ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವರ್ತಮಾನ ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯಗಳೇ ಮೌಲ್ಯಗಳಾಗಿ ಚಲಾವಣೆ ಆಗುತ್ತಿರುವುದು ಆತಂಕಕಾರಿ ವಿಚಾರವಾದರೂ ನಾವು ನೀವು ಒಳ್ಳೆದನ್ನೇ ಬಿತ್ತೋಣ, ನೆಲಮೂಲ ಸಂಸ್ಕೃತಿ ಮರೆದಿರೋಣ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಗರ ಹೊರವಲಯದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ 2023-24 ನೇ ಸಾಲಿನ ಎನ್‌ಎಸ್‌ಎಸ್, ಕ್ರೀಡಾ ಸಾಂಸ್ಕೃತಿಕ ಚಟವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಇತರರಿಗಾಗಿ ಬದುಕಬೇಕು
ತಮಗೆ ಸರ್ಕಾರಿ ಶಾಲೆ ಕಾಲೇಜು ಮಕ್ಕಳೆಂದರೆ ಇಷ್ಟ. ಏಕೆಂದರೆ ಇಲ್ಲಿ ನೆಲಮೂಲ ಸೊಗಡಿದೆ ಮಾನವೀಯತೆಯ ಸ್ಪರ್ಶವಿದೆ. ನಿಮಗೆ ಹೇಳುವ ಸಂದೇಶವೆಂದರೆ ನಾವು ನಮಗಾಗಿ ಬದುಕುವುದು ದೊಡ್ಡದಲ್ಲ.ಇತರರಿಗಾಗಿ ಬದುಕುವುದು ದೊಡ್ಡದು ಎಂಬುದನ್ನು ಮರೆಯದಿರಿ. ಸರ್ಕಾರಿ ವ್ಯವಸ್ಥೆಯಲ್ಲಿ ಓದಿರುವ ಲಕ್ಷಾಂತರ ಮಂದಿ ಐಎಎಸ್, ಐಪಿಎಸ್ ಸಹಿತ ಅನೇಕ ಹುದ್ದೆಗಳಲ್ಲಿ ಇದ್ದಾರೆ. ಸಮಾಜಕ್ಕೆ ಮಾದರಿಯಾಗಿದ್ದಾರೆ. ಕೀಳರಿಮೆ ಬಿಟ್ಟು ಚೆನ್ನಾಗಿ ಓದಿದರೆ ನೀವು ಕೂಡ ಅವರಂತೆ ಆಗಬಹುದು ಎಂದು ಸ್ಫೂರ್ತಿ ತುಂಬಿದರು.ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವಸಮೂಹ ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್‌ಗೆ ದಾಸರಾಗಿ ತಮ್ಮತನವನ್ನು ಕಳೆದು ಕೊಂಡಿದ್ದಾರೆ. ಇದನ್ನು ನೋಡಿದಾಗ ಮೊಬೈಲ್ ಕೈಯಲ್ಲಿ ನಾವಿದ್ದೇವೋ, ನಮ್ಮ ಕೈಲಿ ಮೊಬೈಲಿದೆಯೋ ಎಂಬ ಅನುಮಾನ ಉಂಟಾಗುತ್ತಿದೆ. ನಗರ ಪಟ್ಟಣದ ವಿದ್ಯಾರ್ಥಿಗಳಿಗೆ ಪ್ರಕೃತಿಯ ಸ್ಪರ್ಷವೇ ಇಲ್ಲವಾಗಿದೆ. ಅವರು ಕೂಡ ನಮ್ಮ ಮಕ್ಕಳೇ ಅಲ್ಲವೆ ಎನಿಸಿದರೂ ಇಂತಹವರಿಂದ ದೇಶದ ಭವಿಷ್ಯ ಉಳಿಸಲು ಸಾಧ್ಯವೇ ಎಂದು ಅನುಮಾನ ಬರುತ್ತದೆ ಎಂದರು.ಅಪ್ಪ ಅಮ್ಮನೇ ರೋಲ್ ಮಾಡೆಲ್
ಇಂತಹ ಮಕ್ಕಳಿಗೆ ಅಜ್ಜ ಅಜ್ಜಿಯ ಸಂಬಂಧ, ಮಣ್ಣು, ಮಡಿಕೆ, ಕೆರೆ ಕುಂಟೆ, ನದಿ ನಾಲೆಗಳ ಬಗ್ಗೆ ತಿಳಿಸಬೇಕಿದೆ. ಅಕ್ಕಿ ರಾಗಿ ಜೋಳ ಅವರೆ ತೊಗರಿ ಕಡಲೆ ಹೇಗೆ ಬೆಳೆಯುತ್ತಾರೆ ಎನ್ನುವ ಬಗ್ಗೆ ತಿಳಿಸಬೇಕು. ಸಾಂಸ್ಕೃತಿಕ ವಿಘಟನೆಯ ಕಾಲದಲ್ಲಿ ವಿವೇಕವಿಲ್ಲದ ನಡಿಗೆ ನಮ್ಮದಾಗಿದೆ. ಇದು ದೂರವಾಗಬೇಕಾದರೆ ಪರಂಪರೆಯ ಪಾದಸ್ಪರ್ಶ ನಮ್ಮದಾಗಬೇಕು. ಸಿನಿಮಾ ತಾರೆಯರನ್ನು ರೋಲ್ ಮಾಡೆಲ್‌ಗಳಾಗಿ ಮಾಡಿಕೊಳ್ಳದೆ ತಂದೆತಾಯಿಯನ್ನು ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಕಾಲೇಜು ಶಿಕ್ಷಣ ಇಲಾಖೆಯ ರೂಸಾ ಕೋ ಆರ್ಡಿನೇಟರ್ ಸುಮ ಮಾತನಾಡಿ, ಬಹುತ್ವದ ಸಮಾಜದಲ್ಲಿ ನಂಬಿಕೆಯಿಟ್ಟಿರುವ ನಾನು. ಜನ್ಮಕೊಟ್ಟ ತಂದೆತಾಯಿಯನ್ನು ಆದರ್ಶವಾಗಿ ಕಂಡಿದ್ದೇನೆ. ನೀವು ಕೂಡ ಇದನ್ನೇ ಪಾಲಿಸಿ ಎಂದು ಹೇಳಲು ಹೆಮ್ಮೆಯೆನಿಸಿದೆ. ಕಾಲೇಜಿಗೆ ಬರುವ ಹೆಣ್ಣುಮಕ್ಕಳು ಮನೆಯ ಊಟಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಇದಾದಲ್ಲಿ ರಕ್ತಹೀನತೆ ದೂರವಾಗುತ್ತದೆ. ಪಠ್ಯಕ್ಕೆ ನೀಡುವಷ್ಟೇ ಮಹತ್ವ ಪಠ್ಯೇತರ ಚಟವಟಿಕೆಗಳಿಗೂ ನೀಡಿ. ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಗುರುಪರಂಪರೆ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.ದಿಕ್ಕು ತಪ್ಪಿಸುವ ಆಧುನಿಕ ಶಿಕ್ಷಣ
ಜಾನಪದ ಗಾಯಕ ಗಾನ ಅಶ್ವತ್ ಮಾತನಾಡಿ, ಆಧುನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ದಿಕ್ಕುತಪ್ಪಿಸಿದೆ. ಮನುಷ್ಯ ನಾಗರೀಕನಾದಷ್ಟೂ ಜಾತೀಯತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾನೆ. ಕಲಾವಿದರನ್ನು ಕೂಡ ಜಾತಿಯಿಂದ ಗುರುತಿಸುವ ಪರಿಪಾಠ ಹೆಚ್ಚಿರುವುದು ಬೇಸರ ತರಿಸಿದೆ. ಇದನ್ನು ಮನಗಂಡು ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರವೇ ಘನತೆಯ ಬದುಕು ನಮ್ಮದಾಗಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆ ಸಾಂಸ್ಕೃತಿಕ ಚಟವಟಿಕೆಗಳಲ್ಲಿ ತೋರಿದ ಸಾಧನೆಗಾಗಿ ಪ್ರಮಾಣ ಪತ್ರ ಹಾಗೂ ಪಾರಿತೋಷಕ ವಿತರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ್,ಸಾಂಸ್ಕೃತಿಕ ಚಟವಟಿಕೆಗಳ ಸಂಚಾಲಕ ಅಶ್ವತ್ಥನಾರಾಯಣ, ಎನ್‌ಎಸ್‌ಎಸ್ ಸಂಚಾಲಕ ಶಿವಾನಂದ,ವ್ಯವಸ್ಥಾಪಕ ಸುಬ್ರಮಣಿ, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.