ಹಿರಿಯೂರು: ತಾಲೂಕಿನ ಗ್ರಾಮಪಂಚಾಯಿತಿಗಳ ಗ್ರಂಥಾಲಯಗಳನ್ನು ಸರ್ಕಾರವು ಇತ್ತೀಚೆಗೆ ಹಂತಹಂತವಾಗಿ ಡಿಜಿಟಲ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಿ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಕಂಪ್ಯೂಟರ್ ಉಪಕರಣಗಳು, ಸ್ಪರ್ಧಾತ್ಮಕ ಪುಸ್ತಕಗಳನ್ನು ಸರಬರಾಜು ಮಾಡುತ್ತಿರುವುದು ಶ್ಲಾಘನೀಯ ಎಂದು ತಾಲೂಕಿನ ಸರ್ಕಾರಿ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರ ಸಂಘದ ಅಧ್ಯಕ್ಷೆ ಹರಿಯಬ್ಬೆ ರೇಖಾ ಹೇಳಿದರು.
ನಗರದ ಉಪ ಗ್ರಂಥಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಗ್ರಂಥಾಲಯ ಮೇಲ್ವಿಚಾರಕರುಗಳು ಸುಮಾರು 30ರಿಂದ 40 ವರ್ಷಗಳ ಕಾಲ ಗೌರವಧನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಮನಗಂಡ ಸರ್ಕಾರ ಸಂಘದ ಮನವಿಯ ಮೇರೆಗೆ ಸರ್ಕಾರದ ಗ್ರಂಥಾಲಯ ಮೇಲ್ವಿಚಾರಕರಿಗೆ ಗೌರವಧನ ರದ್ದುಪಡಿಸಿ ಕನಿಷ್ಟ ವೇತನವನ್ನು ಜಾರಿ ಮಾಡಿರುವುದು ಸ್ವಾಗತಾರ್ಹವಾಗಿದೆ.
ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಸರ್ಕಾರವು ಸಾರ್ವಜನಿಕ ಗ್ರಂಥಾಲಯ ಇಲಾಖೆವತಿಯಿಂದ, ಪಂಚಾಯಿತಿ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆವತಿಯಿಂದ ಓದುಗರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಹೊಸ ಹೊಸ ಪುಸ್ತಕಗಳನ್ನು ಸರಬರಾಜು ಮಾಡುತ್ತಿದ್ದು, ಇದರಿಂದ ಸಾಕಷ್ಟು ಅನುಕೂಲವಾಗಿದೆ ಎಂದರು.ಜಿಲ್ಲಾ ಪ್ರತಿನಿಧಿ ಯರಬಳ್ಳಿ ರಾಜಣ್ಣ ಮಾತನಾಡಿ, ಸಂಘಟನೆಯನ್ನು ಬಲಪಡಿಸುವತ್ತ ಎಲ್ಲರೂ ಯೋಚಿಸಬೇಕಾಗಿದೆ. ಇತ್ತೀಚೆಗೆ ಹೊಸದಾಗಿ ನೋಂದಣಿ ಮಾಡಿಕೊಂಡಿರುವ ಅರಿವು ಕೇಂದ್ರ ಮತ್ತು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂಡಿ ಕೋಟೆ ಕುಮಾರ್ ಹಾಗೂ ಸಂಘದ ಸದಸ್ಯ ಪ್ರವೀಣ್ ಕುಮಾರ್, ಚಾಂದ್ ಬೇಬಿ, ಗೀತಾ ಬಾಯಿ, ಜಲಜಾಕ್ಷಿ, ಕವಿತಾ, ರೇಖಾ, ಭಾಗ್ಯಮ್ಮ, ಶಾಂತಮ್ಮ, ಜಯರಾಮ ನಾಯ್ಕ ಎಂಬುವರನ್ನು ಸಂಘದಿಂದ ಉಚ್ಛಾಟಿಸಲಾಗಿದ್ದು, ಇನ್ನು ಮುಂದೆ ನಮ್ಮ ಸಂಘಕ್ಕೂ ಅವರಿಗೂ ಯಾವುದೇ ರೀತಿಯ ಕಾರ್ಯ ಚಟುವಟಿಕೆಗಳ ಸಂಬಂಧ ಇರುವುದಿಲ್ಲ ಎಂದರು.
ರಾಜ್ಯ ಸಂಚಾಲಕ ಲಕ್ಷ್ಮಿಕಾಂತ್, ಮಾಜಿ ಅಧ್ಯಕ್ಷ ಟಿ.ನಂದ ಕುಮಾರ್, ಕಾರ್ಯದರ್ಶಿ ಬಿ.ಪ್ರಕಾಶ್, ಸದಸ್ಯರಾದ ವಿಜಯ ಕುಮಾರಿ, ರತ್ನಮ್ಮ, ಲಕ್ಷ್ಮೀದೇವಿ, ರಮೇಶ್, ಮಂಜುಳ ಮುಂತಾದವರು ಹಾಜರಿದ್ದರು.