ಪದವೀಧರ ಕ್ಷೇತ್ರ ಚುನಾವಣೆ: ಬಂಡಾಯಕ್ಕೆ ಸಿಕ್ಕಿಲ್ಲ ಗೆಲುವು

KannadaprabhaNewsNetwork |  
Published : Jun 08, 2024, 12:37 AM IST
111 | Kannada Prabha

ಸಾರಾಂಶ

ಪರಿಷತ್‌ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಬಂಡಾಯ ಹೊಸದಲ್ಲ. 2015ರಲ್ಲಿ ಸ್ಥಳೀಯಾಡಳಿತಗಳಿಂದ ಆಯ್ಕೆಯಾಗುವ ಪರಿಷತ್‌ ಸ್ಥಾನದ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಇಬ್ಬರ ಬಂಡಾಯ ಎದುರಿಸಿ ಗೆದ್ದಿತ್ತು.

ಆತ್ಮಭೂಷಣ್‌ ಕನ್ನಡಪ್ರಭ ವಾರ್ತೆ ಮಂಗಳೂರು

ನೈಋತ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಬಂಡಾಯ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳೂ ಸೋತಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ರಘುಪತಿ ಭಟ್‌, ಕಾಂಗ್ರೆಸ್‌ನ ಎಸ್‌.ಪಿ.ದಿನೇಶ್‌, ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಡಾ.ಹರೀಶ್‌ ಆಚಾರ್ಯ, ಕಾಂಗ್ರೆಸ್‌ನ ನಂಜೇಶ್‌ ಬೆನ್ನೂರ್‌ ಸೋಲು ಕಂಡಿದ್ದಾರೆ. ಈ ಮೂಲಕ ರಾಜಕೀಯ ಪಕ್ಷಗಳ ಎದುರು ಬಂಡಾಯ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸುತ್ತಿಲ್ಲ ಎನ್ನುವುದು ಸಾಬೀತುಗೊಂಡಂತಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿ ಕಾರಣದಿಂದ ಬಿಜೆಪಿಗೆ ಗೆಲ್ಲಿಸಿಕೊಡಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿತ್ತು. ಇಲ್ಲದಿದ್ದರೆ ಮೈತ್ರಿಗೆ ಆಪತ್ತು ಭೀತಿ ಎದುರಾಗುವ ಸಂಭವ ಇತ್ತು. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿಗರು ಕೂಡ ಜೆಡಿಎಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದರು.

ಬಂಡಾಯಕ್ಕೆ 3ನೇ ಸ್ಥಾನ!:

ಬಿಜೆಪಿ ವಿರುದ್ಧ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಿದ ಉಡುಪಿ ಮಾಜಿ ಶಾಸಕ ರಘುಪತಿ ಭಟ್‌ 7,039 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಾಂಗ್ರೆಸ್‌ನ ಬಂಡಾಯ ಸ್ಪರ್ಧಿ ಎಸ್‌.ಪಿ.ದಿನೇಶ್‌ 2,519 ಮತ ಪಡೆದು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಸೋತಿದ್ದು, ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅಧಿಕ ಮತಗಳ ಗೆಲುವು ಪಡೆದರು.

ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಹರೀಶ್‌ ಆಚಾರ್ಯ ಪಕ್ಷೇತರರಾಗಿ ಸ್ಪರ್ಧಿಸಿ ಕೇವಲ 2,101 ಮತ ಪಡೆದು ಮೂರನೇ ಸ್ಥಾನ ಪಡೆದರು. ಕಾಂಗ್ರೆಸ್‌ ಬಂಡಾಯ ಸ್ಪರ್ಧಿ ನಂಜೇಶ್‌ ಬೆನ್ನೂರ್‌ಗೆ ಸಿಕ್ಕಿದ ಮತ ಬರೇ 326. ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಭೋಜೇ ಗೌಡ ಪುನರಾಯ್ಕೆಯಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಡಾ.ಮಂಜುನಾಥ್‌ ಸೋಲು ಕಂಡಿದ್ದಾರೆ.

ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನೆಲ್ಲ ಶಕ್ತಿ ಸಾಮರ್ಥ್ಯಗಳನ್ನು ಬಳಸಿದ್ದರೂ ಗೆಲುವು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ ಸಚಿವರು, ಶಾಸಕರು ಹಾಗೂ ಜಿಲ್ಲಾ ಅಧ್ಯಕ್ಷರಿಗೆ ಗೆಲುವಿನ ಟಾಸ್ಕ್‌ ನೀಡಲಾಗಿತ್ತು. ಆದರೆ ಎಲ್ಲ ಪ್ರಯತ್ನ ನಡೆಸಿದರೂ ಗೆಲುವು ಸಾಧ್ಯವಾಗಿಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ.

ಹಿಂದೆಯೂ ಬಂಡಾಯ: ಪರಿಷತ್‌ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಬಂಡಾಯ ಹೊಸದಲ್ಲ. 2015ರಲ್ಲಿ ಸ್ಥಳೀಯಾಡಳಿತಗಳಿಂದ ಆಯ್ಕೆಯಾಗುವ ಪರಿಷತ್‌ ಸ್ಥಾನದ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಇಬ್ಬರ ಬಂಡಾಯ ಎದುರಿಸಿ ಗೆದ್ದಿತ್ತು.

ಕಾಂಗ್ರೆಸ್‌ನಿಂದ ಪರಿಷತ್‌ ಸದಸ್ಯರಾಗಿದ್ದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತೆ ಸ್ಪರ್ಧಿಸಿದ್ದರು. ಇದನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ಜಯಪ್ರಕಾಶ್‌ ಹೆಗ್ಡೆ ಹಾಗೂ ಹರಿಕೃಷ್ಣ ಬಂಟ್ವಾಳ್‌ ಬಂಡಾಯ ಸ್ಪರ್ಧಿಸಿದ್ದರು. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಇಬ್ಬರ ಆಯ್ಕೆಗೆ ಅವಕಾಶ ಇರುವುದರಿಂದ ಈ ಚುನಾವಣೆಯಲ್ಲಿ ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಗೆದ್ದಿದ್ದರು. ಬಂಡಾಯ ಸ್ಪರ್ಧಿಸಿದ್ದ ಜಯಪ್ರಕಾಶ್‌ ಹೆಗ್ಡೆ ಎರಡನೇ ಸ್ಥಾನಕ್ಕೆ, ಹರಿಕೃಷ್ಣ ಬಂಟ್ವಾಳ್‌ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಮುಂದಿನ ಬೆಳವಣಿಗೆಯಲ್ಲಿ ಪಕ್ಷದಿಂದ ಉಚ್ಛಾಟಿತರಾದ ಜಯಪ್ರಕಾಶ್‌ ಹೆಗ್ಡೆ ಮತ್ತು ಹರಿಕೃಷ್ಣ ಬಂಟ್ವಾಳ ಬಿಜೆಪಿ ಸೇರಿದರು. ಈಗ ಜಯಪ್ರಕಾಶ್‌ ಹೆಗ್ಡೆ ಮತ್ತೆ ಕಾಂಗ್ರೆಸ್‌ ಸೇರಿದರೆ, ಹರಿಕೃಷ್ಣ ಬಂಟ್ವಾಳ್‌ ಬಿಜೆಪಿಯಲ್ಲಿ ಕಿಯೋನಿಕ್ಸ್‌ ಹುದ್ದೆಯಲ್ಲಿದ್ದರು. ಪರಿಷತ್‌ ಚುನಾವಣೆಯಲ್ಲಿ ಇದು ಮೊದಲ ಬಂಡಾಯವಾಗಿತ್ತು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ