ಜಗದೀಶ ವಿರಕ್ತಮಠ
ಕನ್ನಡಪ್ರಭ ವಾರ್ತೆ ಬೆಳಗಾವಿಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುತ್ತಿರುವ ಕುಂದಾನಗರಿ ಬೆಳಗಾವಿ ದಿನದಿಂದ ದಿನಕ್ಕೆ ಎಲ್ಲ ದಿಕ್ಕುಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ವಾಹನ ಸಂಚಾರ ದಟ್ಟಣೆ ಕೂಡ ಹೆಚ್ಚುತ್ತಿದೆ. ಆದರೆ, ಸಂಚಾರಿ ದಟ್ಟಣೆ ನಿಯಂತ್ರಿಸಲು ಸಂಚಾರಿ ಪೊಲೀಸರ ಕೊರತೆ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಬೆಳಗಾವಿ ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಉತ್ತರ ಸಂಚಾರಿ ಹಾಗೂ ದಕ್ಷಿಣ ಸಂಚಾರಿ ಎಂಬ 2 ಸಂಚಾರಿ ಪೊಲೀಸ್ ಠಾಣೆಗಳನ್ನು ಹಲವು ದಶಕಗಳ ಹಿಂದೆಯೇ ಸ್ಥಾಪಿಸಲಾಗಿದೆ. ಆದರೆ, ವಾಹನ ಸಂಚಾರ ದಟ್ಟಣೆ ಹಾಗೂ ನಗರದ ವಿಸ್ತರಣೆ ತಕ್ಕಂತೆ ಪೊಲೀಸ್ ಠಾಣೆಗಳ ಹೆಚ್ಚಳ ಮಾಡುವುದಾಗಲಿ ಅಥವಾ ಸಂಚಾರಿ ಪೊಲೀಸರ ಸಿಬ್ಬಂದಿಯನ್ನು ಹೆಚ್ಚಿಸುವ ಕುರಿತು ಇದುವರೆಗೆ ಜಿಲ್ಲೆಯ ಜನಪ್ರತಿನಿಧಿಗಳಾಗಿ ಅಥವಾ ಸರ್ಕಾರ, ಹಿರಿಯ ಪೊಲೀಸ್ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.ಸದ್ಯ ಎಷ್ಟು ಸಂಚಾರಿ ಸಿಬ್ಬಂದಿ ಇದ್ದಾರೆ?:ಬೆಳಗಾವಿ ಕಮಿಷನರೇಟ್ ವ್ಯಾಪ್ತಿ ಬಹಳ ವೇಗವಾಗಿ ಬೆಳೆಯುತ್ತಿದೆ. ಸರ್ಕಾರ ಬೆಳಗಾವಿ ಸಂಚಾರ ಪೊಲೀಸ್‌ಗಾಗಿ ಒಟ್ಟು 166 ಸಿಬ್ಬಂದಿ ಮಂಜೂರು ಮಾಡಿದೆ. ಈ ಪೈಕಿ ಎಸಿಪಿ, ಡಿಸಿಪಿ ತಲಾ ಒಂದು ಹುದ್ದೆ, ಪಿಐ-2, ಪಿಎಸ್‌ಐ 4, ಎಎಸ್‌ಐ 13, ಹೆಡ್ ಕಾನ್‌ಸ್ಟೇಬಲ್ 52, ಸಂಚಾರಿ ಪೇದೆ 93 ಹುದ್ದೆಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಹೆಡ್ ಕಾನ್‌ಸ್ಟೇಬಲ್ ಸದ್ಯ 47 ಜನ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 5 ಜನ ಸಿಬ್ಬಂದಿ ಕೊರತೆ ಇದೆ. ಜತೆಗೆ 93 ಸಂಚಾರಿ ಪೇದೆ ಪೈಕಿ 81 ಜನ ಸಿಬ್ಬಂದಿ ಇದ್ದು, 12 ಜನ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ.
ಒಬೆರಾಯನ ಕಾಲದಲ್ಲಿ ಸ್ಥಾಪಿತವಾಗಿರುವ ಸಂಚಾರಿ ಪೊಲೀಸ್ ಠಾಣೆ ಹಾಗೂ ಮಂಜೂರಾದ ಸಿಬ್ಬಂದಿ ಮೂಲಕ ಪ್ರತಿನಿತ್ಯ ಕಾರ್ಯ ನಿರ್ವಹಿಸಲಾಗುತ್ತಿದೆ. ಅಲ್ಲದೇ ಪ್ರತಿವರ್ಷವೂ ವಯೋ ನಿವೃತ್ತಿಯಾಗುತ್ತಿರುವ ಸಿಬ್ಬಂದಿ ಭರ್ತಿಗೂ ಸರ್ಕಾರ ಮುಂದಾಗಿಲ್ಲ. ಈ ಮಧ್ಯೆ ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಗಣನೀಯವಾಗ ಹೆಚ್ಚಳವಾಗುತ್ತಲೇ ಸಾಗಿದೆ. ಈಗಾಗಲೇ ನಗರದ 2 ಸಂಚಾರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಲಾ 20 ರಂತೆ ಒಟ್ಟು 40 ವೃತ್ತಗಳಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯದ ವಾಹನ ಸಂಚಾರಕ್ಕೆ ಅನುಗುಣವಾಗಿ ಹೊಸ ಸಂಚಾರಿ ಪೊಲೀಸ್ ಠಾಣೆ ಸ್ಥಾಪನೆ ಮಾಡುವುದಾಗಲಿ ಅಥವಾ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿರುವ ಸಿಬ್ಬಂದಿಯನ್ನಾದರೂ ಸಂಚಾರ ಠಾಣೆಗಳಿಗೆ ನಿಯೋಜನೆ ಮಾಡಬೇಕಾದ ಅತ್ಯವಶ್ಯಕತೆ ಇದೆ ಎಂಬ ಬೇಡಿಕೆ ಕೂಡ ಈಗ ಕೇಳಿಬರುತ್ತಿದೆ. ಈ ಮೂಲಕ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಚ್ಛಾಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ, ವಾಹನ ಸಂಚಾರ ದಟ್ಟಣೆ ಜತೆಗೆ ಸಿಬ್ಬಂದಿ ಕೊರತೆಯೂ ಹಿರಿಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ಗಾಂಧಿ ನಗರ ಬಳಿರುವ ಹಣ್ಣಿನ ಮಾರುಕಟ್ಟೆ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವೃತ್ತ, ಬಾಗಲಕೋಟೆ ರಸ್ತೆಗೆ ಸಂಪರ್ಕಿಸುವ ಮೇಲ್ಸೆತುವೆ, ಬೋಗಾರವೇಸ್ ವೃತ್ತ, ಖಡೆಬಜಾರ ರಸ್ತೆ, ಕಿರ್ಲೋಸ್ಕರ್ ರಸ್ತೆ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಗಾಂಧಿ ವೃತ್ತ, ಶೌರ್ಯ ಚೌಕ್, ನಾಥ ಪೈ ವೃತ್ತ, ಅನಗೋಳ ನಾಕಾ ಹಾಗೂ ಬೆಮ್ಕೊ ಸರ್ಕಲ್, ಆರ್‌ಟಿಒ ವೃತ್ತ, ಕೆಎಲ್‌ಇ ಚತ್ರಿ, ಎಪಿಎಂಸಿ ಸೇರಿದಂತೆ ಇನ್ನೀತರ ವೃತ್ತಗಳಲ್ಲಿ ಸಂಚಾರಿ ಪೊಲೀಸರು ಇಲ್ಲದಿರುವುದು ಸುಗಮ ಸಂಚಾರಕ್ಕೆ ಅಡೆತಡೆಯಾಗುತ್ತಿದೆ.ವೀಕೆಂಡ್‌ನಲ್ಲಿ ವಾಹನಗಳ ನಿಯಂತ್ರಣವೇ ಸವಾಲು!
ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ನಗರಕ್ಕೆ ಈ 2 ರಾಜ್ಯಗಳ ವಾಹನಗಳು ಬಂದು ಹೋಗುವುದು ಹೆಚ್ಚಾಗಿದೆ. ಅಲ್ಲದೇ ನಗರದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರ ಕುರಿತು ಅರಿವು ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಅದರಲ್ಲೂ ವೀಕೆಂಡ್ ಸಮಯದಲ್ಲಿ ಕುಟುಂಬ ಸಮೇತ ಬೆಳಗಾವಿ ನಗರಕ್ಕೆ ಆಗಮಿಸಿ ಅಗತ್ಯ ವಸ್ತುಗಳ ಖರೀದಿ ಮಾಡುವ ಗೋವಾ ರಾಜ್ಯದ ಜನರು ಸಂದಿ, ಗೊಂದಿಗಳಲ್ಲಿ ವಾಹನಗಳನ್ನು ಗಂಟೆಗಟ್ಟಲೆ ಪಾರ್ಕಿಂಗ್ ಮಾಡುತ್ತಿರುವುದು ಮತ್ತಷ್ಟು ಸಮಸ್ಯೆ ತಂದೊಡ್ಡಿದೆ. ಇದರಿಂದಾಗಿ ನಗರದಲ್ಲಿ ಕೆಲವು ಹೊಸದಾಗಿ ಅವಶ್ಯಕವಾದ ಕೇಂದ್ರಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.ಸುಗಮ ಸಂಚಾರಕ್ಕೆ ಒತ್ತು ನೀಡಿದ್ದ ಸಿದ್ದರಾಮಪ್ಪನಗರದಲ್ಲಿ ವಾಹನ ಸಂಚಾರ ಹೆಚ್ಚಳ ಹಿನ್ನೆಲೆಯಲ್ಲಿ ಈ ಹಿಂದೆ ಪೊಲೀಸ್ ಆಯುಕ್ತರಾಗಿದ್ದ ಸಿದ್ದರಾಮಪ್ಪ ಎಸ್.ಎನ್ ಅವರು ಸುಗಮ ಸಂಚಾರಕ್ಕೆ ಹಚ್ಚು ಒತ್ತು ನೀಡಿದ್ದರು. ಅಲ್ಲದೇ ಈಗಾಗಲೇ ಇರುವ ಉತ್ತರ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಜೊತೆಗೆ ಹೊಸದಾಗಿ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳ ಸ್ಥಾಪನೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಇದುವರೆ ನನೆಗುದಿಗೆ ಬಿದ್ದಿರುವ ಹೊಸ ಸಂಚಾರಿ ಪೊಲೀಸ್ ಠಾಣೆಗಳ ಮಂಜೂರಾತಿಗೆ ಹಾಗೂ ಸುಗಮ ಸಂಚಾರಕ್ಕೆ ಸಿಬ್ಬಂದಿ ನಿಯೋಜನೆಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಇಚ್ಚಾಶಕ್ತಿ ಪ್ರದರ್ಶನ ತೋರುವವರೇ ಎಂಬುವುದನ್ನು ಕಾದು ನೋಡಬೇಕಿದೆ.