ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸಂಘವು ಬಲಿಷ್ಠವಾಗಿ ಬೆಳೆಯಬೇಕಾದರೆ, ಸಂಘದ ಸದಸ್ಯರ ಸಂಪೂರ್ಣ ಬೆಂಬಲ ಕಾಲ ಕಾಲಕ್ಕೆ ನಡೆಯುವ ಸಭೆಗಳಲ್ಲಿ ಸಲಹೆ ಸೂಚನೆಗಳನ್ನು ನೀಡುವುದರಿಂದ ಸಂಘವು ಬಲಿಷ್ಠತೆಗೊಳ್ಳಲು ಸಾಧ್ಯ ಎಂದು ಗೌಡ ಸಂಘ ಸುಂಟಿಕೊಪ್ಪ ನಾಡು 8ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ ಹೇಳಿದರು. ಭಾನುವಾರ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ 8ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮೂಲ ಧ್ಯೇಯೋದ್ದೇಶ ನಮ್ಮ ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಸ್ಥಾಪಿಸಲಾಗಿದೆ. ಕಳೆದ 7 ವರ್ಷಗಳಿಂದ ಸಂಘ ಸದಸ್ಯರು ಶಿಕ್ಷಣ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆಗೈದ ಜನಾಂಗದವರನ್ನು ಗುರುತಿಸಿ ವೇದಿಕೆಯ ಮುಖಾಂತರ ಗೌರವ ಸಮರ್ಪಣೆಯನ್ನು ನೀಡಲಾಗುತ್ತಿದೆ. ಕಳೆದ 7 ವರ್ಷಗಳಿಂದ ಗೌಡ ಸಂಘದ ಸಮಾಜ ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದ್ದು, ಸಂಘದ ಸದಸ್ಯರ ಧನ ಸಹಾಯ ನೀಡಿದ್ದಲ್ಲಿ ಮುಂದಿನ ದಿನಗಳಲ್ಲಿ ಸ್ವಂತ ನಿವೇಶನವನ್ನು ಖರೀದಿಸಿ ಉತ್ತಮ ಗುಣಮಟ್ಟದ ಸಮಾಜ ನಿರ್ಮಿಸುವ ಇರಾದೆ ಹೊಂದಲಾಗಿದೆ. ಆದುದರಿಂದ ಸಂಘದ ಆರ್ಥಿಕ ಸಹಾಯವನ್ನು ನೀಡುವ ಮೂಲಕ ಸಹಕರಿಸುವಂತೆ ಸಂಘದ ಸದಸ್ಯರಲ್ಲಿ ಮನವಿ ಮಾಡಿಕೊಂಡರು.
ಕುಂಜಿಲನ ಎಸ್. ಮಂಜುನಾಥ್ ಅವರು ಮಾತನಾಡಿ, ಸಂಘದಲ್ಲಿ ಈಗಾಗಲೇ 800 ಜನ ಸದಸ್ಯ ಬಲವನ್ನು ಹೊಂದಿದೆ. ಸಂಘವು ಸಧೃಡವಾಗಿ ಬೆಳೆಯಬೇಕಾದರೆ ಸಂಘದ ಸದಸ್ಯರ ಸಂಪೂರ್ಣ ಬೆಂಬಲ ಅವಶ್ಯಕವಾಗಿರುತ್ತದೆ. ಪ್ರತಿಯೊಬ್ಬ ಸದಸ್ಯರು ಸಂಘವನ್ನು ಬಲಾಢ್ಯಗೊಳಿಸಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.ಇದೇ ಸಂದರ್ಭ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಬಲ್ಲಡ್ಕ ಅಭಿಜನ್, ಪುಳ್ಳಿಜ್ಜನ ರಿತೀಶ್, ವಾಣಿಜ್ಯ ವಿಭಾಗದಲ್ಲಿ ಅಯ್ಯಂಡ್ರ ದಿವ್ಯಶ್ರೀ, ಯಂಕನ ವರ್ಧಿನಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಗೌರವ ಸಮರ್ಪಣೆಯನ್ನು ಸಲ್ಲಿಸಿದರು.
ಸಮಾರಂಭದ ವೇದಿಕೆಯಲ್ಲಿ ಕೊಡಗು ಜಿಲ್ಲಾ ಸರ್ಕಾರಿ ನಿವೃತ್ತ ಗೌಡ ಸಂಘದ ಅಧ್ಯಕ್ಷ ಕೊರನ ವಿಶ್ವನಾಥ್, ಗೌಡ ಸಂಘ ಸುಂಟಿಕೊಪ್ಪ ನಾಡು ಸಂಘದ ಉಪಾಧ್ಯಕ್ಷ ಬಿಳಯರ ಜವಹರ್, ಪ್ರಧಾನ ಕಾರ್ಯದರ್ಶಿ ಯಂಕನ ಕೌಶಿಕ್, ಖಜಾಂಜಿ ಪಟ್ಟೆಮನೆ ಉದಯಕುಮಾರ್, ಸಹಕಾರ್ಯದರ್ಶಿ ಮಾಗಲು ವಸಂತ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.ಕಾರ್ಯಕ್ರಮದ ಮೊದಲಿಗೆ ಬಿಳಿಯಾರ ಜವಾಹರ್ ಸ್ವಾಗತಿಸಿದರು. ಯಂಕನ ಕೌಶಿಕ್ ನಿರೂಪಿಸಿದರು. ಪಟ್ಟೆಮನೆ ಕುಸುಮ ವಂದಿಸಿದರು.