ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಮತ್ತು ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಕಿರಿಯ ತಾಂತ್ರಿಕ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರಿಗೆ ಸೇವಾವಧಿ ಹಾಗೂ ಶೈಕ್ಷಣಿಕ ಅರ್ಹತೆ ಆಧರಿಸಿ 5 ಸಾವಿರ ರು.ನಿಂದ 8 ಸಾವಿರ ರು.ವರೆಗೆ ವೇತನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಮತ್ತು ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಕಿರಿಯ ತಾಂತ್ರಿಕ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರಿಗೆ ಅವರ ಸೇವಾವಧಿ ಹಾಗೂ ಶೈಕ್ಷಣಿಕ ಅರ್ಹತೆ ಆಧರಿಸಿ ಕನಿಷ್ಠ 5 ಸಾವಿರ ರು.ನಿಂದ ಗರಿಷ್ಠ 8 ಸಾವಿರ ರು.ವರೆಗೆ ವೇತನ ಹೆಚ್ಚಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಮಾಡಿದೆ.
ಈ ಹಿಂದೆ ಸೇವಾ ಭದ್ರತೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾಗ ನೀಡಿದ್ದ ಭರವಸೆಯಂತೆ ಎಲ್ಲ ಅತಿಥಿ ಉಪನ್ಯಾಸಕರಿಗೂ ತಲಾ 5 ಲಕ್ಷ ರು. ಆರೋಗ್ಯ ವಿಮಾ ಸೌಲಭ್ಯ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 60 ವರ್ಷ ಮೀರಿದ ನಂತರ ಭದ್ರತಾ ರೂಪದಲ್ಲಿ ವಾರ್ಷಿಕ 50 ಸಾವಿರ ರು. ನಂತರ ಗರಿಷ್ಠ 5 ಲಕ್ಷ ರು.ಗಳ ಇಡುಗಂಟು ಮಂಜೂರು ಮಾಡಲು ಉನ್ನತ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳು ಆದೇಶಿಸಿವೆ.
ಈ ಆದೇಶ ಕಳೆದ ಜ.1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶಾನುಸಾರ ಸೇವಾವಧಿ ಮತ್ತು ವಿದ್ಯಾರ್ಹತೆ ಆಧಾರದಲ್ಲಿ ಕ್ರಮವಾಗಿ 5, 6, 7 ಮತ್ತು 8 ಸಾವಿರದಂತೆ ನಾಲ್ಕು ರೀತಿಯಲ್ಲಿ ವೇತನ ಹೆಚ್ಚಿಸಲಾಗಿದೆ.
ಪದವಿ ಕಾಲೇಜುಗಳಲ್ಲಿ 5 ವರ್ಷಕ್ಕಿಂತ ಕಡಿಮೆ ಸೇವಾವಧಿ ಸಲ್ಲಿಸಿದ್ದು ಯುಜಿಸಿ ವಿದ್ಯಾರ್ಹತೆ ಹೊಂದಿರುವವರಿಗೆ ಮಾಸಿಕ ಗೌರವ ಧನ 35 ಸಾವಿರ ರು., ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ 31 ಸಾವಿರ ರು., 5ರಿಂದ 10 ವರ್ಷಗಳ ಕಾಲ ಸೇವಾವಧಿ ಸಲ್ಲಿಸಿರುವವರ ಪೈಕಿ ಯುಜಿಸಿ ವಿದ್ಯಾರ್ಹತೆ ಇರುವವರಿಗೆ 38 ಸಾವಿರ ರು.,
ಯುಜಿಸಿ ವಿದ್ಯಾರ್ಹತೆ ಇಲ್ಲದವರಿಗೆ 34 ಸಾವಿರ ರು.,, 10ರಿಂದ 15 ವರ್ಷ ಸೇವಾವಧಿ ಸಲ್ಲಿಸಿರುವವರಲ್ಲಿ ಯುಜಿಸಿ ವಿದ್ಯಾರ್ಹತೆಯುಳ್ಳವರಿಗೆ 39 ಸಾವಿರ ರು., ಯುಜಿಸಿ ವಿದ್ಯಾರ್ಹತೆ ಇಲ್ಲದವರಿಗೆ 35 ಸಾವಿರ ರು., 15 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು ಯುಜಿಸಿ ವಿದ್ಯಾರ್ಹತೆ ಇರುವವರಿಗೆ 40 ಸಾವಿರ ರು. ಹಾಗೂ ಯುಜಿಸಿ ವಿದ್ಯಾರ್ಹತೆ ಇಲ್ಲದವರಿಗೆ 36 ಸಾವಿರ ರು.ಗಳಿಗೆ ವೇತನ ಹೆಚ್ಚಳವಾಗಲಿದೆ.