ಸರ್ಕಾರಿ ನೌಕರರು ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ: ಸಂಸದ ಡಾ.ಸಿದ್ದೇಶ್ವರ್‌

KannadaprabhaNewsNetwork | Published : Feb 21, 2024 2:05 AM

ಸಾರಾಂಶ

ಸರ್ಕಾರಿ ನೌಕರರು ಒತ್ತಡ ಕಡಿಮೆ ಮಾಡಿಕೊಂಡು ಲವಲವಿಕೆಯಿಂದಿರಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಸಾಧ್ಯ ಮತ್ತು ಇದರಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಸರ್ಕಾರಿ ಹುದ್ದೆಯಲ್ಲಿ ಇದ್ದುಕೊಂಡೇ ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಐಎಎಸ್., ಐಪಿಎಸ್ ಅಧಿಕಾರಿಗಳಾಗುವರ ಸಂಖ್ಯೆ ಹೆಚ್ಚಾಗಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಿರಂತರ ವಿದ್ಯಾಭ್ಯಾಸ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಮೂಲಕ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು. ಒತ್ತಡದ ಬದುಕಿನಲ್ಲಿ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಅಗತ್ಯ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರ್ಕಾರಿ ನೌಕರರು ಒತ್ತಡ ಕಡಿಮೆ ಮಾಡಿಕೊಂಡು ಲವಲವಿಕೆಯಿಂದಿರಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಸಾಧ್ಯ ಮತ್ತು ಇದರಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಸರ್ಕಾರಿ ಹುದ್ದೆಯಲ್ಲಿ ಇದ್ದುಕೊಂಡೇ ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಐಎಎಸ್., ಐಪಿಎಸ್ ಅಧಿಕಾರಿಗಳಾಗುವರ ಸಂಖ್ಯೆ ಹೆಚ್ಚಾಗಬೇಕು ಎಂದು ಆಶಿಸಿದರು.

ಪ್ರಧಾನಿಯವರು ಖೇಲೋ ಇಂಡಿಯಾ ಕ್ರೀಡೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ. ಹಿಂದೆ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಒಂದರೆಡು ಪದಕ ಬರುವ ವಾತಾವರಣ ಇತ್ತು. ಈಗ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನ ಹೆಚ್ಚಿನ ಕ್ರೀಡಾಪಟುಗಳು ಗೆದ್ದು ಭಾರತದ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ತಿಳಿಸಿದರು.

ಯೋಗ, ಧ್ಯಾನಕ್ಕೆ ಸಮಯ ನೀಡಿ:

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಸರ್ಕಾರಿ ನೌಕರರು, ಅಧಿಕಾರಿಗಳು, ಸಿಬ್ಬಂದಿ ಪ್ರತಿ ನಿತ್ಯ ಏಕಾಂತತೆಯಲ್ಲೇ ಕೆಲಸ ಮಾಡಬೇಕಾಗುತ್ತದೆ. ನಿರಂತರ ಕೆಲಸ ಮಾಡುವುದರಿಂದ ಕ್ರಿಯಾಶೀಲತೆ, ಹೊಸ ಆಲೋಚನೆ ಹೆಚ್ಚಾಗುವುದಿಲ್ಲ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಉಲ್ಲಾಸ, ಸಂತೋಷ ದೊರೆಯುತ್ತದೆ. ಎಷ್ಟೇ ಕೆಲಸದ ಒತ್ತಡವಿರಲಿ ದಿನದ ಒಂದು ಗಂಟೆ ಯೋಗ, ಧ್ಯಾನ ಮುಂತಾದ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತಿ ಸಿಇಒ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಹಲವಾರು ಸಾರ್ವಜನಿಕ ಯೋಜನೆಗಳ ಸೇರ್ಪಡೆಯಿಂದ ಸರ್ಕಾರಿ ಅಧಿಕಾರಿ, ನೌಕರರು, ಸಿಬ್ಬಂದಿ ಸದಾ ಒತ್ತಡದಲ್ಲೇ ಕೆಲಸ ಮಾಡಬೇಕಾಗುತ್ತದೆ. ಎಲ್ಲಕ್ಕಿಂತಲೂ ಆರೋಗ್ಯ ಭಾಗ್ಯ ಅತೀ ಮುಖ್ಯ. ಹಾಗಾಗಿ ಆರೋಗ್ಯಕ್ಕಾಗಿ ದಿನದ ಒಂದು ಗಂಟೆ ಮೀಸಲಿಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್.ಒಡೇನಪುರ, ಕಾರ್ಯಾಧ್ಯಕ್ಷ ಬಿ.ಪಾಲಾಕ್ಷ, ಉಮೇಶ್, ಮಂಜಮ್ಮ, ಡಾ.ರಂಗನಾಥ್, ಎಚ್.ಬಸವರಾಜ್, ಕೆ.ಎಂ.ಎಚ್.ಸ್ವಾಮಿ, ಬಿ.ಮಂಜುನಾಥ್, ಶಿವಾನಂದ ದಳವಾಯಿ, ಕಲ್ಪನಾ, ತಿಪ್ಪೇಸ್ವಾಮಿ, ರೂಪಾದೇವಿ, ರಾಮಪ್ಪ ಇತರರಿದ್ದರು.ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ‍್ಯಾಕ್‌ಗಾಗಿ ಕೇಂದ್ರ ಸರ್ಕಾರದಿಂದ ₹8.5 ಕೋಟಿ ರೂಪಾಯಿ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಮುನ್ನವೇ ಶಂಕುಸ್ಥಾಪನೆ ಮಾಡಲಾಗುವುದು. ಇಲ್ಲದಿದ್ದಲ್ಲಿ ಚುನಾವಣೆ ನಂತರ ಚಾಲನೆ ಮಾಡಲಾಗುವುದು.

ಡಾ.ಜಿ.ಎಂ.ಸಿದ್ದೇಶ್ವರ್, ಸಂಸದ

ಫೆ.27ರಂದು ನಡೆಯುವ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 7ನೇ ವೇತನ ಆಯೋಗದ ಜಾರಿ, ಉಚಿತ ಆರೋಗ್ಯ ಯೋಜನೆ ಮುಂತಾದ ಯೋಜನೆಗಳ ಘೋಷಿಸುವ ಎಲ್ಲ ವಿಶ್ವಾಸವಿದೆ. ಅಂದಿನ ಮಹಾ ಸಮ್ಮೇಳನದಲ್ಲಿ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.

ಸಿ.ಎಸ್.ಷಡಾಕ್ಷರಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ

Share this article