ಚಿಕ್ಕಮಗಳೂರು : ಶೋಭಾಯಾತ್ರೆಗೆ ವೈಭವಯುತ ತೆರೆ - ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ - ಇಂದು ದತ್ತಮಾಲಾ ಜಯಂತಿ

KannadaprabhaNewsNetwork |  
Published : Dec 14, 2024, 12:49 AM ISTUpdated : Dec 14, 2024, 01:10 PM IST
ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಶುಕ್ರವಾರ ಶೋಭಾಯಾತ್ರೆ  ನಡೆಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರು, ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶನಿವಾರ ತೆರೆ ಕಾಣಲಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಶುಕ್ರವಾರ ಶೋಭಾಯಾತ್ರೆ ಶಾಂತಿಯಿಂದ ವೈಭವಯುತವಾಗಿ ನಡೆಯಿತು.

 ಚಿಕ್ಕಮಗಳೂರು : ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶನಿವಾರ ತೆರೆ ಕಾಣಲಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಶುಕ್ರವಾರ ಶೋಭಾಯಾತ್ರೆ ಶಾಂತಿಯಿಂದ ವೈಭವಯುತವಾಗಿ ನಡೆಯಿತು.

ಬೆಳಿಗ್ಗೆಯಿಂದಲೇ ಯುವಕರು ಭಗವದ್ವಜ ಹಿಡಿದು ಬೈಕಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿದರು. ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ವಿಎಚ್‌ಪಿ ಮುಖಂಡರಾದ ರಘು ಸಕಲೇಶಪುರ, ಶ್ರೀಕಾಂತ್‌ ಪೈ, ರಂಗನಾಥ್‌, ಯೋಗೀಶ್‌ರಾಜ್‌ ಅರಸ್‌ ಸೇರಿದಂತೆ ದತ್ತಮಾಲಾಧಾರಿಗಳು ಇಲ್ಲಿನ ಬಸವನಹಳ್ಳಿ ಮುಖ್ಯ ರಸ್ತೆ ಹಾಗೂ ನಾರಾಯಣಪುರ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹ ಮಾಡಿದರು. ಮಾತೆಯರು ಮನೆಗೆ ಬಂದ ಮಾಲಾಧಾರಿಗಳಿಗೆ ಆರತಿ ಬೆಳಗಿ ತೆಂಗಿನ ಕಾಯಿ, ಬೆಲ್ಲವನ್ನು ನೀಡಿದರು. ಈ ಪಡಿಯನ್ನು ದತ್ತಪೀಠದಲ್ಲಿ ಶನಿವಾರ ಸಮರ್ಪಿಸಲಾಗುವುದು.

ಪೂರ್ವ ನಿಗದಿಯಂತೆ ಮಧ್ಯಾಹ್ನ 2.30ಕ್ಕೆ ಹೊರಡಬೇಕಾಗಿದ್ದ ಶೋಭಾಯಾತ್ರೆ ಸುಮಾರು ಒಂದು ಗಂಟೆಗಳ ಕಾಲ ತಡವಾಗಿ ಇಲ್ಲಿನ ಶ್ರೀ ಕಾಮಧೇನು ಗಣಪತಿ ದೇವಸ್ಥಾನದಿಂದ ಹೊರಟಿತು. ಆರಂಭದಲ್ಲಿ ದತ್ತಮಾಲಾಧಾರಿಗಳ ಸಂಖ್ಯೆ ಕಡಿಮೆಯಂತೆ ಕಂಡು ಬಂದರೂ ಟೌನ್ ಕ್ಯಾಂಟಿನ್ ವೃತ್ತದಿಂದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಿ ಹನುಮಂತಪ್ಪ ವೃತ್ತಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಮಾಲಾಧಾರಿಗಳು ರಸ್ತೆಯ ಉದ್ದಕ್ಕೂ ಕಂಡು ಬಂದರು.

ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಹಳ್ಳಿ ವಾದ್ಯಕ್ಕೆ ಹೆಜ್ಜೆ ಹಾಕಿದರು. ಅವರೊಂದಿಗೆ ಮಾಲಾಧಾರಿಗಳು, ಬಿಜೆಪಿ ಮುಖಂಡರು ಸಹ ಹೆಜ್ಜೆ ಹಾಕಿದರು. ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗ ದಳದಿಂದ ಅಂತರ ಕಾಪಾಡಿಕೊಂಡಿದ್ದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಅವರು ಸುಮಾರು ಎರಡು ದಶಕಗಳ ನಂತರ ಇದೇ ಮೊದಲ ಬಾರಿಗೆ ವಿಶ್ವಹಿಂದೂ ಪರಿಷತ್‌ ಆಯೋಜಿಸಿದ್ದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶನಿವಾರವೂ ಕೂಡ ದತ್ತಪೀಠಕ್ಕೆ ತೆರಳುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು. ಶೋಭಾ ಯಾತ್ರೆಯಲ್ಲಿ ಕಾರ್ಕಳ ಶಾಸಕ ವಿ. ಸುನೀಲ್‌ಕುಮಾರ್‌, ಮಾಜಿ ಸಚಿವ ಡಿ.ಎನ್‌. ಜೀವರಾಜ್‌ ಹಾಗೂ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

ಸಂಜೆ 6 ಗಂಟೆ ವೇಳೆಗೆ ನೋಡು ನೋಡುತ್ತಿದ್ದಂತೆ ಹನುಮಂತಪ್ಪ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದರು. ತಂಡೋಪ ತಂಡವಾಗಿ ಯಾತ್ರೆಯಲ್ಲಿ ಸಾಗಿದ ಯುವಕರು ಮುಗಿಲು ಮುಟ್ಟುವಂತೆ ಘೋಷಣೆ ಹಾಕುತ್ತಿದ್ದರು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗೆ ರಸ್ತೆಯ ಉದ್ದಕ್ಕೂ ನಿಂತಿದ್ದ ಸಾರ್ವಜನಿಕರು ಧ್ವನಿ ಗೂಡಿಸುತ್ತಿದ್ದರು. ಶೋಭಾಯಾತ್ರೆಯಲ್ಲಿ ಡಿಜೆ ಸದ್ದಿಗೆ ಮುಗಿಲು ಮುಟ್ಟುವಂತೆ ಜೈ ಹಾಕಿ ಯುವಕ, ಯುವತಿಯರು ಡ್ಯಾನ್ಸ್ ಮಾಡಿದರು.

ಯಾತ್ರೆ ವೈಭವ ನೋಡಲು ರಸ್ತೆ ಉದ್ದಕ್ಕೂ ಮಾತ್ರವಲ್ಲ ಆಸುಪಾಸಿನ ಕಟ್ಟಡಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಜನರು ಗಂಟೆಗಟ್ಟಲೆ ನಿಂತು ಕಣ್ತುಂಬಿಕೊಂಡರು. ಹನುಮಂತಪ್ಪ ವೃತ್ತದ ಮೂಲಕ ಎಂ.ಜಿ. ರಸ್ತೆಯಿಂದ ಆಜಾದ್ ಪಾರ್ಕ್‌ ವೃತ್ತಕ್ಕೆ ತಲುಪಿದ ಬಳಿಕ ಯಾತ್ರೆ ಮುಕ್ತಾಯಗೊಂಡಿತು.

 ದತ್ತ ಜಯಂತಿಗೆ ಇಂದು ತೆರೆ

ಮೂರು ದಿನಗಳ ದತ್ತ ಜಯಂತಿ ಉತ್ಸವಕ್ಕೆ ಶನಿವಾರ ತೆರೆ ಬೀಳಲಿದೆ. ಎರಡು ದಿನಗಳ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ್ದು, ರಾಜ್ಯದ ವಿವಿಧೆಡೆಯಿಂದ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ದತ್ತಭಕ್ತರು ಆಗಮಿಸಲಿದ್ದಾರೆ. ಇಲ್ಲಿಗೆ ಬರುವ ಭಕ್ತರಿಗೆ ವಾಹನಗಳ ಪಾರ್ಕಿಂಗ್‌, ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸವಲತ್ತಿನ ವ್ಯವಸ್ಥೆ ಮಾಡಲಾಗಿದೆ. ದತ್ತಪೀಠಕ್ಕೆ ಆಗಮಿಸುವ ಭಕ್ತರು ದತ್ತ ಪಾದುಕೆಗಳ ದರ್ಶನ ಪಡೆದು ನಂತರದಲ್ಲಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ವಾಪಸ್‌ ತೆರಳಲಿದ್ದಾರೆ. 

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ