ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನತೆಗೆ ಸಮಾಧಾನ ತಂದಿಲ್ಲ ಅನಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನಕಜ್ಜಿಕೊಪ್ಪಲು ಬಳಿ 20 ಕೋಟಿ ರು.ಅನುದಾನದಲ್ಲಿ ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಡವರಿಗೆ ನೆರವಾಗಲಿ ಎಂದು 5 ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರ್ಕಾರ 5 ಸಾವಿರ ಕೊಡುತ್ತಿದೆ. ಆದರೂ, ಇದು ಜನರಿಗೆ ಸಮಾಧಾನ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಬುದ್ಧಿವಂತರು ಅಲ್ಲದೇ, ದೊಡ್ಡ ಉದ್ಯಮಿ. ಹುಟ್ಟಿದಾಗಲೇ ಮೈಸೂರು ಕಂಡವರು. ನಾವು 30 ವರ್ಷಗಳ ನಂತರ ನೋಡಿದ್ದೇವೆ. ಅವರು ಚುನಾವಣೆಯಲ್ಲಿ ಜನರಿಗೆ ಕೊಟ್ಟ ಆಶ್ವಾಸನೆಯಂತೆ ನಡೆದುಕೊಳ್ಳಲಿ. ನಮ್ಮ ಜವಾಬ್ದಾರಿ ಅರಿತು ನಾವು ಕೆಲಸ ಮಾಡುತ್ತೇವೆ. ಅವರ ಜವಾಬ್ದಾರಿ ಅರಿತು ಅವರು ಕೆಲಸ ಮಾಡಲಿ ಎಂದು ಟಾಂಗ್ ನೀಡಿದರು.ಕೊನೆ ಭಾಗಕ್ಕೂ ನೀರು ಹರಿಯುತ್ತದೆ:
ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿಯಿಂದಾಗಿ ಅಚ್ಚುಕಟ್ಟಿನ ಕೊನೆ ಭಾಗದ ಮಳವಳ್ಳಿ ತಾಲೂಕಿಗೂ 24 ಗಂಟೆಯೊಳಗೆ ನೀರು ಹರಿಯುತ್ತಿದೆ. ಈ ಹಿಂದೆ ಮೂರು ಸಾವಿರ ಕ್ಯುಸೆಕ್ ನೀರು ಹರಿಸಿದರೂ ವಾರವಾದರೂ ಕೊನೆ ಭಾಗಕ್ಕೆ ನೀರು ತಲುಪುತ್ತಿರಲಿಲ್ಲ. ಈಗ 2 ಸಾವಿರ ಕ್ಯುಸೆಕ್ ನೀರು ಹರಿದರೆ ಸಾಕು ಕೊನೆ ಭಾಗದ ರೈತರು ನೀರು ಪಡೆಯಬಹುದು. ಆದರೆ, ವಿರೋಧಿಗಳು ವಿನಾಃ ಕಾರಣ ಕಾಮಗಾರಿ ಗುಣಮಟ್ಟದ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಅವರ ಒತ್ತಾಯದಂತೆ ರಸ್ತೆ, ಆಸ್ಪತ್ರೆ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳ ಅಭಿವೃದ್ಧಿ ಸರ್ಕಾರ ಅನುದಾನ ನೀಡಲಿದೆ ಎಂದರು.
ಮಂಡ್ಯದಿಂದ ಜಕ್ಕನಹಳ್ಳಿಗೆ ತಲುಪುವ ಸಂಪರ್ಕ ರಸ್ತೆಗಳನ್ನು ವೀಕ್ಷಣೆ ಮಾಡಲಾಗಿದೆ. ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಮಣ್ಣು ಸಾಗಿಸಲು ಟಿಪ್ಪರ್‌ಗಳ ಓಡಾಟದಿಂದ ರಸ್ತೆ ಹದಗೆಟ್ಟಿದೆ ಎಂಬ ದೂರುಗಳು ಕೇಳಿ ಬಂದಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ವಾರದೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ರಸ್ತೆ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.ಶ್ರೀರಂಗಪಟ್ಟಣ-ಕೆ.ಆರ್.ಪೇಟೆ ರಸ್ತೆ, ಕಿರಂಗೂರು-ನಾಗಮಂಗಲ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಮಾಡಲಾಗುವುದು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಒತ್ತಾಸೆಯಂತೆ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಲಿದೆ ಎಂದು ಭರವಸೆ ನೀಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹಲವು ಕಾರಣಗಳಿಂದ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿರಲಿಲ್ಲ. ಈಗ ಅಭಿವೃದ್ಧಿ ಕಾರ್ಯಗಳ ಜತೆಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಕೆನ್ನಾಳು ಗ್ರಾಪಂ ವ್ಯಾಪ್ತಿಯಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ದುದ್ದ ಹೋಬಳಿ ಚಂದಗಾಲು ಗ್ರಾಪಂ ವ್ಯಾಪ್ತಿಯಲ್ಲಿ ಒಂದು ವಾರ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಕಾಂಗ್ರೆಸ್ ಮುಖಂಡ ಬಿ.ರೇವಣ್ಣ, ರೈತಸಂಘ ಮುಖಂಡ ರಾಘು, ಮುಖಂಡರಾದ ಜಕ್ಕನಹಳ್ಳಿ ಬೆಟ್ಟಸ್ವಾಮಿ, ಚಂದ್ರು, ಕಾಡೇನಹಳ್ಳಿ ಸತೀಶ್, ಗುತ್ತಿಗೆದಾರರಾದ ನವೀನ್ ಇತರರು ಇದ್ದರು.