ಬ್ಯಾಡಗಿ: ತಮ್ಮ ಜೀವನವನ್ನೇ ಮುಡುಪಾಗಿಟ್ಟು ಉತ್ತಮ ಸಾಧನೆ ತೋರುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳ ಹೆಸರು ಜನಮಾನಸದಲ್ಲಿ ಉಳಿಯದಿರುವುದು ದುರಂತ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಆದರ್ಶ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ತಮ್ಮ ಜೀವವನ್ನೇ ಮುಡುಪಾಗಿಟ್ಟು ವಿವಿಧ ಕ್ರೀಡೆಗಳಲ್ಲಿ ಅಪ್ರತಿಮ ಸಾಧನೆ ತೋರಿದ ಕ್ರೀಡಾಪಟುಗಳಾದ ಹಾಕಿ ಮಾಂತ್ರಿಕ ಧ್ಯಾನಚಂದ್ ಸೇರಿದಂತೆ ಕ್ರೀಡಾ ಸಾಧಕರ ಜಯಂತಿಗಳನ್ನು ಸರ್ಕಾರದ ಪರವಾಗಿ ಆಚರಿಸುವ ಮೂಲಕ ಅವರ ಸಾಧನೆಗೆ ಗೌರವ ಸಲ್ಲಿಸುವ ಕೆಲಸವಾಗಬೇಕಾಗಿದೆ ಎಂದರು.
ಪದಕಗಳಿಗಾಗಿ ಪರದಾಟ: ಅಧ್ಯಕ್ಷತೆ ವಹಿಸಿದ್ದ ಜಯದೇವ ಶಿರೂರ ಮಾತನಾಡಿ, ಕ್ರೀಡೆಯು ದೈಹಿಕ ಪ್ರಯೋಜನಗಳನ್ನು ಮಾತ್ರವಲ್ಲದೇ ಕ್ರೀಡಾಪಟುಗಳ ಏಕಾಗ್ರತೆ ಸುಧಾರಿಸುತ್ತದೆ. ದೈಹಿಕ ಪರಿಶ್ರಮ ಮತ್ತು ಕೌಶಲ್ಯ ಒಳಗೊಂಡಿರುವ ಕ್ರೀಡೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿವೆ. ಅದರೆ ವಿಶ್ವದ ಪ್ರಮುಖ ಕ್ರೀಡಾಕೂಟಗಳಲ್ಲಿ ಪದಕ ಗಳಿಸಲು ಭಾರತೀಯ ಕ್ರೀಡಾಪಟುಗಳು ಪರದಾಡುತಿದ್ದಾರೆ ಎಂದರು.ಕ್ರೀಡಾತಾರೆಗಳ ಹೆಸರು ಮಾಯ: ವೀರೇಶ ಶಿರೂರ ಮಾತನಾಡಿ, ಹಾರುವ ಕುದುರೆ ಎಂದೇ ಖ್ಯಾತರಾದ ಮಿಲ್ಕಾ ಸಿಂಗ್ ಹಾಗೂ ಪಿ.ಟಿ. ಉಷಾ, ಅಶ್ವಿನಿ ನಾಚಪ್ಪ ಅವರ ಹೆಸರು ಈಗಿನ ಪೀಳಿಗೆ ಯುವಕರು ಇವರನ್ನು ಯಾರೆಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ವಿಶ್ವದಾಖಲೆ ಬರೆದ ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ, ಪಿ.ವಿ. ಸಿಂಧು, ಸೈನಾ ನೈಹ್ವಾಲ್ ಇನ್ನಿತರ ಕ್ರೀಡಾ ತಾರೆಯರು ಹೆಸರು ಕೂಡ ಕೆಲವೇ ದಿನಗಳಲ್ಲಿ ಮರೆತರೂ ಆಶ್ವರ್ಯ ಪಡಬೇಕಾಗಿಲ್ಲ ಎಂದರು.
ಇದಕ್ಕೂ ಮುನ್ನ ಒಲಿಂಪಿಕ್ ಧ್ವಜಾರೋಹಣ ನೆರವೇರಿತು. ಮೆರವಣಿಗೆ ಮೂಲಕ ಕ್ರೀಡಾಜ್ಯೋತಿ ಕ್ರೀಡಾಂಗಣಕ್ಕೆ ತರಲಾಯಿತು. ಬಳಿಕ ಕ್ರೀಡಾಪಟುಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಜರುಗಿತು.ಈ ವೇಳೆ ಪಿ.ಡಿ. ಶಿರೂರ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ, ಪ್ರಾಚಾರ್ಯ ಎನ್.ಡಿ. ಮಾಚೇನಹಳ್ಳಿ, ಉಪನ್ಯಾಸಕರಾದ ಶಿವಾನಂದ ಬೆನ್ನೂರ, ಚಂದ್ರಪ್ಪ, ಅವಿನಾಶ ಮೋಹಿತೆ, ಕೆ.ಪಿ. ಬ್ಯಾಡಗಿ ನೂತನ ಶಿಕ್ಷಣ ಸಂಸ್ಥೆ ನಿರ್ದೇಶಕ ಸ್ಮರಣ ಶಿರೂರ ಸೇರಿದಂತೆ ಇತರರಿದ್ದರು.