ಎಪಿಎಂಸಿಯಲ್ಲಿ ಕೋಲ್ಡ್‌ ಸ್ಟೋರೇಜ್‌ ಆರಂಭಿಸಲು ಅನುದಾನ

KannadaprabhaNewsNetwork | Published : Jan 20, 2024 2:01 AM

ಸಾರಾಂಶ

ಬೇಗೂರು ಹತ್ತಿ ಮಾರುಕಟ್ಟೆಯಲ್ಲಿ ಹತ್ತಿ ಸಂಸ್ಕರಣೆ ಹಾಗೂ ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಕೋಲ್ಡ್‌ ಸ್ಟೋರೇಜ್‌ ಆರಂಭಿಸಲು ಅನುದಾನ ನೀಡುವುದಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌ ಪಾಟೀಲ್‌ ಭರವಸೆ ನೀಡಿದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಭರವಸೆ । ವೈಜ್ಞಾನಿಕ ಕೃಷಿ ಮಾಡಿ ರೈತರಿಗೆ ಲಾಭ ಪಡೆಯಲು ಸೂಚನೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬೇಗೂರು ಹತ್ತಿ ಮಾರುಕಟ್ಟೆಯಲ್ಲಿ ಹತ್ತಿ ಸಂಸ್ಕರಣೆ ಹಾಗೂ ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಕೋಲ್ಡ್‌ ಸ್ಟೋರೇಜ್‌ ಆರಂಭಿಸಲು ಅನುದಾನ ನೀಡುವುದಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌ ಪಾಟೀಲ್‌ ಭರವಸೆ ನೀಡಿದರು.ತಾಲೂಕಿನ ಬೇಗೂರು ಬಳಿ ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆರ್‌ಐಡಿಎಫ್‌ -೨೮ರ ಯೋಜನೆಯಲ್ಲಿ ೬.೫ ಕೋಟಿ ವೆಚ್ಚದಲ್ಲಿ ಹತ್ತಿ ಮಾರುಕಟ್ಟೆಯ ಹರಾಜು ಕಟ್ಟೆ, ಸಿಸಿ ರಸ್ತೆ, ಅಸ್ಪಾಲ್ಟ್‌ ರಸ್ತೆ, ಸಿಸಿ ಚರಂಡಿ, ಆಡಳಿತ ಕಚೇರಿ ಮತ್ತು ಶೌಚಾಲಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಬೇಗೂರಲ್ಲಿ ಹತ್ತಿ ಮಾರುಕಟ್ಟೆ ಆರಂಭಕ್ಕೆ ಸರ್ಕಾರ ೬.೫ ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಹತ್ತಿ ಮಾರುಕಟ್ಟೆಯಲ್ಲಿ ಹತ್ತಿ ವ್ಯಾಪಾರ, ಹತ್ತಿ ಸಂಸ್ಕರಣೆ ವ್ಯವಸ್ಥೆ ಹಾಗೂ ಗುಂಡ್ಲುಪೇಟೆ ಎಪಿಎಂಸಿಯಲ್ಲೂ ಮುಂದಿನ ದಿನಗಳಲ್ಲಿ ಕೋಲ್ಡ್‌ ಸ್ಟೋರೇಜ್‌, ಅಭಿವೃದ್ಧಿಗೂ ಪ್ರಯತ್ನ ಪಡುವೆ ಎಂದರು.

ಬೇಗೂರು ಹತ್ತಿ ಮಾರುಕಟ್ಟೆಗೆ ೬ ಕೋಟಿ ಅನುದಾನ ನೀಡಲಾಗಿದೆ. ಸಾಕಾಗದಿದ್ದಲ್ಲಿ ಇನ್ನೂ ಹೆಚ್ಚುವರಿ ಹಣ ಕೊಡುತ್ತೇನೆ. ಸುಸಜ್ಜಿತ ಪ್ರಾಂಗಣವಾಗಬೇಕು ಎಂಬ ದೃಷ್ಟಿಯಿಂದ ಅಡಿಗಲ್ಲು ಹಾಕಿದ್ದೇನೆ. ೧೦ ರಿಂದ ೧೨ ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು ಜೊತೆಗೆ ಗುಣಮಟ್ಟದ ಕೆಲಸ ಆಗಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಮುಖ್ಯಮಂತ್ರಿಗಳು ಕೃಷಿ ಮಾರುಕಟ್ಟೆ ಇಲಾಖೆಗೆ ೬೭೭ ಕೋಟಿ ಅನುದಾನ ನೀಡಿದ್ದಾರೆ. ರಾಜ್ಯದ ೧೭೦ ಎಪಿಎಂಸಿಗಳ ಮೂಲ ಸೌಕರ್ಯಕ್ಕೆ ಹಣ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಬರಲಿದೆ ಎಂದರು.

ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ರ ಪ್ರಯತ್ನ ಮುಂದೆ ಪ್ರತಿಫಲ ಸಿಗಲಿದೆ. ದಿವಂಗತ ಎಚ್.ಎಸ್. ಮಹದೇವಪ್ರಸಾದ್‌ ದೂರದೃಷ್ಟಿ ಇದ್ದ ಕಾರಣ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಮಹದೇವಪ್ರಸಾದ್‌ರ ಕನಸನ್ನು ಗಣೇಶ್‌ ಪ್ರಸಾದ್‌ ನನಸು ಮಾಡಲಿದ್ದಾರೆ ಎಂದರು. ದೇಶದಲ್ಲಿ ೧೪ ರಾಜ್ಯಗಳಲ್ಲಿ ಬರಗಾಲ ಎದುರಾಗಿದೆ. ಬರ ನಾಲ್ಕೈದು ವರ್ಷಗಳಿಗೊಮ್ಮೆ ಎದುರಾಗುತ್ತಿದ್ದು ಬರದಲ್ಲೂ ಬದುಕುವ ಶಕ್ತಿ ರೈತರಿಗಿದೆ. ಬರ ಇರುವ ಕಾರಣ ರಾಜ್ಯ ಸರ್ಕಾರ ೬೦೦ ಕೋಟಿ ಬರ ಪರಿಹಾರಕ್ಕಾಗಿ ಗುರುವಾರ ಕ್ಯಾಬಿನೆಟ್‌ ಸಭೆಯಲ್ಲಿ ತೀರ್ಮಾನಿಸಿದೆ ಎಂದರು. ಎಪಿಎಂಸಿ ಸದಸ್ಯ ಆರ್.ಎಸ್.ನಾಗರಾಜು ಪ್ರಾಸ್ತವಿಕವಾಗಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್(ರವಿ) ಸ್ವಾಗತಿಸಿದರು. ಕಾಂಗ್ರೆಸ್‌ ಮುಖಂಡ ಬಿ.ಸಿ. ಮಹದೇವಸ್ವಾಮಿ ಪ್ರಾರ್ಥಿಸಿದರು.

ಗ್ರಾಪಂ ಅಧ್ಯಕ್ಷೆ ಜಯಮ್ಮ, ತಹಸೀಲ್ದಾರ್‌ ಟಿ. ರಮೇಶ್‌ ಬಾಬು, ಕೃಷಿ ಮಾರಾಟ ಇಲಾಖೆ ನಿರ್ದೇಶಕ ಜಿ.ಎಂ. ಗಂಗಾಧರಸ್ವಾಮಿ, ಅಧೀಕ್ಷಕ ಅಭಿಯಂತರ ಸಿ.ಜಿ. ರಘುನಂದನ್‌, ಸಹಾಯಕ ನಿರ್ದೇಶಕ ಟಿ.ವಿ. ಪ್ರಕಾಶ್‌ ಕುಮಾರ್‌, ಎಪಿಎಂಸಿ ಉಪಾಧ್ಯಕ್ಷ ವೆಂಕಟನಾಯಕ, ಕಾರ್ಯದರ್ಶಿ ಶ್ರೀಧರ್‌ ಸೇರಿದಂತೆ ಎಪಿಎಂಸಿ ಸದಸ್ಯರು ಇದ್ದರು.

ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಆಲತ್ತೂರು ಜಯರಾಂ, ಜಿಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾದ ಬಿ.ಎಂ. ಮುನಿರಾಜು, ಪಿ.ಬಿ.ರಾಜಶೇಖರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್. ಶಿವನಾಗಪ್ಪ, ಉದ್ಯಮಿ ಆರ್. ಮಧುಕುಮಾರ್‌, ಮುಖಂಡರಾದ ಎಚ್.‌ಎಸ್. ಪ್ರಭುಸ್ವಾಮಿ, ಬಿ. ಕುಮಾರಸ್ವಾಮಿ, ಬಿ.ಎನ್. ಪುನೀತ್‌ ಕುಮಾರ್‌, ಬಾಸ್ಕರ್‌, ಬಡ್ಡಿ ನಾಗಪ್ಪ, ಎ. ರವಿ, ಎಂ.ನಾಗೇಶ್‌, ಬಿ.ಎಸ್. ಪಂಚಾಕ್ಷರಿ, ಬಂಗಾರನಾಯಕ, ಮಂಚಹಳ್ಳಿ ಲೋಕೇಶ್‌ ಸೇರಿದಂತೆ ನೂರಾರು ಮಂದಿ ಇದ್ದರು.

ಕೃಷಿ ಉತ್ಪನ್ನಗಳಿಗೆ ಯೋಗ್ಯವಾದ ದರ ದೊರೆತ್ತಿಲ್ಲ:

ಕೃಷಿ ಉತ್ಪನ್ನಗಳಿಗೆ ಯೋಗ್ಯ ದರ ಕೊಡುವುದು ಸರ್ಕಾರಗಳ ಜವಾಬ್ದಾರಿ ದುರ್ದೈವ ಎಂದರೆ ನಮ್ಮ ದೇಶದಲ್ಲಿ ಇನ್ನೂ ಈಡೇರುತ್ತಿಲ್ಲ ಎಂದು ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌ ಪಾಟೀಲ್‌ ಬೇಸರ ವ್ಯಕ್ತಪಡಿಸಿದರು.

ದೇಶದ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಮನಸ್ಸು ಮಾಡಿದರೆ ರೈತರ ಕೃಷಿ ಉತ್ಪನ್ನಗಳಿಗೆ ಯೋಗ್ಯ ದರ ನೀಡಲು ಸಾಧ್ಯವಾಗಲಿದೆ. ರೈತರಿಗೆ ವಿದ್ಯುತ್‌, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ ರೈತ ಬಯಸುವುದಿಲ್ಲ ಆದರೆ ರೈತನಿಗೆ ಬೇಕಾಗಿರೋದು ಸ್ಥಿರ ಬೆಲೆ ಕೊಡಿ ಅಂತಾನೆ ಎಂದು ಮನಬಿಚ್ಚಿ ಹೇಳಿದರು. ರಾಜ್ಯ ಸಕ್ಕರೆ ಉತ್ಪಾದನೆಯಲ್ಲಿ 3 ನೇ ಸ್ಥಾನದಲ್ಲಿದೆ. ಸಕ್ಕರೆ ಸಕ್ಕರೆಯಾಗಿ ಉಳಿದಿಲ್ಲ. ಇಥೆನಾಲ್‌ನಿಂದ ಪೆಟ್ರೋಲ್‌, ಡಿಸೇಲ್‌ ಉತ್ಪಾದನೆ ಆಗುತ್ತಿದೆ ಆದರೆ ರೈತರು ಸಂಕಟದಿಂದ ಹೊರ ಬರಲು ಆಗುತ್ತಿಲ್ಲ.

ವೈಜ್ಞಾನಿಕ ಕೃಷಿಯಿಂದ ಆರ್ಥಿಕ ನಷ್ಟ ತಪ್ಪಲಿದೆರೈತರು ಪಾರಂಪರಿಕ ಕೃಷಿ ಮಾಡುವ ಬದಲು ವೈಜ್ಞಾನಿಕ ಕೃಷಿ ಮಾಡಿದರೆ ಆರ್ಥಿಕವಾಗಿ ನಷ್ಟ ತಪ್ಪಲಿದೆ ಹಾಗಾಗಿ ರೈತರು ವೈಜ್ಞಾನಿಕ ಕೃಷಿಯತ್ತ ಮುಖಮಾಡಬೇಕಿದೆ ಎಂದು ಸಚಿವ ಶಿವಾನಂದ ಎಸ್‌ ಪಾಟೀಲ್‌ ಸಲಹೆ ನೀಡಿದ್ದಾರೆ. ಸಮಾರಂಭದಲ್ಲಿ ಮಾತನಾಡಿ ವೈಜ್ಞಾನಿಕ ಕೃಷಿಯಲ್ಲಿ ಒಂದೇ ಬೆಳೆಗೆ ಸೀಮಿತವಾಗುವುದು ಬೇಡ. ೩ ಅಥವಾ ೪ ಬೆಳೆ ಬೆಳೆದರೆ ಒಂದು ಬೆಲೆ ಕೈ ಕೊಟ್ಟರೂ ಇನ್ನೆರಡು, ಮೂರು ಬೆಳೆಗಳು ರೈತನ ಕೈ ಹಿಡಿದರೆ ಆದಾಯ ಬಂದು ಬದುಕಲು ಸಾದ್ಯವಾಗಲಿದೆ ಎಂದರು. ವೈಜ್ಞಾನಿಕ ಕೃಷಿ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಮನವರಿಗೆ ಮಾಡಿಕೊಡುತ್ತಿಲ್ಲ. ರೈತರು ಬೆಳೆದ ಬೆಳೆಗೆ ಸಂಸ್ಕರಣೆ ಮಾಡಿಕೊಡಬೇಕಾದದ್ದು ಕೇಂದ್ರ ಸರ್ಕಾರ ಅಲ್ಲದೆ ಈರುಳ್ಳಿ, ಸಕ್ಕರೆ ಬ್ಯಾನ್‌ ಮಾಡುವುದರಿಂದಲೂ ರೈತರಿಗೆ ಬೆಲೆ ಕುಸಿಯಲು ಕಾರಣ ಎಂದರು. ಬರ ಬಂದಾಗ ರೈತರ ಸಾಲಮನ್ನಾ ಹಿಂದೆಲ್ಲ ಆಗಿವೆ.ರೈತರಿಗೆ ಸಾಲ ಮನ್ನಾ ಮಾಡೋದ್ರಿಂದ ರೈತ ಬದುಕಲ್ಲ.ರೈತರೇ ಸರ್ಕಾರಗಳಿಗೆ ಸಾಲ ಕೊಡುವಾಗೆ ಸೃಷ್ಟಿಯಾದಾಗ ಮಾತ್ರ ರೈತರ ಬದುಕು ಹಸವಾಗುತ್ತದೆ ಎಂದು ಪ್ರತಿಪಾದಿಸಿದರು.

ಎಪಿಎಂಸಿಗಳಲ್ಲಿ ಕಮಿಷನ್‌ ಪಡೆಯುವುದು ಇನ್ನಿಲ್ಲ

ಎಪಿಎಂಸಿಗಳಲ್ಲಿ ರೈತರಿಂದ ೭,೮,೧೦ ಕಮೀಷನ್‌ ಪಡೆಯುವುದು ಇನ್ಮುಂದೆ ನಡೆಯಲ್ಲ, ನಡೆದರೆ ವರ್ತಕರ ಲೈಸನ್ಸ್‌ ರದ್ದು ಮಾಡುವುದಾಗಿ ಸಚಿವ ಶಿವಾನಂದ ಎಸ್‌ ಪಾಟೀಲ್‌ ಎಚ್ಚರಿಸಿದರು. ಸಮಾರಂಭದಲ್ಲಿ ಮಾತನಾಡಿ ಕೆಲ ಎಪಿಎಂಸಿಗಳಲ್ಲಿ ಕಾನೂನು ಮೀರಿ ರೈತರ ಶೋಷಣೆ ಮಾಡಬಾರದು. ಕಾನೂನು ಬದ್ಧವಾಗಿ ಕಮಿಷನ್‌ ಪಡೆದರೆ ಕ್ರಮವಿಲ್ಲ. ಬಿಳಿ ಚೀಟಿ ನೀಡಿ ಹೆಚ್ಚು ಕಮಿಷನ್‌ ಪಡೆದರೆ ಸರ್ಕಾರ ಸಹಿಸುವುದಿಲ್ಲ ಎಂದರು. ಹೆಚ್ಚು ಕಮಿಷನ್‌ ಪಡೆದ ಕೆಲ ವರ್ತಕರು ಲೈಸನ್ಸ್‌ನ್ನು ಕೃಷಿ ಆಯುಕ್ತರು ಅಮಾನತ್ತು ಮಾಡಿದ್ದಾರೆ. ವರ್ತಕರು ಹೆಚ್ಚು ಕಮಿಷನ್‌ ಮುಂದುವರಿಸಿದ ಬಗ್ಗೆ ದೂರು ಬಂದರೆ ವರ್ತಕರ ಲೈಸನ್ಸ್‌ ರದ್ದು ಪಡಿಸುವುದಾಗಿ ಹೇಳಿದರು. ರಾಜ್ಯದ ಎಪಿಎಂಸಿಗಳು ಹಿಂದಿನಂತೆ ಇಲ್ಲ. ಎಪಿಎಂಸಿಗಳಲ್ಲಿ ಸುಧಾರಣೆ ತರುವ ಪ್ರಯತ್ನ ಆಗುತ್ತಿದೆ. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಎಪಿಎಂಸಿಗಳು ದುಸ್ಥಿತಿಗೆ ಬಂದಿವೆ ನಮ್ಮ ರಾಜ್ಯವೇನು ಹೊರತಾಗಿರಲಿಲ್ಲ ಎಂದರು.

ದ್ವಿಗಣ ಆಗಲಿಲ್ಲ:

ಕೇಂದ್ರ ಬಿಜೆಪಿ ಸರ್ಕಾರ ೨೦೨೪ ರೊಳಗೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿತ್ತು. ಆಗಲಿಲ್ಲ ರೈತರ ಶೋಷಣೆ ಆಯ್ತು. ಚುನಾವಣೆಗೋಸ್ಕರ ರೈತರ ಆದಾಯ ದ್ವಿಗುಣದ ಕನಸು ಹುಸಿಯಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಸ್ಪರ್ಧಾತ್ಮಕ ಬೆಲೆ?:ಎಪಿಎಂಸಿಗಳಲ್ಲಿ ಇನ್ಮುಂದೆ ಕಾನೂನು ಜಾರಿಗೆ ತಂದು ರೈತರಿಗೆ ಸ್ಪರ್ಧಾತ್ಮಕ ಬೆಲೆ ಕೊಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಶಾಸಕರ ಗೈರು!

ಬೇಗೂರು ಗ್ರಾಮದಲ್ಲಿ ಹತ್ತಿ ಮಾರುಕಟ್ಟೆ ಭೂಮಿ ಸಮಾರಂಭಕ್ಕೆ ಸಚಿವ,ಸಂಸದ,ಶಾಸಕರು ಗೈರು ಹಾಜರಿ ಎದ್ದು ಕಾಣುತ್ತಿತ್ತು. ಪಶು ಸಂಗೋಪನೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್‌, ವಿ.ಪ. ಸದಸ್ಯರಾದ ಮರಿತಿಬ್ಬೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ ಮಾದೇಗೌಡ ಗೈರು ಹಾಜರಾಗಿದ್ದರು.

ಎಚ್‌ಎಸ್‌ಎಂ ದೂರದೃಷ್ಟಿಯ ಫಲವಾಗಿ ಬೇಗೂರಲ್ಲಿ ಹತ್ತಿ ಮಾರುಕಟ್ಟೆ

ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್‌ ದೂರದೃಷ್ಟಿಯ ಫಲವಾಗಿ ಬೇಗೂರಲ್ಲಿ ಹತ್ತಿ ಮಾರುಕಟ್ಟೆಗೆ ಚಾಲನೆ ಸಿಕ್ಕಿದೆ, ಬೇಗೂರು ಬಳಿ ಜಾಗ ಗುರುತಿಸಿ ಕೊಟ್ಟು ಆರು ವರ್ಷಗಳಿದ್ದರೂ ಹತ್ತಿ ಮಾರುಕಟ್ಟೆ ಆರಂಭ ನೆನಗುದಿಗೆ ಬಿದ್ದಿತ್ತು ಇದೀಗ ಕಾಂಗ್ರೆಸ್‌ ಸರ್ಕಾರದಲ್ಲಿಯೇ ಹತ್ತಿ ಮಾರುಕಟ್ಟೆಗೆ ಚಾಲನೆ ಸಿಕ್ಕಿದೆ ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಹೇಳಿದರು.

ತಾಲೂಕಿನ ಬೇಗೂರು ಬಳಿ ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆರ್‌ಐಡಿಎಫ್‌ -೨೮ರ ಯೋಜನೆಯಲ್ಲಿ ೬.೫ ಕೋಟಿ ವೆಚ್ಚದಲ್ಲಿ ಹತ್ತಿ ಮಾರುಕಟ್ಟೆಯ ಹರಾಜು ಕಟ್ಟೆ, ಸಿಸಿ ರಸ್ತೆ, ಅಸ್ಪಾಲ್ಟ್‌ ರಸ್ತೆ, ಸಿಸಿ ಚರಂಡಿ, ಆಡಳಿತ ಕಚೇರಿ ಮತ್ತು ಶೌಚಾಲಯ ಕಾಮಗಾರಿಗೆ ಗುದ್ದಲಿ ಪೂಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ತಂದೆ ದಿವಂಗತ ಎಚ್.ಎಸ್. ಮಹದೇವಪ್ರಸಾದ್‌ರಿಗೆ ಕ್ಷೇತ್ರದ ರೈತರ ಮೇಲೆ ಕಾಳಜಿಯಿದ್ದ ಫಲವಾಗಿ ೧೯೯೭ ರಲ್ಲಿಯೇ ಗುಂಡ್ಲುಪೇಟೆ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆ ಆರಂಭಕ್ಕೆ ಕಾರಣರಾದರು. ನಂತರ ತೆರಕಣಾಂಬಿಯಲ್ಲಿ ಉಪಪ್ರಾಂಗಣ ಆರಂಭಿಸಿ ಎಪಿಎಂಸಿಗೆ ಮೂಲಭೂತ ಸೌಕರ್ಯ ಕಲ್ಪಿಸಿದ್ದರು ಎಂದರು.ಗುಂಡ್ಲುಪೇಟೆ ಹಾಗೂ ತೆರಕಣಾಂಬಿ ಎಪಿಎಂಸಿ ಸ್ಥಾಪಿಸುವ ಜೊತೆಗೆ ಬೇಗೂರು ಭಾಗ ಹಾಗೂ ನಂಜನಗೂಡು, ಎಚ್‌.ಡಿ.ಕೋಟೆ ತಾಲೂಕಿನ ಕೆಲ ಭಾಗದಲ್ಲಿ ಹತ್ತಿ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದನ್ನು ಗಮನಿಸಿ ಬೇಗೂರಲ್ಲಿ ಹತ್ತಿ ಮಾರುಕಟ್ಟೆ ಸ್ಥಾಪನೆಗೂ ಕಾರಣರಾಗಿದ್ದಾರೆ ಎಂದರು.ಹೆಚ್‌ಎಸ್‌ಎಂ ನಿಧನದ ಬಳಿಕ ಹತ್ತಿ ಮಾರುಕಟ್ಟೆ ಆರಂಭಕ್ಕೆ ನೆನಗುದಿದೆ ಬಿತ್ತು. ನಾನು ಶಾಸಕನಾದ ನಂತರ ಕೃಷಿ ಮಾರುಕಟ್ಟೆ ಆರಂಭಿಸಲು ಅನುದಾನಕ್ಕಾಗಿ ಸಚಿವರಾದ ಶಿವಾನಂದ ಎಸ್ ಪಾಟೀಲರ ಮೊರೆ ಹೋದೆ ಆಗ ಸಚಿವರು ಮುಖ್ಯಮಂತ್ರಿ ಮನವೊಲಿಸಿ ಕಳೆದ ಆಗಸ್ಟ್‌ ತಿಂಗಳಲ್ಲಿ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಿಸಿ ಅನುದಾನ ಕೊಟ್ಟಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಹಾಗೂ ಕೃಷಿ ಮಾರಾಟ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ 5 ಗ್ಯಾರಂಟಿ ಯೋಜನೆ ಜಾರಿಗೆ ತಂದು ಯಶಸ್ವಿಯೂ ಆಗಿದೆ ಅಲ್ಲದೆ ಕಾಂಗ್ರೆಸ್‌ ಸರ್ಕಾರ ಜನಪರ ಇದೆ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸವಾಗಬೇಕು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲು ಶ್ರಮಿಸುವೆ ಎಂದರು. ಕ್ಷೇತ್ರದ ಶಾಸಕರಾದ ಕೆ.ಎಸ್.ನಾಗರತ್ನಮ್ಮ ಕಾಲದಲ್ಲಿ ರೈತರಿಗೆ ಅನುಕೂಲವಾಗಲಿ ಎಂದು ಶಿವಪುರ ಬಳಿ ಕಲ್ಕಟ್ಟೆ ಕೆರೆ ನಿರ್ಮಿಸಲು ಕಾರಣರಾದರು. ಮಹದೇವಪ್ರಸಾದ್‌ ೨೦೧೩ ರಲ್ಲಿ ಸಚಿವರಾದ ಬಳಿಕ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಿ ಕೆರೆಗೆ ನೀರು ತುಂಬಿಸಲು ಕಾರಣರಾದರು ಎಂದರು.ಸಚಿವರಲ್ಲಿ ಮನವಿ:ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಕೋಲ್ಡ್‌ ಸ್ಟೋರೇಜ್‌ ಹಾಗೂ ಎಪಿಎಂಸಿಗೆ ಮೂಲಭೂತ ಸೌಕರ್ಯಕ್ಕೆ ಅನುದಾನ ನೀಡಬೇಕು ಎಂದು ಸಚಿವ ಶಿವಾನಂದ ಎಸ್‌ ಪಾಟೀಲ್‌ರಲ್ಲಿ ಶಾಸಕರು ಮನವಿ ಮಾಡಿದರು.

Share this article