ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork | Updated : Jul 16 2024, 12:35 AM IST

ಸಾರಾಂಶ

ಪಾಂಡವಪುರ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಒಂದೇ ಸೂರಿನಲ್ಲಿ ಕೂರಿಸಿ ಜನರಿಗೆ ಅಗತ್ಯವಿರುವ ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡಿಕೊಡುವುದು ಇದರ ಉದ್ದೇಶ. ಕೆನ್ನಾಳು ಗ್ರಾಪಂ ವ್ಯಾಪ್ತಿಯಲ್ಲಿ ನಡೆದ 15 ದಿನಗಳ ಕಾರ್ಯಕ್ರಮ ಯಶಸ್ವಿಯಾಗಿದ್ದೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜನರು ಅಗತ್ಯ ಸೇವೆಗಾಗಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಎಂಬ ವಿನೂತನ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕು ದುದ್ದ ಹೋಬಳಿಯ ಚಂದಗಾಲು ಗ್ರಾಪಂ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ, ಇದು ಸೇವೆಯಲ್ಲ ನಮ್ಮ ಕರ್ತವ್ಯ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಒಂದೇ ಸೂರಿನಲ್ಲಿ ಕೂರಿಸಿ ಜನರಿಗೆ ಅಗತ್ಯವಿರುವ ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡಿಕೊಡುವುದು ಇದರ ಉದ್ದೇಶ. ಕೆನ್ನಾಳು ಗ್ರಾಪಂ ವ್ಯಾಪ್ತಿಯಲ್ಲಿ ನಡೆದ 15 ದಿನಗಳ ಕಾರ್ಯಕ್ರಮ ಯಶಸ್ವಿಯಾಗಿದ್ದೇವೆ ಎಂದರು.

ಪೂರ್ವ ತಯಾರಿ ಇಲ್ಲದ ಕಾರಣ ಅಲ್ಲಿ 15 ದಿನಗಳು ಬೇಕಾಯಿತು. ಆದರೆ, ಈ ಪಂಚಾಯ್ತಿಯಲ್ಲಿ ಪೂರ್ವ ಸಿದ್ಧತೆಯೊಂದಿಗೆ ಕೇವಲ 5 ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಈಗಾಗಲೇ ಪ್ರತಿ ಮನೆಗಳಿಗೆ ಭೇಟಿ ನೀಡಿ ಜನರಿಗೆ ಅಗತ್ಯವಿರುವ ಸರ್ಕಾರಿ ಸೇವೆ ಗುರುತಿಸಿ ಪಟ್ಟಿ ಮಾಡಿದ್ದು, ಅದರಂತೆ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ ಎಂದರು.

ಕಂದಾಯ, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಸೆಸ್ಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆ, ಜಿಪಂ, ನೀರಾವರಿ, ಭೂ ಮಾಪನ ಇಲಾಖೆ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ಖುದ್ದು ಹಾಜರಿದ್ದು ಸರ್ಕಾರಿ ಸೇವೆಗಳನ್ನು ಒದಗಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪೌತಿ ಖಾತೆ, ಪಹಣಿ ತಿದ್ದುಪಡಿ, ಪೋಡಿ, ಖಾತೆ, ಇ-ಸ್ವತ್ತು ಸಂಧ್ಯಾ ಸುರಕ್ಷಾ, ವೃದ್ಧಾಪ್ಯ, ಅಂಗವಿಕಲರ ವೇತನ, ಮನಸ್ವಿನಿ ಸೇವೆಗಳು ದೊರೆಯಲಿವೆ. ಎಲ್ಲಾ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಲಭ್ಯವಿರುವ ಕಾರಣ ಜನರನ್ನು ಅಲೆಸದೆ ಅಧಿಕಾರಿಗಳೇ ಪರಸ್ಪರ ಸಂಪರ್ಕ ಸಾಧಿಸಿಕೊಂಡು ಜನರ ಕೆಲಸ ಮಾಡಿಕೊಡಲಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಡಿ ಈಗಾಗಲೇ ಸೆಸ್ಕ್ ಅಧಿಕಾರಿಗಳು ಶಿಥಿಲಗೊಂಡಿದ್ದ 50 ವಿದ್ಯುತ್ ಕಂಬಗಳ ಬದಲಾವಣೆ ಮಾಡಲಾಗಿದ್ದು, ಜೋತು ಬಿದ್ದಿರುವ ಮತ್ತು ಮನೆ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಬದಲಾಯಿಸಲಿದ್ದಾರೆ ಎಂದರು.

ಸರ್ವೇ ಇಲಾಖೆ ಅಧಿಕಾರಿಗಳು ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲಿದ್ದಾರೆ. ಆ ಜಮೀನುಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮರಗಳನ್ನು ನೆಡಸಲಿದ್ದಾರೆ. ಅದೇ ರೀತಿ ಗ್ರಾಮಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮಗಳ ಸಂಪರ್ಕ ರಸ್ತೆ ಡಾಂಬರೀಕರಣಗೊಳಿಸಲು ಲೋಕೋಪಯೋಗಿ ಇಲಾಖೆ ಮತ್ತು ಜಿಪಂ ಅಧಿಕಾರಿಗಳು ಅಂದಾಜು ಪಟ್ಟು ತಯಾರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ರಾಮಠಾಣಾ ವಿಸ್ತರಣೆ:

ಗ್ರಾಮಠಾಣಾ ವಿಸ್ತರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಇದರಿಂದ ಜನರಿಗೆ ಅನುಕೂಲವಾಗಿ ಬ್ಯಾಂಕ್ ಲೋನ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ. ಸಹೋದರರ ನಡುವಿನ ವ್ಯಾಜ್ಯ ಪ್ರಕರಣಗಳನ್ನು ಗ್ರಾಮದ ಯಜಮಾನರ ಸಮ್ಮುಖದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಕೋರ್ಟ್ ಕಚೇರಿ ಅಲೆಯುವುದು ತಪ್ಪುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ವಸಂತಕುಮಾರ್, ಸಿಡಿಪಿಒ ಕುಮಾರಸ್ವಾಮಿ, ಭೂ ಮಾಪನ ಇಲಾಖೆ ಮಮತಾ ಮುಖಂಡರಾದ ಸಿ.ಕೆ.ನಾಗರಾಜು ಇತರರು ಇದ್ದರು.

Share this article