ಅಂಗನವಾಡಿ ಕಾರ್ಯಕರ್ತೆಯರ ಉದ್ಯೋಗ ಭದ್ರತೆಗೆ ಸರ್ಕಾರ ಬದ್ಧ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

KannadaprabhaNewsNetwork | Published : Jul 7, 2024 1:20 AM

ಸಾರಾಂಶ

ಯಶೋದೆಯು ಶ್ರೀಕೃಷ್ಣನನ್ನು ಬೆಳೆಸಿದಂತೆ ಸಮಾಜದಲ್ಲಿನ ಮಕ್ಕಳನ್ನು ಅಂಗವಾಡಿ ಕಾರ್ಯಕರ್ತೆ, ಸಹಾಯಕಿಯರು ಬೆಳೆಸುತ್ತಿದ್ದು, ಸಮಾಜದ ಏಳಿಗೆಗೆ ಇವರ ಪಾತ್ರ ಮಹತ್ವದ್ದಾಗಿದೆ.

ಬಳ್ಳಾರಿ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸೇವಾ ಭದ್ರತೆಗೆ ಸರ್ಕಾರ ಬದ್ಧವಿದೆ. ಯಾವುದೇ ಕಾರಣಕ್ಕೂ ಉದ್ಯೋಗಕ್ಕೆ ಧಕ್ಕೆಯಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ-ವಿಕಲಚೇತನರ ಸಬಲೀಕರಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿವಿಧ ಪರಿಕರಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿನ 7 ಸಾವಿರಕ್ಕೂ ಹೆಚ್ಚಿನ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಲಾಗುವುದು. ಈ ಮೂಲಕ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ತರಬೇತಿ ನೀಡಲಾಗುವುದು. ಮಕ್ಕಳ ಸರ್ವತೋಮುಖ ಬೆಳವಣಿಗೆ, ತೂಕ, ಆರೋಗ್ಯ, ಗುಣಮಟ್ಟ ಶಿಕ್ಷಣಕ್ಕೆ ಪೂರಕವಾಗುತ್ತದೆ ಎಂದರು.

ಯಶೋದೆಯು ಶ್ರೀಕೃಷ್ಣನನ್ನು ಬೆಳೆಸಿದಂತೆ ಸಮಾಜದಲ್ಲಿನ ಮಕ್ಕಳನ್ನು ಅಂಗವಾಡಿ ಕಾರ್ಯಕರ್ತೆ, ಸಹಾಯಕಿಯರು ಬೆಳೆಸುತ್ತಿದ್ದು, ಸಮಾಜದ ಏಳಿಗೆಗೆ ಇವರ ಪಾತ್ರ ಮಹತ್ವದ್ದಾಗಿದೆ. ಚುನಾವಣೆ, ಪಲ್ಸ್-ಪೊಲೀಯೋ, ಮನೆ ಸಮೀಕ್ಷೆ, ಮುಖ್ಯವಾಗಿ ಕೊರೋನ ಸಂದರ್ಭದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಶೇ.98ರಷ್ಟು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಎಲ್ಲ ತಿಂಗಳ ಹಣ ಜಮೆಯಾಗುತ್ತಿದೆ. ಜೂನ್ ತಿಂಗಳ ಹಣವು ವಾರದಲ್ಲೇ ತಮ್ಮ ಖಾತೆಗಳಿಗೆ ಜಮೆಯಾಗಲಿದೆ ಎಂದರು.

ಕಳಪೆ ಆಹಾರ ಗಮನಕ್ಕೆ ತನ್ನಿ:

ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳ ಗುಣಮಟ್ಟತೆ ಕಾಯ್ದುಕೊಳ್ಳಬೇಕು. ಆಹಾರ ಸಾಮಗ್ರಿ ಕಳಪೆ ಇದ್ದಲ್ಲಿ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ಬಳ್ಳಾರಿ ಜಿಲ್ಲಾಡಳಿತವು ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಿಂದ ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ರೆಫ್ರಿಜರೇಟರ್ ವಿತರಿಸುತ್ತಿದೆ. ಜಿಲ್ಲಾಧಿಕಾರಿ ಮುತುವರ್ಜಿ ವಹಿಸಿ ರಿಫ್ರಿಜರೇಟರ್‌ ನೀಡಿದ್ದಾರೆ. ಇದರಿಂದ ಕೇಂದ್ರಗಳಲ್ಲಿ ಮೊಟ್ಟೆ, ಕಾಯಿಪಲ್ಲೆ ಮತ್ತಿತರ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಅನುಕೂಲವಾಗಿದೆ. ಜಿಲ್ಲಾ ಖನಿಜ ನಿಧಿ ಬಳಸಿಕೊಂಡು ಕೇಂದ್ರಗಳ ಪ್ರಗತಿಗೆ ಜಿಲ್ಲಾಡಳಿತ ಶ್ರಮಿಸಬೇಕು. ಸ್ಮಾರ್ಟ್ ಕ್ಲಾಸ್, ಯೂನಿಫಾರ್ಮ್, ಪುಸ್ತಕ, ಶೂ ನೀಡಬಹುದು. ಬಳ್ಳಾರಿಯಿಂದಲೇ ಪೈಲಟ್ ಪ್ರಾಜೆಕ್ಟ್‌ ಮಾಡಿಕೊಡಿ ಎಂದು ಡಿಸಿಗೆ ಸೂಚಿಸಿದರು.

ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಬಳ್ಳಾರಿ ನಗರ ಅಭಿವೃದ್ಧಿಗೆ ₹110 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಭ್ರಷ್ಟಾಚಾರ ಮುಕ್ತ ಬಳ್ಳಾರಿ ನಿರ್ಮಿಸುತ್ತೇವೆ. ಬಳ್ಳಾರಿಯಲ್ಲಿ ಬಾಲಭವನ ನಿರ್ಮಾಣಕ್ಕೆ ಸಚಿವರು ಮುಂದಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ರೆಫ್ರಿಜರೇಟರ್ ಹಾಗೂ ವಿಕಲಚೇತನರ ತ್ರಿಚಕ್ರ ವಾಹನಗಳು ಮತ್ತು ಪೋಷಣ್ ಆಭಿಯಾನ ಯೋಜನೆಯಡಿ ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್‍ಫೋನ್, ಅಂಗನವಾಡಿ ಕೇಂದ್ರಗಳಿಗೆ ತೂಕದ ಯಂತ್ರ, ಆಶಾ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸೀರೆ ವಿತರಿಸಲಾಯಿತು.

ಮುಖ್ಯಮಂತ್ರಿ ಬಾಲ ಸೇವಾ ಯೋಜನೆಯಡಿ ಕೊರೋನಾದಲ್ಲಿ ಮೃತಪಟ್ಟ ಪಾಲಕರ ಮಕ್ಕಳಿಗೆ ಲ್ಯಾಪ್‍ಟಾಪ್, ವಿಶೇಷಚೇತನ ಮಕ್ಕಳಿಗೆ ಟಾಕಿಂಗ್ ಲ್ಯಾಪ್‍ಟಾಪ್, ಬ್ರೈಲ್‍ಕಿಟ್, ಹೊಲಿಗೆಯಂತ್ರ ನೀಡಲಾಯಿತು.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆಗೈದ 8 ಮಕ್ಕಳನ್ನು ಸನ್ಮಾನಿಸಲಾಯಿತು. ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆಯಡಿ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಚೆಕ್ ವಿತರಿಸಲಾಯಿತು.

ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಜೆ.ಸಿ.ಪ್ರಕಾಶ್, ಡಿಸಿ ಪ್ರಶಾಂತಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್ ಮತ್ತಿತರರಿದ್ದರು.

ಗೌರವಧನ ಹೆಚ್ಚಳಕ್ಕೆ ಸಿಎಂ ಅಸ್ತು: ರಾಜ್ಯದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಲಾಗಿದ್ದು, ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಗೌರವಧನ ಹೆಚ್ಚಳ ಸಂಬಂಧ ಸಿಎಂ ಬಳಿ ಹತ್ತಾರು ಬಾರಿ ತೆರಳಿದ್ದೇನೆ. ಅವರು ಆಯಿತು ಎಂದಿದ್ದಾರೆ. ಸಿಎಂ ಹೇಳಿದ ಮೇಲೆ ಖಂಡಿತ ನಿಮ್ಮ ಗೌರವಧನ ಹೆಚ್ಚಿಸುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

Share this article