾಟಿಸಿದರು. ನಂತರ ಮಾತನಾಡಿ ಗೊರೂರರ ಜಯಂತಿ ಅಂಗವಾಗಿ ಗಾಂಧಿ ಮತ್ತು ಡಾ.ಗೊರೂರರ ವಿಚಾರ ಗೋಷ್ಠಿ, ರಾಜ್ಯಮಟ್ಟದ ಕವಿಗೋಷ್ಠಿ. ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರು ಜನ್ಮಪಡೆದ ಮಣ್ಣಿನಲ್ಲಿ ಇಡೀ ದಿನ ಆಯೋಜನೆ ಮಾಡಿರುವುದು ಹೆಚ್ಚು ಅರ್ಥ ಪೂರ್ಣವಾಗಿದೆ ಎಂದು ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಬದುಕಿನುದ್ದಕ್ಕೂ ನಾಡಿಗಾಗಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದ "ಕರ್ನಾಟಕದ ಗಾಂಧಿ " ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು, ಬರಹವನ್ನು ಇಂದಿನ ಯುವಪೀಳಿಗೆಗೆ ಪರಿಚಯ ಮಾಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಕೃಷ್ಣ ತಿಳಿಸಿದರು.

ಗೊರೂರು ಗ್ರಾಮದಲ್ಲಿ ಅರಕಲಗೂಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು, ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೊರೂರರ ಜಯಂತಿ ಅಂಗವಾಗಿ ಗಾಂಧಿ ಮತ್ತು ಡಾ.ಗೊರೂರರ ವಿಚಾರ ಗೋಷ್ಠಿ, ರಾಜ್ಯಮಟ್ಟದ ಕವಿಗೋಷ್ಠಿ. ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರು ಜನ್ಮಪಡೆದ ಮಣ್ಣಿನಲ್ಲಿ ಇಡೀ ದಿನ ಆಯೋಜನೆ ಮಾಡಿರುವುದು ಹೆಚ್ಚು ಅರ್ಥ ಪೂರ್ಣವಾಗಿದೆ ಎಂದು ಬಣ್ಣಿಸಿದರು.ಈ ದೇಶದಲ್ಲಿ ಶ್ರೀಸಾಮಾನ್ಯರಿಗೆ ಅತಿ ಹೆಚ್ಚು ಗೌರವ ತಂದುಕೊಟ್ಟಿರುವ ವ್ಯಕ್ತಿ ಎಂದರೆ ಅದು ಗಾಂಧೀಜಿಯವರು, ಅವರ ಸೊಗಡಿನಲ್ಲಿಯೇ ವಿಚಾರವಂತಿಕೆಯನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟವರು ಗೊರೂರರು. ಗಾಂಧೀಜಿಯವರಿಂದ ಪರಿಣಿತರಾದ ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಇಡೀ ನಾಡಿಗೆ ಪರಿಚಯಿಸುವ ಕಾರ್ಯಗಳು ಹೆಚ್ಚು ನಡೆಯಬೇಕಿದೆ ಎಂದು ಹೇಳಿದರು.ಅಪ್ರತಿಮ ದೇಶಪ್ರೇಮಿ: ಸಾರ್ವಜನಿಕ ಜೀವನದಲ್ಲಿ ಗಾಂಧಿಯವರು ಎಷ್ಟು ಪ್ರಭಾವ ಬೀರುತಿದ್ದಾರೋ ಅದೇ ರೀತಿಯಲ್ಲಿ ರಾಮಸ್ವಾಮಿ ಅಯ್ಯಂಗಾರರ ಚಿಂತನೆ, ಬರವಣಿಗೆ ಪ್ರಭಾವಿತವಾಗಿವೆ. ಇಂದಿನ ಕಾಲಘಟ್ಟದಲ್ಲಿ ಗಾಂಧಿ ಮತ್ತು ರಾಮಸ್ವಾಮಿ ಅವರ ಪ್ರೇರಣೆ ಅತ್ಯವಶ್ಯಕವಾಗಿದೆ. ಈ ದೇಶಕ್ಕಾಗಿ ತಮ್ಮ ಮಗನನ್ನೆ ಬಲಿಕೊಟ್ಟ ಗೊರೂರರು ಅಪ್ರತಿಮ ದೇಶಪ್ರೇಮಿಯಾಗಿದ್ದಾರೆ. ಇವರು ಸುಮಾರು 80ಕ್ಕೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿದ ಮೈಸೂರು ಸರ್ಕಾರದಲ್ಲಿ ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡುವ ಅವಕಾಶ ಕೂಡ ಸಿಕ್ಕಿದೆ. ಏಕೀಕರಣದಲ್ಲಿಯೂ ಇವರ ಕೊಡುಗೆ ಅಪಾರವಾಗಿದೆ. ಅವರ ಕಾದಂಬರಿಗಳು ಅನೇಕ ಚಲನಚಿತ್ರಗಳಾಗಿ ಜನರ ಮುಂದೆ ಪ್ರದರ್ಶನಗೊಂಡಿವೆ. ವಿಶೇಷವಾಗಿ "ಅಮೆರಿಕದಲ್ಲಿ ಗೊರೂರು " ಕೃತಿ ಈ ಮಣ್ಣಿನ ಸೊಬಗನ್ನು ವಿಶ್ವಮಟ್ಟದಲ್ಲಿ ಪ್ರಸರಿಸಿದೆ. ಗಾಂಧಿಯವರ ಜೀವನಚರಿತ್ರೆಯನ್ನು ಕನ್ನಡಕ್ಕೆ ಅನುವಾದ ಮಾಡಿರುವ ಕೃತಿಗಳು ಲಕ್ಷಗಟ್ಟಲೆ ಮಾರಾಟವಾಗಿವೆ. ಇದು ಬಹುತೇಕ ವಿಶ್ವಮಟ್ಟದಲ್ಲಿ ಸಾಧನೆಯಾಗಿದೆ. ಜಾತಿ ಧರ್ಮಗಳನ್ನು ಮೀರಿ ಹಿಂದು ಮುಸ್ಲಿಂ ಐಕ್ಯತೆಗಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಭಾಗವಹಿಸಿ: ಬರುವ ಜು.13ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ರಾಮಸ್ವಾಮಿ ಅವರ ಕುರಿತ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ. ಇಲ್ಲಿಂದ ಬರುವ ಜನರಿಗೆ ಸಕಲ ವ್ಯವಸ್ಥೆಯನ್ನು ಮಾಡಲಾಗುವುದು. ಗೊರೂರು ಮಣ್ಣಿನಿಂದ ಜನ ವ ನಿರೀಕ್ಷೆ ಇದೆ. ದಯವಿಟ್ಟು ಭಾಗವಹಿಸಿ ಗೌರವ ತಂದುಕೊಡಬೇಕೆಂದು ಅವರು ಮನವಿ ಮಾಡಿದರು.

ಡಾ. ರಾಮಸ್ವಾಮಿ ಅಯ್ಯಂಗಾರ್‌ರವರ ಸುಪುತ್ರಿ ವಸಂತಮೂರ್ತಿ ಮಾತನಾಡಿ, ನಾನು ಕೆನಡ ದೇಶದಲ್ಲಿ ನೆಲೆಸಿದ್ದೇನೆ. ನಾವು ಜನ್ಮ ಪಡೆದ ಗೊರೂರು ಗ್ರಾಮದಲ್ಲಿ ನಮ್ಮ ತಂದೆಯವರ ಜನ್ಮ ಜಯಂತಿ ಆಚರಣೆಗೆ ಆಹ್ವಾನ ಬಂದ ತಕ್ಷಣವೇ ಇಡೀ ಕುಟುಂಬದವರು ಬಹು ಸಂತೋಷದಿಂದ ಭಾಗವಹಿಸಿದ್ದೇವೆ. ಸಾಮಾಜಿಕ ಕಳಕಳಿ, ಬದಲಾವಣೆ ಜಗದ ನಿಮಯ ಎಂಬ ಆಶಯದಲ್ಲಿ ನಮ್ಮ ತಂದೆಯವರು ಅನೇಕ ಕಾದಂಬರಿಗಳನ್ನು ಕೊಟ್ಟಿದ್ದಾರೆ. ಇವುಗಳ ವಿಚಾರವಂತಿಕೆ ಇಂದಿನ ಸಮಾಜಕ್ಕೆ ಬೇಕಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬೆಂಗಳೂರು ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಮಾತನಾಡಿದರು. ಗೊರೂರು ರಾಜು ಅವರು ಗೊರೂರು ಇತಿಹಾಸ ಮತ್ತು ಸಾಹಿತಿಗಳ ಪರಿಚಯ ಮಾಡಿದರು. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುಂದರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಪ್ಪಳ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಗದೀಶ್, ಹಿರಿಯ ವಿಜ್ಞಾನಿ ಸ್ವಾಮಿನಾಯಕ್, ಗ್ರಾಪಂ ಅಧ್ಯಕ್ಷ ನಿಂಗರಾಜು, ಸದಸ್ಯ ಹೇಮರಾಜ್, ಮಾಜಿ ಸದಸ್ಯ ವೇದಮೂರ್ತಿ ಇತರರಿದ್ದರು.

ಕಾರ್ಯಕ್ರಮದಲ್ಲಿ ಮಧುನಾಯ್ಕ್ ಲಂಬಾಣಿ ಅವರಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಗಿರಿಜಾ ನಿರ್ವಾಣಿ ಅವರಿಗೆ ಅಮೃತ ದೇಸಾಯಿ ಪ್ರಶಸ್ತಿ, ಕನಕರಾಜು ಅವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

* ಹೇಳಿಕೆ

ನಮ್ಮ ತಂದೆಯವರು ಹುಟ್ಟಿಬೆಳೆದ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಬೇಕಿದೆ. ಇದಕ್ಕೆ ಬೇಕಾದ ಸಹಕಾರವನ್ನು ನೀಡಲಾಗುವುದು. ವಿದೇಶದಲ್ಲಿ ನೆಲಸಿದ್ದರೂ ಕೂಡ ನಮ್ಮ ಪರಂಪರೆ, ಸಂಸ್ಕೃತಿ ಹಾಗೂ ಕನ್ನಡ ಭಾಷೆಯ ಬಗ್ಗೆ ಅತೀವ ಗೌರವ ಹೊಂದಿದ್ದೇವೆ.

-ವಸಂತಮೂರ್ತಿ, ಅಯ್ಯಂಗಾರ್‌ರವರ ಪುತ್ರಿ

Share this article