ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಸರ್ಕಾರ ಸಿದ್ಧತೆ

KannadaprabhaNewsNetwork |  
Published : Mar 18, 2024, 01:50 AM ISTUpdated : Mar 18, 2024, 08:50 AM IST
ಶಾಲೆ | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲಿಷ್‌) ಆರಂಭಿಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಹೆಚ್ಚಾಗಬಹುದಾದ ಮಕ್ಕಳ ದಾಖಲಾತಿ ಪ್ರಮಾಣ, ಅಗತ್ಯಾನುಸಾರ ಮೂಲಸೌಲಭ್ಯ, ತರಗತಿ ಕೊಠಡಿಗಳು ಮತ್ತು ಬೋಧಕ ವರ್ಗದ ಲಭ್ಯತೆಯ ಬಗ್ಗೆ ಜಿಲ್ಲಾವಾರು ವರದಿ ಕೇಳಿದೆ.

ಲಿಂಗರಾಜು ಕೋರಾ
ಕನ್ನಡಪ್ರಭ ವಾರ್ತೆ, ಬೆಂಗಳೂರು

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲಿಷ್‌) ಆರಂಭಿಸಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಹೆಚ್ಚಾಗಬಹುದಾದ ಮಕ್ಕಳ ದಾಖಲಾತಿ ಪ್ರಮಾಣ, ಅಗತ್ಯಾನುಸಾರ ಮೂಲಸೌಲಭ್ಯ, ತರಗತಿ ಕೊಠಡಿಗಳು ಮತ್ತು ಬೋಧಕ ವರ್ಗದ ಲಭ್ಯತೆಯ ಬಗ್ಗೆ ಜಿಲ್ಲಾವಾರು ವರದಿ ಕೇಳಿದೆ.

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಪೋಷಕ ವಲಯದಲ್ಲಿ ಭಾರೀ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 2000 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಆಯವ್ಯಯದಲ್ಲಿ ಘೋಷಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು ಆದ್ಯತೆವಾರು ಶಾಲೆಗಳ ಪಟ್ಟಿಯೊಂದಿಗೆ ವರದಿಯನ್ನು ಆಯಾ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಡಿಡಿಪಿಐಗಳಿಂದ ಬಂದ ವರದಿಗಳನ್ನು ಪರಿಶೀಲಿಸಿ ಪ್ರಾದೇಶಿಕ ಆಯುಕ್ತರು ದ್ವಿಭಾಷಾ ಮಾಧ್ಯಮ ಆರಂಭದ ಬಗ್ಗೆ ತಮ್ಮ ಅಭಿಪ್ರಾಯದೊಂದಿಗೆ ಶಿಫಾರಸುಗಳನ್ನು ಸಲ್ಲಿಸಬೇಕು. 

ನಂತರ ಇಲಾಖೆಯು ಸಮಗ್ರ ಪರಿಶೀಲನೆ ನಡೆಸಿ ಅಗತ್ಯ ಅಭಿಪ್ರಾಯ ಕ್ರೋಢೀಕರಿಸಿ ಸರ್ಕಾರಕ್ಕೆ ಆದೇಶ ನೀಡುವಂತೆ ಕೋರಿಕೆ ಸಲ್ಲಿಸಲಿದೆ ಎಂದು ಹೇಳಿದ್ದಾರೆ.

ಜೊತೆಗೆ, ಈಗಾಗಲೇ ಇಂಗ್ಲಿಷ್‌ ಮಾಧ್ಯಮದಲ್ಲೂ ಬೋಧನೆ ನಡೆಸುತ್ತಿರುವ ರಾಜ್ಯದ 260ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ (ಕೆಪಿಎಸ್‌) ಎಲ್‌ಕೆಜಿ ಮತ್ತು 1ನೇ ತರಗತಿಗಳಿಗೆ ಮಕ್ಕಳ ದಾಖಲಾತಿ ಸಂಖ್ಯೆ ವ್ಯಾಪಕವಾಗಿ ಹೆಚ್ಚಳವಾಗಿರುವುದರಿಂದ ಆ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಹೆಚ್ಚುವರಿ ವಿಭಾಗ ಆರಂಭಿಸಲು, ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6, 7, 8ನೇ ತರಗತಿ, 9, 10ನೇ ತರಗತಿ ಆರಂಭಿಸಿ ಉನ್ನತೀಕರಿಸಲು ಕೂಡ ಸರ್ಕಾರ ಚಿಂತನೆ ನಡೆಸಿದೆ. 

ಇದರಿಂದ ಮಕ್ಕಳ ದಾಖಲಾತಿ ಎಷ್ಟು ಹೆಚ್ಚಾಗಬಹುದು, ಅದಕ್ಕನುಗುಣವಾಗಿ ಮೂಲಸೌಕರ್ಯ, ತರಗತಿ ಕೊಠಡಿ, ಶಿಕ್ಷಕರ ಲಭ್ಯತೆ ಇದೆಯೇ ಎಂಬ ಬಗ್ಗೆ ವರದಿ ನೀಡುವಂತೆ ಎಲ್ಲ ಡಿಡಿಪಿಐಗಳಿಗೆ ಸೂಚಿಸಲಾಗಿದೆ.

‘ಆಂಗ್ಲ ಮಾಧ್ಯಮ’ ನಿರ್ಧಾರ ಕೈಬಿಡಲು ಆಗ್ರಹ: ಈ ಮಧ್ಯೆ ಕೆಲ ಶಿಕ್ಷಣ ತಜ್ಞರು, ಕನ್ನಡಪರ ಸಂಘಟನೆಗಳು ಕನ್ನಡ ಭಾಷೆ ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಆಂಗ್ಲ ಮಾಧ್ಯಮ ಆರಂಭಿಸುವ ಯೋಚನೆ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಮೈಸೂರಿನ ಕನ್ನಡ ಕ್ರಿಯಾ ಸಮಿತಿ, ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಏಳು ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ. 

ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಹೊಸದಾಗಿ 2000 ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಜೆಟ್‌ನಲ್ಲಿ ಘೋಷಿಸಿರುವ 2000 ದ್ವಿಭಾಷಾ ಮಾಧ್ಯಮ ಪ್ರಾರಂಭಿಸುವ ತೀರ್ಮಾನ ಕೈಬಿಡಬೇಕು. 

ಗ್ರಾಮ ಪಂಚಾಯಿತಿಗೊಂದು ಸಾರ್ವಜನಿಕ ಶಾಲೆ ಬದಲು 2007ರ ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಅನುಷ್ಠಾನಗೊಳಿಸಬೇಕು.

2015ರಲ್ಲಿ ರಾಜ್ಯ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡು ರಾಷ್ಟ್ರಪತಿ ಒಪ್ಪಿಗೆಗಾಗಿ ಕಾಯುತ್ತಿರುವ ಕನ್ನಡ ಮಾಧ್ಯಮ ಮಸೂದೆಗೆ ಒಪ್ಪಿಗೆ ಪಡೆಯಲು ಶೀಘ್ರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ