ಚಿಕ್ಕಬಳ್ಳಾಪುರ ಜಿಲ್ಲೆಗೆ ₹121 ಕೋಟಿ ಅನುದಾನ

KannadaprabhaNewsNetwork |  
Published : Aug 23, 2024, 01:02 AM IST
ಸಿಕೆಬಿ-2 ಸಂಸದ ಡಾ.ಕೆ.ಸುಧಾಕರ್ | Kannada Prabha

ಸಾರಾಂಶ

ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 4.8 ಕೋಟಿ ರೂ. ವೆಚ್ಚದಲ್ಲಿ 11 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ವಾಯುವಿಹಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗಾಗಿ ಅಮೃತ್ -2 ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ 121 ಕೋಟಿ ರು.ಗಳ ಅನುದಾನ ನೀಡಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಸಂತಸ ವ್ಯಕ್ತಪಡಿಸಿದ್ದು, ಪ್ರಧಾನಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.“ಹೌಸಿಂಗ್ ಚೇಂಬರ್ ನಿರ್ಮಾಣ, ಕೆರೆಗಳ ಸಾಮರ್ಥ್ಯ ಹೆಚ್ಚಳ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಶಿಡ್ಲಘಟ್ಟ, ಚಿಂತಾಮಣಿ, ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 4.8 ಕೋಟಿ ರೂ. ವೆಚ್ಚದಲ್ಲಿ 11 ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ವಾಯುವಿಹಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಗೆ ವಿವಿಧ ಯೋಜನೆಗಳುಚಿಕ್ಕಬಳ್ಳಾಪುರ ಜಿಲ್ಲೆಯ ಜಕ್ಕಲಮಡಗು ಜಲಾಶಯದ ಜಲಸಂಗ್ರಹಾಗಾರಗಳ ದುರಸ್ತಿ ಹಾಗೂ ಆನ್‌ಲೈನ್‌ ನಿರ್ವಹಣೆ ಮಾಡಲಾಗುತ್ತಿದೆ. ಈ ಸಂಗ್ರಹಾಗಾರಗಳಿಂದ 3,250 ಮನೆಗಳಿಗೆ ನೀರು ಪೂರೈಸುತ್ತಿದ್ದು, 35.50 ಕಿ.ಮೀ. ವಿತರಣಾ ಜಾಲವಿದೆ. ಚಿಂತಾಮಣಿಯ ಭಕ್ತರಹಳ್ಳಿ-ಅರಸೀಕೆರೆಯಲ್ಲಿ ಜಲಸಂಗ್ರಹಾಗಾರದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎರಡು ಶುದ್ಧೀಕರಣ ಘಟಕಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಗುಡಿಬಂಡೆಯಲ್ಲಿ ಅಮಾನಿ ಭೈರಸಾಗರ ಕೆರೆಯ ಶುದ್ಧೀಕರಣ ಘಟಕದ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸುವ ಹಾಗೂ ಹೌಸಿಂಗ್‌ ಚೇಂಬರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಲ್ಲಿ 2,500 ಗೃಹ ಸಂಪರ್ಕವಿದ್ದು, 32.72 ಕಿ.ಮೀ. ವಿತರಣಾ ಜಾಲವಿದೆ. ಗೌರಿಬಿದನೂರು ನಗರ ಹಾಗೂ 8 ಹಳ್ಳಿಗಳಿಗೆ ಸಂಬಂಧಿಸಿದಂತೆ, ವಾಟದಹೊಸಹಳ್ಳಿ ಕೆರೆಯ ಜಲಸಂಗ್ರಹಾಗಾರಗಳ ದುರಸ್ತಿ, ವಿದ್ಯುತ್‌ ಪಂಪ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ.

ಜೊತೆಗೆ ಹೌಸಿಂಗ್‌ ಚೇಂಬರ್‌ ನಿರ್ಮಾಣವಾಗಲಿದೆ. ಈ ವ್ಯಾಪ್ತಿಯಲ್ಲಿ 1,200 ಮನೆಗಳ ಸಂಪರ್ಕವಿದ್ದು, 21.40 ಕಿ.ಮೀ. ವಿತರಣಾ ಜಾಲವಿದೆ. ಚಿಂತಾಮಣಿಯಲ್ಲಿ ನೆಕ್ಕುಂದಿ ಕೆರೆಯ ಸಾಮರ್ಥ್ಯ ಹೆಚ್ಚಿಸುವ ಕಾಮಗಾರಿ ನಡೆಯಲಿದೆ. ಶಿಡ್ಲಘಟ್ಟ ಹಾಗೂ 13 ಹಳ್ಳಿಗಳಿಗೆ ಸಂಬಂಧಿಸಿದಂತೆ, ರಾಮಸಮುದ್ರ ಕೆರೆಯಿಂದ ಕುಡಿಯುವ ನೀರು ಸರಬರಾಜು ಯೋಜನೆ ರೂಪಿಸಲಾಗಿದೆ. ಉದ್ಯಾನಗಳ ಅಭಿವೃದ್ಧಿ:ಅಮೃತ್ 2.0 ಯೋಜನೆಯಡಿ 23.2 ಕೋಟಿ ರೂ. ವೆಚ್ಚದಲ್ಲಿ 8 ಜಲಮೂಲಗಳ ಪುನರುಜ್ಜೀವನ ಮತ್ತು 4.8 ಕೋಟಿ ರೂ. ವೆಚ್ಚದಲ್ಲಿ 11 ಉದ್ಯಾನಗಳ ಪುನಶ್ಚೇತನ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ 6 ಕೆರೆಗಳ ಪುನರುಜ್ಜೀವನ ಹಾಗೂ 4 ಉದ್ಯಾನಗಳ ಪುನಶ್ಚೇತನವಾಗಲಿದೆ. ಚಿಂತಾಮಣಿ ನಗರಸಭೆ ವ್ಯಾಪ್ತಿಯಲ್ಲಿ ಒಂದು ಕೆರೆಯ ಪುನರುಜ್ಜೀವನ ಹಾಗೂ 5 ಉದ್ಯಾನಗಳ ಪುನಶ್ಚೇತನವಾಗಲಿದೆ. ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ, 8.8 ಕೋಟಿ ರೂ. ವೆಚ್ಚದಲ್ಲಿ ಒಂದು ಕೆರೆಯ ಪುನರುಜ್ಜೀವನ ಹಾಗೂ 1.2 ಕೋಟಿ ರೂ. ವೆಚ್ಚದಲ್ಲಿ 2 ಉದ್ಯಾನಗಳ ಪುನಶ್ಚೇತನವಾಗಲಿದೆ ಎಂದು ಡಾ.ಸುಧಾಕರ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಗ ಬಾರದಂತೆ ತಡೆಯುವುದೇ ಆಯುರ್ವೇದದ ಶಕ್ತಿ
ಮೋದಿಯವರ 25 ವರ್ಷಗಳ ಜನಸೇವಾ ಪಯಣ ಪ್ರೇರಣಾದಾಯಕ