ಉಚಿತವಾಗಿ ವಿಮಾನ ಪ್ರಯಾಣ ಮಾಡಿದ ಸರ್ಕಾರಿ ಶಾಲೆ ಮಕ್ಕಳು

KannadaprabhaNewsNetwork | Published : Dec 7, 2024 12:33 AM

ಸಾರಾಂಶ

ಹೊಸದುರ್ಗ: ಸರ್ಕಾರಿ ಶಾಲೆಯ ಶಿಕ್ಷಕರ ಇಚ್ಛಾಶಕ್ತಿಯ ಫಲವಾಗಿ ಸರ್ಕಾರಿ ಶಾಲೆಯ ಮಕ್ಕಳು ದಾನಿಗಳ ನೆರವಿನಿಂದ ಉಚಿತವಾಗಿ ವಿಮಾನ ಪ್ರಯಾಣ ಮಾಡುವ ಅವಕಾಶ ಪಡೆದಿದ್ದಾರೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರಿಗೆ ಇದು ಅಚ್ಚರಿಯ ಸಂಗತಿಯಾದರೂ, ಇಲ್ಲಿನ ಮಕ್ಕಳು ಐಷಾರಾಮಿ ಪ್ರವಾಸದ ಸುಖ ಅನುಭವಿಸುತ್ತಿದ್ದಾರೆ.

ಹೊಸದುರ್ಗ: ಸರ್ಕಾರಿ ಶಾಲೆಯ ಶಿಕ್ಷಕರ ಇಚ್ಛಾಶಕ್ತಿಯ ಫಲವಾಗಿ ಸರ್ಕಾರಿ ಶಾಲೆಯ ಮಕ್ಕಳು ದಾನಿಗಳ ನೆರವಿನಿಂದ ಉಚಿತವಾಗಿ ವಿಮಾನ ಪ್ರಯಾಣ ಮಾಡುವ ಅವಕಾಶ ಪಡೆದಿದ್ದಾರೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಜನರಿಗೆ ಇದು ಅಚ್ಚರಿಯ ಸಂಗತಿಯಾದರೂ, ಇಲ್ಲಿನ ಮಕ್ಕಳು ಐಷಾರಾಮಿ ಪ್ರವಾಸದ ಸುಖ ಅನುಭವಿಸುತ್ತಿದ್ದಾರೆ.ತಾಲೂಕಿನ ಮಾರಬಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಎರಡು ದಿನಗಳ ಅಧ್ಯಯನ ಪ್ರವಾಸಕ್ಕಾಗಿ ಗುರುವಾರ ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳಸಿದ್ದಾರೆ. ಶಾಲೆಯ ಶಿಕ್ಷಕ ಯೋಗರಾಜ್ ದಾನಿಗಳ ನೆರವಿನಿಂದ ಪ್ರವಾಸ ಆಯೋಜಿಸಿದ್ದಾರೆ.ಸ್ಕೌಟ್ ಅಂಡ್ ಗೈಡ್ಸ್ ಸೇರಿರುವ ಶಾಲೆಯ 5 ರಿಂದ 7ನೇ ತರಗತಿವರಗೆ ವ್ಯಾಸಂಗ ಮಾಡುತ್ತಿರುವ 19 ಮಕ್ಕಳು, ಮೂವರು ಶಿಕ್ಷಕರು ಹಾಗೂ ಇಸಿಒ ಗುರುವಾರ ಮಧ್ಯಾಹ್ನ ವಿಮಾನ ಹತ್ತಿದರು. ಸದ್ಗುರು ಆರ್ಯುವೇದ ಕಂಪನಿ ಮಾಲೀಕ ಡಿ.ಎಸ್.ಪ್ರದೀಪ್ ಶೆಟ್ಟಿ, ಮಾರಬಘಟ್ಟದ ಚನ್ನಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಾಂತಕುಮಾರ ಸೇರಿದಂತೆ ಮತ್ತಿತರ ದಾನಿಗಳು ಆರ್ಥಿಕ ನೆರವು ಒದಗಿಸಿದ್ದಾರೆ.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳಿಗೆ ಬಸ್ಸಿನ ಪ್ರಯಾಣವೇ ಗಗನ ಕುಸುಮವಾಗಿರುವಾಗ ಇಲ್ಲಿನ ಶಿಕ್ಷಕ ಯೋಗರಾಜ್ ಮಕ್ಕಳನ್ನು ವಿಮಾನದಲ್ಲಿ ಪ್ರವಾಸ ಕರೆದೊಯ್ಯುವ ಕುರಿತು ಯೋಚಿಸಿ ಇತರ ಶಿಕ್ಷಕರೊಂದಿಗೆ ಚರ್ಚಿಸಿ ಅನುಷ್ಠಾನ ಗೊಳಿಸಲು ಮುಂದಾದರು. ಶಿಕ್ಷಕರ ಚಿಂತನೆಗೆ ದಾನಿಗಳಿಂದ ಉತ್ತಮ ಸ್ಪಂದನೆ ದೊರೆತು ಮಕ್ಕಳು ವಿಮಾನ ಹತ್ತಲು ಅನುಕೂಲವಾಯಿತು.ಎರಡು ದಿನಗಳ ಕಾಲ ಬೆಂಗಳೂರಿನ ವಿಧಾನಸೌಧ, ಹೈಕೋರ್ಟ್‌, ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರೂ ತಾರಾಲಯ, ಬನ್ನೇರುಘಟ್ಟದ ಜೈವಿಕ ಉದ್ಯಾನವನ ಸೇರಿದಂತೆ ಅಧ್ಯಯನ ಪ್ರವಾಸ ನಡೆಸಲಿರುವ ಮಕ್ಕಳು ಶನಿವಾರ ರಾತ್ರಿ ಹಿಂತಿರುಗಲಿದ್ದಾರೆ. ಮಾರಬಘಟ್ಟದ ಉದ್ಯಮಿ ಪ್ರಭಾಕರ್ ಮಕ್ಕಳಿಗೆ ಎರಡು ದಿನದ ಊಟ ವಸತಿಯ ಸೌಲಭ್ಯ ಕಲ್ಪಿಸಿದ್ದಾರೆ.ಸುಮಾರು ಇಪ್ಪತ್ತು ವರ್ಷಗಳಿಂದಲೂ ತಾಲೂಕಿನಲ್ಲಿ ಸೌಟ್ ಮತ್ತು ಗೈಡ್ಸ್ ನೇತೃತ್ವವಹಿಸಿರುವ ಶಿಕ್ಷಕ ಯೋಗರಾಜ್ ಪ್ರತಿ ಶಾಲೆಗೂ ಸ್ಕೌಟ್ ಮತ್ತು ಗೈಡ್ಸ್ ಪರಿಚಯಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕವಾಗಿಯೂ ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಸರ್ಕಾರಿ ಶಾಲೆಯನ್ನು ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳೊಂದಿಗೆ ಇಸಿಒ ಶಶಿಧರ್, ಶಾಲೆಯ ಶಿಕ್ಷಕರಾದ ರಾಮಣ್ಣ ಹಾಗೂ ಶೀಲಾ ಪ್ರವಾಸ ಕೈಗೊಂಡಿದ್ದಾರೆ.ಸಾರ್ವಜನಿಕರ ಸಹಕಾರದಿಂದ ಸರ್ಕಾರಿ ಶಾಲಾ ಮಕ್ಕಳು ವಿಮಾನ ಪ್ರಯಾಣದ ಖುಷಿ ಅನುಭವಿಸಲು ಸಾಧ್ಯವಾಗಿದೆ. ಸಮುದಾಯದ ಸಹಭಾಗತ್ವದಿಂದ ಸರ್ಕಾರಿ ಶಾಲೆಗಳನ್ನು ಉತ್ತಮವಾಗಿ ನಡೆಸಲು ಸಹಕಾರಿ ಯಾಗುತ್ತದೆ. ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರಿಗೆ ಅಭಿನಂದನೆಗಳು

- ಸೈಯದ್ ಮೋಸಿನ್, ಕ್ಷೇತ್ರ ಶಿಕ್ಷಣಾಧಿಕಾರಿ. ಸರ್ಕಾರಿ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸೌಲಭ್ಯಗಳನ್ನು ದೊರಕಿಸುವ ಸಲುವಾಗಿ ದಾನಿಗಳ ನೆರವಿನಿಂದ ವಿಮಾನ ಪ್ರಯಾಣ ಸಾಧ್ಯವಾಗಿದೆ. ನಾವು ಬಾಲ್ಯದಲ್ಲಿ ಅಕಾಶದಲ್ಲಿ ಹಾರಾಡುವ ವಿಮಾನ ನೋಡಿ ಕನಸುಕಾಣುತ್ತಿದ್ದೆವು. ನಮ್ಮ ಶಾಲೆ ಮಕ್ಕಳ ಕನಸು ನನಸಾಗಿದೆ

- ಯೋಗರಾಜ್ , ಮಾರಬಘಟ್ಟ ಸರ್ಕಾರಿ ಶಾಲೆ ಶಿಕ್ಷಕ.

Share this article