ಕನ್ನಡಪ್ರಭ ವಾರ್ತೆ ಬೀಳಗಿ
ಮಹಾನ್ ನಾಯಕರು ತ್ಯಾಗ, ಬಲಿದಾನ ಮಾಡಿ ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿ, ಪ್ರಜಾಪ್ರಭುತ್ವದ ಅಡಿಯಲ್ಲಿ ಬದುಕುವಂತೆ ಮಾಡಿದ್ದಾರೆಂದು ಶಾಸಕ ಜೆ.ಟಿ. ಪಾಟೀಲ ಸ್ಮರಿಸಿದರು.ಪಟ್ಟಣದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಪಟ್ಟಣ ಪಂಚಾಯತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಕೇವಲ ಭಾಷಣ ಮಾಡುವುದರಿಂದ ಯಾವುದೇ ಪ್ರಗತಿ ಸಾಧ್ಯವಿಲ್ಲ. ದೇಶದ ಭವಿಷ್ಯ ವರ್ಗದ ಕೋಣೆಯಲ್ಲಿ ಅಡಗಿದ್ದು, ಶಿಕ್ಷಕರು ಮಕ್ಕಳಿಗೆ ದೇಶ ಪ್ರೇಮದ ಪಾಠ ಹೇಳಬೇಕು. ವಿದ್ಯಾರ್ಥಿಗಳು ಸಶಕ್ತ ದೇಶ ಕಟ್ಟುವ ಕೆಲಸ ಮಾಡಬೇಕೆಂದು ಕರೆ ನೀಡಿದರು.ಸರ್ಕಾರಗಳು ಜಾತಿ, ಧರ್ಮಗಳ ಆಧಾರದ ಮೇಲೆ ಒಡೆದು ಆಳುವ ನೀತಿ ಅನುಸರಿಸಬಾರದು. ಅಧಿಕಾರ ಶಾಶ್ವತಲ್ಲ. ಜನ ಸಮೂಹ ಮತ್ತು ವಿಚಾರ ಶಾಶ್ವತವಾಗಿದ್ದು, ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಅಡಿಯಲ್ಲಿ ಕೆಲಸ ಮಾಡೋಣವೆಂದು ಹೇಳಿದರು.
ಸನ್ಮಾನ: ವಿವಿಧ ಕ್ಷೇತ್ರದ ಸಾಧಕರಾದ ನೂರಲಿ ತಹಶೀಲ್ದಾರ (ಸಮಾಜ ಸೇವೆ), ಅನೀಲ ಗಚ್ಚಿನಮನಿ (ಸಮಾಜ ಸೇವೆ), ಡಿ. ಎಂ. ಸಾಹುಕಾರ (ಸಾಹಿತ್ಯ), ದುಂಡಪ್ಪ ಸಂಧಿಮನಿ (ನಿವೃತ್ತ ಯೋಧ), ರಾಜು ನಾಗಾನಂದ (ಕ್ರೀಡೆ), ಹನುಮಂತ ಬುರ್ಲಿ (ಪತ್ರಿಕೋಧ್ಯಮ) ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ, ಗಣರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು.ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಸುಹಾಸ ಇಂಗಳೆ ಸಂವಿಧಾನ ಪೀಠಿಕೆ ಓದಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಹರ್ಷವರ್ಧನ ಬೀಳಗಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಸ್. ಆದಾಪೂರ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಸಿಪಿಐ ಬಸವರಾಜ ಹಳಬನ್ನವರ, ತೋಟಗಾರಿಕೆ ಅಧಿಕಾರಿ ಅಭಯ ಮೊರಬ, ವಿ. ಆರ್. ಹಿರೇನಿಂಗಪ್ಪನವರ ಮತ್ತಿತರಿದ್ದರು.