ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಚಟುವಟಿಕೆಗೆ ಸಮರ್ಪಕ ಅನುದಾನ ನೀಡುವಲ್ಲಿ ಅಸಡ್ಡೆ ತೋರುತ್ತಿರುವುದು ಸಲ್ಲದು ಎಂದು ಹಿರಿಯ ಸಾಹಿತಿ, ಪತ್ರಕರ್ತ ಡಾ. ಸರಜೂ ಕಾಟ್ಕರ್ ಹೇಳಿದರು.ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಭವನದಲ್ಲಿ ಡಾ. ಪಾಟೀಲ ಪುಟ್ಟಪ್ಪ ವೇದಿಕೆಯಲ್ಲಿ ಭಾನುವಾರ ನಡೆದ ಹುಬ್ಬಳ್ಳಿ ಶಹರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ₹2 ಲಕ್ಷ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ₹5 ಲಕ್ಷ ನೀಡಲಾಗುತ್ತಿತ್ತು. ಆದರೆ, ಇಂದು ಸರ್ಕಾರ ತಾಲೂಕು ಸಮ್ಮೇಳನಕ್ಕೆ ನಯಾಪೈಸೆ ಅನುದಾನ ನೀಡದಿರುವುದು ಖಂಡನಾರ್ಹ. ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಗಟ್ಟಿ ನಿಲುವು ತಗೆದುಕೊಂಡು ಸರ್ಕಾರದ ಮುಂದೆ ಹೋಗಿ ಅನುದಾನ ತರುವ ಕಾರ್ಯ ಕೈಗೊಳ್ಳಬೇಕು. ಆದರೆ, ಆ ಕಾರ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅನುದಾನ ಇಲ್ಲದೇ ಇರುವುದರಿಂದ ರಾಜ್ಯದಲ್ಲಿ ಎಲ್ಲೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿಲ್ಲ. ಇದು ಅತ್ಯಂತ ಬೇಸರದ ಸಂಗತಿ. ಕನ್ನಡಿಗರ ಹಣವನ್ನು ಕನ್ನಡಕ್ಕೆ ಒದಗಿಸದೇ ಇದ್ದರೆ ಹೇಗೆ? ಜಿಲ್ಲಾ ಸಾಹಿತ್ಯ ಘಟಕಗಳು ಮುಖ್ಯಮಂತ್ರಿಗೆ ಮನವಿ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡ ಸ್ಥಿತಿ ಏನು ಎಂಬುದು ಗೊತ್ತಿದೆ. ಖಂಡಿತವಾಗಿಯೂ ಅನುದಾನ ನೀಡುತ್ತಾರೆ ಎಂಬ ಭರವಸೆಯಿದೆ ಎಂದರು.
ಕವಿ, ಸಾಹಿತಿಗಳು ಕನ್ನಡ ಉಳಿಸಿ, ಬೆಳೆಸುವ ಕಾರ್ಯ ಕೈಗೊಂಡರೆ, ಕನ್ನಡಕ್ಕೆ ಧಕ್ಕೆ ಬಂದಾಗ ಅದರ ವಿರುದ್ಧ ಹೋರಾಟ ಮಾಡಿ ನ್ಯಾಯ ದೊರಕಿಸುವಲ್ಲಿ ಹೋರಾಟಗಾರರ ಪಾತ್ರ ಪ್ರಮುಖವಾಗಿದೆ. ಕವಿ, ಸಾಹಿತಿಗಳೊಂದಿಗೆ ಕನ್ನಡ ಹೋರಾಟಗಾರರಿಗೂ ಕಸಾಪ ಮನ್ನಣೆ ನೀಡಿ ಗೌರವಿಸುತ್ತಿರುವುದು ಅಭಿನಂದನಾರ್ಹ ಎಂದರು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಆಶಯ ನುಡಿಗಳನ್ನಾಡಿದರು. ಹು-ಧಾ ಮಹಾನಗರ ಪಾಲಿಕೆ ಮೇಯರ್ ವೀಣಾ ಬರದ್ವಾಡ ಅವರು ವೆಂಕಟೇಶ ಮರೇಗುದ್ದಿ ಬರೆದ ಕನ್ನಡವೇ ಎನ್ನೊಡವೆ, ಬೆಳ್ಳಿ ಬೆಳದಿಂಗಳು ಹಾಗೂ ಹನುಮಂತ ದೇಶಕುಲಕರ್ಣಿ ಅವರು ಬರೆದ ದೇದೀಪ್ಯಮಾನ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ವಿರೂಪಾಕ್ಷ ಕಟ್ಟಿಮನಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಿ.ಬಿ. ಮರಿಗೌಡ್ರ, ಶರಣಪ್ಪ ಕೊಟಗಿ, ಡಾ. ಬಿ.ಎಸ್. ಮಾಳವಾಡ, ಚನ್ನಬಸಪ್ಪ ಧಾರವಾಡಶೆಟ್ಟರ, ಆರ್.ಎಂ. ಗೊಗೇರಿ ಸೇರಿದಂತೆ ಹಲವರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಪ್ರವಾಸಿ ಮಂದಿರದಿಂದ ಸವಾಯಿ ಗಂಧರ್ವ ಸಭಾಂಗಣದ ವರೆಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಿತು.ಮನೆಯ ವಾತಾವರಣ ಕನ್ನಡವಾಗಲಿ: ಮರೇಗುದ್ದಿ
ನಮ್ಮ ಮನೆಯ ವಾತಾವರಣ ಕನ್ನಡತನದಿಂದ ಕೂಡಿರಬೇಕು. ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಯಬೇಕು. ಕನ್ನಡ ಗೀತೆ ಕೇಳುವುದು, ಕನ್ನಡ ಚಲನಚಿತ್ರ ನೋಡುವುದು ಮತ್ತು ಮನೆಯಲ್ಲಿಯೇ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಕನ್ನಡಿಗರು ರೂಢಿಸಿಕೊಳ್ಳಬೇಕು. ಕನ್ನಡವು ಕರುಳಿನ ಹಾಗೂ ಹೃದಯದ ಭಾಷೆಯಾಗಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷ ವೆಂಕಟೇಶ ಮರೇಗುದ್ದಿ ಹೇಳಿದರು.ಸರ್ವಾಧ್ಯಕ್ಷರ ಭಾಷಣ ಮಾಡಿದ ಅವರು, ಲೋಕಮಾನ್ಯ ಟಿಳಕರು 1907ರಲ್ಲಿ ಬೆಳಗಾವಿ ಜಿಲ್ಲೆ ಗುರ್ಲಹೊಸೂರಿನಲ್ಲಿ ಭಾಷಣ ಮಾಡುತ್ತಾ ಮಹಾರಾಷ್ಟ್ರ ಮತ್ತು ಕರ್ನಾಟಕ ಬೇರೆಯಲ್ಲ, ಎರಡೂ ಒಂದೇ ಆಗಿತ್ತು. ಎರಡೂ ರಾಜ್ಯಗಳ ಭಾಷೆ ಕನ್ನಡವೇ ಆಗಿತ್ತು ಎಂದು ಹೇಳಿದ್ದರು. ಕರ್ನಾಟಕವೇ ಮೊದಲು ಮಹಾರಾಷ್ಟ್ರವಾಗಿತ್ತು. ಅಷ್ಟೆಲ್ಲ ದಾಖಲೆಗಳಿದ್ದರೂ ಅವರು ಬೆಳಗಾವಿ ನಮ್ಮದು ಎಂದು ದಾಂಧಲೆ ಮಾಡುತ್ತಾ ಶಾಂತಿ ಕದಡುತ್ತಾ ದೇಶದ ಐಕ್ಯತೆಗೆ ಭಂಗ ತರುತ್ತಿರುವುದು ಖಂಡನಾರ್ಹ ಎಂದರು.