ಗದಗ: ರಾಜ್ಯದ ಜನರ ಮನೆ ಬಾಗಿಲಿಗೆ ಆಡಳಿತ ತೆಗೆದುಕೊಂಡು ಹೋಗುವ ಇಚ್ಛಾಶಕ್ತಿಯೊಂದಿಗೆ ಪ್ರಜೆಗಳತ್ತ ಪ್ರಭುತ್ವ ಈ ಕಲ್ಪನೆಯೊಂದಿಗೆ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಪಂದಿಸಿ ಕೆಲಸ ಮಾಡಬೇಕು ಇಲ್ಲವಾದಲ್ಲಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಮಂಗಳವಾರ ಇಲ್ಲಿ ಮುಂಡರಗಿ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 75 ವರ್ಷದ ನಂತರವೂ ನಮಗೆ ಶೌಚಾಲಯವಿಲ್ಲ, ಇರುವ ಶೌಚಾಲಯಗಳು ಸ್ವಚ್ಛವಾಗಿಲ್ಲ ಎಂದರೆ, ಇಂತಹ ಆಡಳಿತ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಸಹಜವಾಗಿಯೇ ಆಕ್ರೋಶ ಉಂಟಾಗುತ್ತದೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಈ ತಾತ್ಸಾರ ಮನೋಭಾವ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸಿ, ಜಿಡ್ಡುಗಟ್ಟಿದ ಆಡಳಿತವನ್ನು ಚುರುಕುಗೊಳಿಸುವುದೇ ಜನತಾ ದರ್ಶನ ಮುಖ್ಯ ಉದ್ದೇಶವಾಗಿದೆ ಎಂದ ಅವರು ಜಿಲ್ಲಾ ಕೇಂದ್ರದಲ್ಲಿ ನಡೆದ ಜನತಾ ದರ್ಶನ ಅಂಕಿಗಳು ಮತ್ತು ಸಾಧಿಸಿದ ಪ್ರಗತಿಯ ಕುರಿತು ವಿವರಿಸಿದರು.ಸರ್ಕಾರಿ ಶಾಲೆಗೆ ಚಾವಣಿ ಇಲ್ಲ: ವಾರ್ಡ್ ನಂ 16ರಲ್ಲಿರುವ ಸರ್ಕಾರಿ ಶಾಲೆಗೆ ಚಾವಣಿ ಇಲ್ಲ. ಮಕ್ಕಳಿಗೆ ಸಮಸ್ಯೆಯಾಗುತ್ತಿದೆ ಎಂದಾಗ ಸಚಿವರು ಮಾತನಾಡಿ, ಈ ಶಾಲೆಯೂ ಶಾಸಕ ದತ್ತು ತೆಗೆದುಕೊಂಡ ಶಾಲೆ ಆಗಿದೆ. ಇನ್ನೆರಡು ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಸಲಾಗುವುದು. ಡಿಡಿಪಿಐ ಈ ಸಮಸ್ಯೆ ತುರ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸೂರು ಇಲ್ಲದ ಹಿನ್ನೆಲೆ ತಾಲೂಕಿನ ಬಿದರಳ್ಳಿಯ ಇಬ್ಬರು ರೈತರು ಮನವಿ ಮಾಡಿಕೊಂಡರು. ಈ ವೇಳೆ ಬಿದರಳ್ಳಿ ಗ್ರಾಮದ ಪಿಡಿಒ ಅವರನ್ನು ಸ್ಥಳಕ್ಕೆ ಕರೆಸುವಂತೆ ಸಚಿವರು ಇಒ ಅವರಿಗೆ ಸೂಚಿಸಿದರು. ಸಮಯ ಕಳೆದರೂ ಪಿಡಿಒ ಜನತಾ ದರ್ಶನಕ್ಕೆ ಆಗಮಿಸದೇ ಇರುವುದರಿಂದ ಅಧಿಕಾರಿಗಳ ಮೇಲೆ ಸಚಿವರು ಕೋಪಗೊಂಡರು. ಕೆಲ ಸಮಯ ನಂತರ ಪಿಡಿಒ ಆಗಮಿಸಿ ಸಮಜಾಯಿಷಿ ಉತ್ತರ ನೀಡಿದರು. ಈ ನಡುವೆ ಸಚಿವರು ಒಂದು ವಾರದೊಳಗೆ ಅರ್ಜಿದಾರರಿಗೆ ನಿವೇಶನ ಪತ್ರ ವಿತರಿಸುವಂತೆ ಸೂಚಿಸಿದರು. ವಿತರಣೆ ಮಾಡದೇ ಇದ್ದರೆ ದೂರು ಸಲ್ಲಿಸುವಂತೆ ತಿಳಿಸಿದರು. ಜನತಾ ದರ್ಶನದಲ್ಲಿ ರೋಣ ಶಾಸಕ, ಖನಿಜ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೇರಿದಂತೆ ಹಿರಿಯ ಅಧಿಕಾರಿಗಳು, ಮುಂಡರಗಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು. ಅಮಾನತ್ತಿಗೆ ಸೂಚನೆ: ಕಾರ್ಮಿಕ ರಾಮಚಂದ್ರಪ್ಪ ಗುಗ್ಗರಿ ಎಂಬುವವರು ತಮ್ಮ ಮಗಳ ಮದುವೆಗೆ ಇಲಾಖೆಯಿಂದ ನೀಡುವ ಸಹಾಯಧನ 60 ಸಾವಿರ ವಿತರಿಸುವಂತೆ ಇಲಾಖೆಗೆ ಕಳೆದ ವರ್ಷವೇ ಅರ್ಜಿ ಸಲ್ಲಿಸಿದ್ದರು. ಆದರೆ, ಒಂದು ವರ್ಷ ನಂತರ ಅರ್ಜಿಯನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದನ್ನು ಸಚಿವರು ಗಮನಿಸಿ, ಸೇವಾ ನಿರ್ಲಕ್ಷ್ಯ ಎಸಗಿದ ಅಧಿಕಾರಿಯನ್ನು ಅಮಾನತ್ತಿನಲ್ಲಿ ಇಡಲು ಜಿಲ್ಲಾಧಿಕಾರಿಗೆ ಸೂಚಿಸಿ, ಸಾಧ್ಯವಾದಷ್ಟು ಬೇಗನೇ ಸಮಸ್ಯೆ ಬಗೆ ಹರಿಸುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೋಲಾರ್ ಬಳಕೆ ಮಾಡಿ:ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಹೊಸ ಗುಮ್ಮಗೋಳ ಗ್ರಾಮದ ರೈತರು ಕೊಳವೆ ಬಾವಿಗೆ ವಿದ್ಯುತ್ ಪೂರೈಕೆಗೆ ವಿದ್ಯುತ್ ಕಂಬ ಅಳವಡಿಸುವಂತೆ ಇಲಾಖೆಗೆ ಸೂಚಿಸುವಂತೆ ಮನವಿ ಮಾಡಿದರು. ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ವಿದ್ಯುತ್ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಏನು ತೊಂದರೆ ಎಂದರು. ಇದೇ ಸಂದರ್ಭದಲ್ಲಿ ಕೊಳವೆ ಬಾವಿಗೆ ವಿದ್ಯುತ್ ಪೂರೈಕೆಗೆ ಸೋಲಾರ್ ಅಳವಡಿಸಿಕೊಳ್ಳಲು ಇಲಾಖಾ ಅಧಿಕಾರಿಗಳು ಸೂಚಿಸಿದರು. ಇದಕ್ಕೆ ರೈತರು ಒಪ್ಪದೇ ಇದ್ದಾಗ, ಬೇರೆ ರಾಜ್ಯಗಳಿಗೆ ಹೋಗಿ ಸೋಲಾರ್ ಕೊಳವೆ ಬಾವಿ ಪರಿಶೀಲಿಸಿಕೊಂಡು ಬಂದಿರುವ ರೈತರಿಂದ ಸೋಲಾರ್ ಸಾಧಕ ಬಾಧಕಗಳನ್ನು ಜನತಾ ದರ್ಶನದಲ್ಲಿದ್ದ ಎಲ್ಲರಿಗೂ ಮಾಹಿತಿ ನೀಡಿಸಿದರು. 15 ದಿನಗಳ ಒಳಗಾಗಿ ವಿದ್ಯುತ್ ಪೂರೈಕೆ ಮಾಡುವ ಭರವಸೆಯನ್ನು ನೀಡಿದರು. ಮಾಸಾಶನ ಮಂಜೂರಾತಿ: ಚುರ್ಚಿಹಾಳ ಗ್ರಾಮದ ಮಂಜುನಾಥ ಶಾಂತಯ್ಯನಮಠ ಎಂಬ 16 ವರ್ಷದ ವಿಶೇಷಚೇತನ ಬಾಲಕನನ್ನು ಪೋಷಕರು ವೇದಿಕೆ ಮೇಲೆ ಹೊತ್ತುಕೊಂಡು ಕರೆತಂದು ಮಾಸಾಶನ ಬರುತ್ತಿಲ್ಲ ಎಂದು ಅಂಗಲಾಚಿದರು. ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸುಜಾತಾ ದೊಡ್ಡಮನಿ ವಿಶೇಷಚೇತನ ಬಾಲಕನನ್ನು ವೇದಿಕೆ ಕರೆತರಲು ಸಹಾಯ ಮಾಡಿದ್ದರು. ಈ ದೃಶ್ಯ ಎಲ್ಲರನ್ನು ಮನ ಕಲಕುವಂತೆ ಮಾಡಿತು. ಪರಿಸ್ಥಿತಿ ಗಮನಿಸಿದ ಎಚ್.ಕೆ. ಪಾಟೀಲ ಅವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು, ಸಂಜೆ 4 ಗಂಟೆ ಒಳಗಾಗಿ ಮಾಸಾಶನ ಮಂಜೂರಾತಿ ನಿಮ್ಮ ಕೈ ಸೇರಲಿದೆ ಎಂದು ಭರವಸೆ ನೀಡಿದರು.ವೃದ್ಧೆಯ ಜಮೀನು ಕಬಳಿಕೆ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಮುಂಡರಗಿಯ ದುರ್ಗವ್ವ ಬಾಗೇವಾಡಿ ಎಂಬ ವೃದ್ಧೆಯ 4 ಎಕರೆ ಜಮೀನು ಕಬಳಿಸಿದ ವಿಷಯ ಜನತಾ ದರ್ಶನದಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು. ವೃದ್ಧೆಗೆ ಮಂಜೂರಾದ ಜಮೀನನ್ನು ಅಪರ ಜಿಲ್ಲಾಧಿಕಾರಿ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಪರಭಾರೆ ಮಾಡಿಕೊಂಡಿದ್ದಾರೆ ಎಂಬುದನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳೇ ಕಾರ್ಯಕ್ರಮದಲ್ಲಿ ಒಪ್ಪಿಕೊಂಡರು. ಈ ಕುರಿತು ಎಚ್.ಕೆ. ಪಾಟೀಲರು ಮಾತನಾಡಿ, ಮೂರು ದಿನಗಳ ಒಳಗಾಗಿ ಪರಭಾರೆ ಮಾಡಿದ ಪ್ರಭಾವಿಗಳನ್ನು ಕರೆಸಿ ರಾಜೀ ಮಾಡಿಕೊಡಬೇಕು. ಒಪ್ಪದೇ ಇದ್ದಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಸಚಿವರು ಜಿಲ್ಲಾಡಳತಕ್ಕೆ ಸೂಚಿಸಿದರು.