ಚಿತ್ರದುರ್ಗ: ಸರ್ಕಾರ ದಿವಾಳಿಯಾಗಿದೆ, ರೈತರಿಗೆ ಬೆಳೆ ಪರಿಹಾರ ಕೊಡಲು ದುಡ್ಡಿಲ್ಲ. ಹತ್ತು ರುಪಾಯಿ ಭಿಕ್ಷೆ ಹಾಕಿ. ನಿಮ್ ದುಡ್ಡು ಕಳಿಸಿ ಖಜಾನೆ ತುಂಬಿಸ್ತೇವೆ.
ಕಳೆದ ವರ್ಷ ಮುಂಗಾರು-ಹಿಂಗಾರು ಮಳೆ ಬಾರದ ಕಾರಣ ರೈತರು ಬಿತ್ತಿದ ಬೆಳೆಗಳು ಸಂಪೂರ್ಣವಾಗಿ ಒಣಗಿರುವುದರಿಂದ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ್ದರೂ ಇದುವರೆವಿಗೂ ರೈತರಿಗೆ ಎನ್‌ಡಿಆರ್‌ಎಫ್ ಹಾಗೂ ಬೆಳೆ ವಿಮೆ ಹಣ ಖಾತೆಗಳಿಗೆ ಜಮೆ ಆಗಿರುವುದಿಲ್ಲ. ಮಧ್ಯಂತರ ಬೆಳೆ ವಿಮೆ ಕೂಡ ರೈತರ ಕೈಸೇರಿಲ್ಲ ಎಂದು ಪ್ರತಿಭಟನಾ ನಿರತ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.
ಸಣ್ಣ ರೈತರ ಖಾತೆಗಳಿಗೆ ಪ್ರತಿ ತಿಂಗಳು 2 ಸಾವಿರ ರು.ಗಳನ್ನು ಜಮ ಮಾಡಿ ಅವಮಾನ ಮಾಡುವ ಬದಲು ಹೆಕ್ಟೇರ್‌ಗೆ 25 ಸಾವಿರ ರು.ಗಳನ್ನು ನೀಡಬೇಕು. ಇದಲ್ಲದೆ ಕೂಡಲೆ ಬೆಳೆ ವಿಮೆ ಪಾವತಿಸಿ ಸಂಕಷ್ಟದಲ್ಲಿರುವ ರೈತರನ್ನು ಪಾರು ಮಾಡುವಂತೆ ಒತ್ತಾಯಿಸಿದ ಪ್ರತಿಭಟನಾನಿರತ ರೈತರು ದನ-ಕರುಗಳಿಗೆ ಗೋಶಾಲೆಯನ್ನು ತೆರೆದು ಮೇವು ಮತ್ತು ನೀರು ಪೂರೈಸುವಂತೆ ಆಗ್ರಹಿಸಿದರು.ರೈತರು ಸ್ವಂತ ಖರ್ಚಿನಲ್ಲಿ ಟಿಸಿ ಮತ್ತು ಕಂಬಗಳನ್ನು ಅಳವಡಿಸಿಕೊಳ್ಳುವಂತೆ ಕಳೆದ ಸೆಪ್ಟಂಬರ್‍ನಲ್ಲಿ ಕಾನೂನು ಜಾರಿಗೆ ತಂದಿದ್ದನ್ನು ಸರ್ಕಾರ ಹಿಂದಕ್ಕೆ ಪಡೆದು ಮೊದಲಿನಂತೆ ಅಕ್ರಮ-ಸಕ್ರಮದಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ಎಲ್ಲಾ ಬ್ಯಾಂಕಿನಲ್ಲಿರುವ ಸಾಲ ಮನ್ನಾ ಮಾಡಿ ರೈತರಿ ನೆರವಿಗೆ ಧಾವಿಸುವಂತೆ ರೈತರು ಆಗ್ರಹಿಸಿದರು. ಭಿಕ್ಷಾಟನೆಯಿಂದ ಸಂಗ್ರಹವಾದ 2150 ರು. ಗಳನ್ನು ಕಂದಾಯ ಇಲಾಖೆಗೆ ಪಾವತಿಸಿ ರಸೀದಿ ಪಡೆಯಲಾಯಿತು.