ಸರ್ಕಾರಗಳಿಂದ ರೈತರ ಬೆನ್ನೆಲುಬು ಮುರಿಯುವ ಕೆಲಸ-ರಾಮಣ್ಣ

KannadaprabhaNewsNetwork | Published : Jun 11, 2024 1:36 AM

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೆನ್ನೆಲುಬು ಮುರಿಯುವ ಕೆಲಸ ಮಾಡುತ್ತಿವೆ. ರೈತರ ಬೇಡಿಕೆಗಳನ್ನು ಕನಿಷ್ಠ ಸೌಜನ್ಯದಿಂದ ಪರಿಶೀಲನೆ ನಡೆಸದೇ ನಿರ್ಲಕ್ಷ್ಯ ತೋರುತ್ತಿವೆ. ಅದಕ್ಕಾಗಿ ರೈತರು ಸಂಘಟಿತರಾಗಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ಹಾವೇರಿ:ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೆನ್ನೆಲುಬು ಮುರಿಯುವ ಕೆಲಸ ಮಾಡುತ್ತಿವೆ. ರೈತರ ಬೇಡಿಕೆಗಳನ್ನು ಕನಿಷ್ಠ ಸೌಜನ್ಯದಿಂದ ಪರಿಶೀಲನೆ ನಡೆಸದೇ ನಿರ್ಲಕ್ಷ್ಯ ತೋರುತ್ತಿವೆ. ಅದಕ್ಕಾಗಿ ರೈತರು ಸಂಘಟಿತರಾಗಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ರೈತ ಹುತಾತ್ಮ ದಿನಾಚರಣೆಯ ೧೭ನೇ ವರ್ಷಾಚರಣೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರೈತರ ಬೇಡಿಕೆಗೆ ಹೋರಾಟ ಮಾಡುವಾಗ ಅವರ ಮೇಲೆ ಗುಂಡು ಹಾರಿಸುವ ಪ್ರವೃತ್ತಿ ಹಿಂದಿನಿಂದಲೂ ನಡೆದಿದೆ. ಆದರೆ ರೈತರು ಅದಕ್ಕೆ ಎದೆಗುಂದದೇ ಮುನ್ನಡೆಯುತ್ತಾರೆ, ಹೋರಾಟಕ್ಕೆ ಮುಂದಾಗುತ್ತಾರೆ ಎಂಬುದು ಈ ವೇದಿಕೆಯಿಂದ ಸ್ಪಷ್ಟ ಎಂದು ಎಚ್ಚರಿಸಿದರು.ಇತ್ತೀಚಿನ ದಿನಗಳಲ್ಲಿ ರೈತರ ಒಂದು ಸೌಲಭ್ಯಕ್ಕೆ ಹತ್ತಾರುಬಾರಿ ಕಚೇರಿಗೆ ಅಲೆದಾಡಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈತ ಸಂಘ ಬಲಗೊಳ್ಳಬೇಕಿದೆ. ರೈತರು ತಮ್ಮ ಸಮಸ್ಯೆಗಳನ್ನು ರೈತ ನಾಯಕರಲ್ಲಿ ಕೋರಿಕೊಂಡಲ್ಲಿ ಸಂಘಟಿತ ಹೋರಾಟಕ್ಕೆ ಸಂಘಟನೆ ಸದಾಸಿದ್ಧವಿದೆ. ಇಲ್ಲದೇ ಹೋದಲ್ಲಿ ನಿಮ್ಮ ಏಕಾಂಗಿ ಹೋರಾಟ ನಿಮ್ಮ ವಿಶ್ವಾಸವನ್ನು ಕಡಿಮೆ ಮಾಡಬಹುದು ಎಂದು ಸಲಹೆ ಮಾಡಿದರು.ದೆಹಲಿಯಲ್ಲಿ ೧೩ ತಿಂಗಳು ನಿರಂತರ ಹೋರಾಟ ಮಾಡಿದ ಪರಿಣಾಮ ರೈತ ವಿರೋಧಿ ಎಪಿಎಂಸಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ರೈತರು ಒಗ್ಗಟ್ಟಿನಿಂದ ಹೋರಾಟ ಮಾಡದಿದ್ದರೆ ನಮ್ಮ ಒಕ್ಕಲುತನಕ್ಕೂ ಉಳಿಗಾಲವಿಲ್ಲ. ಜಿಲ್ಲಾಡಳಿತ, ತಾಲೂಕಾಡಳಿತ ನಿಷ್ಕ್ರೀಯಗೊಂಡಿದ್ದು, ಹೋರಾಟ ಮಾಡಿಯೇ ನಮ್ಮ ಹಕ್ಕುಪಡೆಯಬೇಕಾಗಿದೆ. ರೈತರಿಗೆ ನ್ಯಾಯಯುತವಾಗಿ ಬರಬೇಕಾದ ಪರಿಹಾರವನ್ನು ಇನ್ನೂ ನೀಡಿಲ್ಲ. ಜಿಲ್ಲೆಯಲ್ಲಿ ಸುಮಾರು ೧೦ ಸಾವಿರ ರೈತರಿಗೆ ಪರಿಹಾರ ಬಂದಿಲ್ಲ ಎಂದರು. ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ರೈತರ ಆತ್ಮವಿಶ್ವಾಸ ಹೆಚ್ಚಿಸಿ, ಅವರಲ್ಲಿನ ಆತ್ಮಹತ್ಯೆಯಂತಹ ಪ್ರವೃತ್ತಿ ಬಿಡಿಸಿ ವಿಶ್ವಾಸ ಮೂಡಿಸಲು ಸಂಘಟನೆ ದಿಟ್ಟ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ನಿಮ್ಮ ಬೆಳೆ ವಿಮೆ, ಪರಿಹಾರದ ಕುರಿತು ಸಂಘಟನೆಯ ನಾಯಕರೊಂದಿಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಿ. ಇಲ್ಲದೇ ಹೋದಲ್ಲಿ ಅಧಿಕಾರಿಗಳು ನಿಮ್ಮನ್ನು ಅಲೆದಾಡಿಸುವ ಜತೆಗೆ ನಿಮ್ಮನ್ನು ಹಾದಿ ತಪ್ಪಿಸಲಿದ್ದಾರೆ. ಈ ನಿಟ್ಟಿನಲ್ಲಿ ರೈತರು ಜಾಗೃತಿ ವಹಿಸಬೇಕಿದೆ ಎಂದು ಕರೆ ನೀಡಿದರು.ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ಅಗಲಿದ ರೈತ ನಾಯಕರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಅಡಿವೆಪ್ಪ ಆಲದಕಟ್ಟಿ, ಮಹಮದ್‌ಗೌಸ್ ಪಾಟೀಲ, ಶಿವಬಸಪ್ಪ ಗೋವಿ, ಎಚ್.ಎಚ್.ಮುಲ್ಲಾ, ಮಂಜುಕದಂ, ಪ್ರಭುಗೌಡ ಪ್ಯಾಟಿ, ಶಿವಯೋಗಿ ಹೊಸಗೌಡ್ರ, ಬಸನಗೌಡ ಗಂಗಪ್ಪನವರ, ಸುರೇಶ ಛಲವಾದಿ ಇತರರು ಇದ್ದರು. ಬಳಿಕ ಜಿಲ್ಲಾಧಿಕಾರಿ ಮೂಲಕ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.

Share this article