ಕನ್ನಡಪ್ರಭ ವಾರ್ತೆ ತುಮಕೂರುದಾಖಲೆಗಾಗಿ ಮಾತ್ರ ದಲಿತರ ಕುಂದುಕೊರತೆ ಸಭೆಯನ್ನು ಜಿಲ್ಲಾಡಳಿತ ನಡೆಸುತ್ತಿದ್ದು, ಹತ್ತಾರು ವರ್ಷಗಳಿಂದ ದಲಿತರನ್ನು ಕಾಡುತ್ತಿರುವ ನಿವೇಶನ ಹಕ್ಕುಪತ್ರ, ಸ್ಮಶಾನ, ಕಾರ್ಮಿಕ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಹಲವಾರು ಸವಲತ್ತುಗಳು ಇಂದಿಗೂ ದಲಿತ ಸಮುದಾಯಕ್ಕೆ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ಕರ್ನಾಟಕ ಮಹಾಜನ ಪರಿವಾರ ಸಮಿತಿ ರಾಜ್ಯಾಧ್ಯಕ್ಷ ಹಂಚಿಹಳ್ಳಿ ರಾಮುಸ್ವಾಮಿ ಆರೋಪಿಸಿದ್ದಾರೆ.ನಗರದ ಮೇಳೆಹಳ್ಳಿಯಲ್ಲಿ ಕರ್ನಾಟಕ ಮಹಾಜನ ಪರಿವಾರ ಸಮಿತಿಯ ವಾರ್ಷಿಕೋತ್ಸವ ಹಾಗೂ ದಲಿತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಲವಾರು ಬಾರಿ ಕಾರ್ಮಿಕ ಇಲಾಖೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದರು,ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳು ದೊರೆಯುತ್ತಿಲ್ಲ.ಮಹಿಳೆಯರು ಕಚೇರಿಗೆ ಅಲೆಯುವುದೇ ಆಗಿದೆ. ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕರ್ನಾಟಕ ಮಹಾಜನ ಪರಿವಾರ ಸಮಿತಿ ಹುಟ್ಟಿ ಹತ್ತುವರ್ಷಗಳೇ ಕಳೆದಿವೆ.ಇದು ಕೇವಲ ದಲಿತರ ಹಕ್ಕುಗಳಿಗೆ ಮಾತ್ರ ಹೋರಾಟ ಮಾಡುತ್ತಿಲ್ಲ.ಕಾರ್ಮಿಕರು,ಮಹಿಳೆಯರು, ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಿ ಹಲವಾರು ಹೋರಾಟ ಗಳನ್ನು ರೂಪಿಸಿದೆ.ಕಾರ್ಮಿಕರು ಸೂರಿಲ್ಲದ ಹತ್ತಾರು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ಜಿಲ್ಲಾಡಳಿತ ಅವರಿಗೆ ನಿವೇಶನ ನೀಡಬೇಕು. ಗುಡಿಸಲಲ್ಲಿ ವಾಸವಿರುವ ಜನರಿಗೆ ಹಕ್ಕು ಪತ್ರ ವಿತರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಹಂಚಿಹಳ್ಳಿ ರಾಜಣ್ಣ ನುಡಿದರು.ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ ಮಾತನಾಡಿ, ಬದಲಾವಣೆ ಜಗದ ನಿಯಮ, ವಿದ್ಯಾವಂತರಾದಂತೆ ಕೆಲ ಅನಿಷ್ಟ ಪದ್ದತಿಗಳು ನಮ್ಮಿಂದ ಮರೆಯಾಗುತ್ತಿವೆ.ಸಮ ಸಮಾಜದ ಕನಸು ಕಂಡಿದ್ದ ಅಂಬೇಡ್ಕರ್ ಅವರು, ಎಲ್ಲಾ ಜನಾಂಗದವರಿಗೂ ಅವಕಾಶ ಕಲ್ಪಿಸಿದ್ದಾರೆ. ಪರಸ್ವರ ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವುದು ನಮ್ಮ ಮುಂದಿರುವ ಗುರಿಯಾಗಿದೆ ಎಂದರು.ಜಿಲ್ಲಾಡಳಿತದಿಂದ ಬಡವರಿಗೆ ನಿವೇಶನ ಹಂಚಲು ಎಲ್ಲಾ ರೀತಿಯ ವ್ಯವಸ್ಥೆಯಾಗಿದೆ. ಈಗಾಗಲೇ ಸರಕಾರದ ನಿವೇಶನರಹಿತರ ಪಟ್ಟಿಯಲ್ಲಿರುವ ಮೊದಲ ಅದ್ಯತೆ ನೀಡಲಾಗುವುದು. ಉಳಿದವರಿಗೆ ನಂತರದಲ್ಲಿ ನೀಡಲಾಗುತ್ತದೆ. ನಿವೇಶನ ರಹಿತರ ಪಟ್ಟಿ ಸರ್ವೇ ಸಂದರ್ಭದಲ್ಲಿ ತಮ್ಮ ಹೆಸರನ್ನು ಆನ್ ಲೈನ್ ಮೂಲಕ ನೊಂದಾಯಿಸುವಂತೆ ಸಲಹೆ ನೀಡಿದರು.ದಲಿತ ಮುಖಂಡ ಕೋರ ರಾಜಣ್ಣ ಮಾತನಾಡಿ,ಸರಕಾರದ ಸವಲತ್ತುಗಳನ್ನು ಪಡೆಯಲು ಪ್ರತಿಯೊಂದಕ್ಕೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿಂದೆ ಬಾಬಾ ಸಾಹೇಬ್‌ರ ಕಾಲದಲ್ಲಿ ಇಡೀ ಸಮುದಾಯದ ಪರವಾಗಿ ಅವರೊಬ್ಬರೇ ಹೋರಾಟ ಮಾಡಿದ್ದರು. ಆದರೆ ಇಂದು ಹೋರಾಟಗಾರರ ದೊಡ್ಡ ದಂಡೇ ಇದೆ. ಎಲ್ಲರೂ ಒಗ್ಗೂಡಿದರೆ ದೇಶದಲ್ಲಿರುವ ಅಸ್ಪಷ್ಯತೆಯನ್ನು ತೊಡದು ಹಾಕಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಎಂದರು.ರೋಟರಿ ಪ್ರೇರಣದ ಅಧ್ಯಕ್ಷ ಮಲ್ಲಿಕಾರ್ಜುನ್ ಮೆಳೇಹಳ್ಳಿ ಮಾತನಾಡಿ,ದಲಿತ ಮುಖಂಡರು ಕೇವಲ ಜಾತಿ ನಾಯಕರಾದರೆ ಸಾಲದು, ಸಮುದಾಯದ ನಾಯಕರಾಗಬೇಕು. ನಮಗೆ ಪ್ರತ್ಯೇಕ ಸ್ಮಶಾನ, ದೇವಾಲಯ, ಸಮುದಾಯಭವನ ಕೇಳುವ ಬದಲು, ಗ್ರಾಮದಲ್ಲಿರುವ ದೇವಾಲಯ, ಸ್ಮಶಾನ, ಸಮುದಾಯ ಭವನ ಬಳಕೆಗೆ ಮುಂದಾಗಬೇಕು. ಎಲ್ಲರ ಮನವೊಲಿಸಿ ಕೆಲಸ ಮಾಡಿದರೆ ಸಾಧ್ಯವಾದ ಮಟ್ಟಿಗೆ ಜಾತಿಯತೆಯಿಂದ ಹೊರಬರಲು ಸಾಧ್ಯವೆಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಮಹಾಜನ ಪರಿವಾರ ಸಮಿತಿ ಜಿಲ್ಲಾಧ್ಯಕ್ಷರಾದ ಮೇಳೆಹಳ್ಳಿ ಲವ ಕುಮಾರ್ ಅಧಿಕಾರ ಸ್ವೀರಕಸಿದರು.ವೇದಿಕೆಯಲ್ಲಿ ಮುಖಂಡರಾದ ಚಂದ್ರಕಲಾ ಮಾತನಾಡಿದರು.ಗ್ರಾಮಪಂಚಾಯಿತಿ ಸದಸ್ಯರಾದ ಮಂಜುನಾಥ್, ಮಧು, ಬಿ, ನಂದೀಶ್,ಮುಖಂಡರಾದ ಅರ್ಚನ.ಬಿ.ಸಿ.,ಡಿ.ಎಸ್.ಎಸ್ ನ ಲಕ್ಷ್ಮಮ್ಮ, ತಾಲೂಕು ಉಪಾಧ್ಯಕ್ಷ ಅನಿತ, ಶಿವಗಂಗಮ್ಮ, ಮುಂಜೇಶ್ ಅವರುಗಳು ಉಪಸ್ಥಿತರಿದ್ದರು.