- ಆನಗೋಡಿನಲ್ಲಿ ತಾಲೂಕುಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ಬಸವಂತಪ್ಪ ಹೇಳಿಕೆ
- - -- ಆರ್ಥಿಕ ಸಬಲರು ಸರ್ಕಾರಕ್ಕೆ ಹಣ ಹಿಂದಿರುಗಿಸಿದರೆ ಬಡಮಹಿಳೆಯರಿಗೆ ಹೆಚ್ಚು ನೆರವಾಗಲಿದೆ- ಕಾಂಗ್ರೆಸ್ ಸರ್ಕಾರ ''''''''ಐದು ಗ್ಯಾರಂಟಿ''''''''ಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ - - -
ಕನ್ನಡಪ್ರಭ ವಾರ್ತೆ, ದಾವಣಗೆರೆ''ಐದು ಗ್ಯಾರಂಟಿ''ಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮಹಿಳೆಯರು ಪ್ರತಿ ಪಕ್ಷಗಳು ಹಬ್ಬಿಸುವ ವದಂತಿಗಳಿಗೆ ಕಿವಿಗೊಡಬಾರದು. ನಮ್ಮ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ತಾಲೂಕಿನ ಆನಗೋಡು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕುಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎರಡು ತಿಂಗಳು ಕಳೆಯಿತು, ಸರ್ಕಾರ ಇನ್ನೂ ಗೃಹಲಕ್ಷ್ಮಿ ಹಣವನ್ನು ಮಹಿಳಾ ಫಲಾನುಭವಿಗಳ ಖಾತೆಗೆ ಹಾಕಲಿಲ್ಲ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳದೇ ವಚನ ಭ್ರಷ್ಟ ಸರ್ಕಾರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ರದ್ದುಗೊಳಿಸುವುದಿಲ್ಲ ಎಂದರು.ಕೆಲವು ತಾಂತ್ರಿಕ ತೊಂದರೆಯಿಂದ ಅರ್ಹರಿಗೆ ಹಣ ವಿಳಂಬ ಆಗಿರಬಹುದು. ಇನ್ನೆರಡು, ಮೂರು ದಿನಗಳಲ್ಲಿ ಮಹಿಳಾ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಹಾಕುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಹೀಗಾಗಿ ಮಾತೆಯರು ಆತಂಕಕ್ಕೆ ಒಳಗಾಗುವುದು ಬೇಡ ಎಂದರು.
ಆದಾಯಕ್ಕಿಂತ ಹೆಚ್ಚು ಆರ್ಥಿಕ ಅಭಿವೃದ್ಧಿ ಹೊಂದಿ ಉದಾರತೆ, ಮಾನವೀಯ ಕಳಕಳಿ ಹೊಂದಿದಂತಹ ಮಾತೆಯರು ಯೋಜನೆ ಆರಂಭದಲ್ಲಿಯೇ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಅದೇ ರೀತಿ ಹೆಚ್ಚು ಆದಾಯ ಹೊಂದಿದ ಮಾತೆಯರು ಸರ್ಕಾರಕ್ಕೆ ಹಿಂದಿರುಗಿಸಿದರೆ, ಬಡ ಮಹಿಳೆಯರಿಗೆ ಸಹಾಯವಾಗಲಿದೆ. ಇದು, ಒತ್ತಾಯವಲ್ಲ ಅಥವಾ ಅಧಿಕಾರಿಗಳು ಮನೆಗೆ ಹೋಗಿ ಇಸಿದುಕೊಂಡು ಬನ್ನಿ ಅಂತಹ ಹೇಳುವುದಿಲ್ಲ. ಉದಾರತೆ, ಮಾನವೀಯತೆ ಹೊಂದಿರುವ ಮಾತೆಯರು, ಸ್ವಇಚ್ಛೆಯಿಂದ ಗೃಹಲಕ್ಷ್ಮಿ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಬಹುದು ಎಂದು ಮನವಿ ಮಾಡಿದರು.ಬಡವರಿಗೆ ಭೂಮಿ ನೀಡಿ:
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಇರುವ ಸರ್ಕಾರಿ ಜಮೀನು ಗುರುತಿಸಿದರೆ, ವಸತಿರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲೆಲ್ಲಿ ಜಾಗ ಇದೆಯೋ, ಅವುಗಳನ್ನು ಗುರುತಿಸುವಂತೆ ಈಗಾಗಲೇ ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಬಗರ್‌ಹುಕುಂ ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಆದರೆ, ಆರ್ಥಿಕ ಸಬಲರಾಗಿರುವಂತವರು ಹೆಚ್ಚು ಭೂಮಿ ಹೊಂದಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ತಹಸೀಲ್ದಾರ್ ಸಾಗುವಳಿ ಪಡೆದವರಲ್ಲಿ ಯಾರು ಹೆಚ್ಚಿನ ಭೂಮಿ ಹೊಂದಿದ್ದಾರೋ, ಅಂತಹವರನ್ನು ಪತ್ತೆ ಹಚ್ಚಿ ಭೂಮಿ ಇಲ್ಲದ ಬಡವರಿಗೆ ಭೂಮಿಯ ಹಕ್ಕು ನೀಡುವ ಕೆಲಸ ಮಾಡಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.ಆನಗೋಡು ಗ್ರಾಮದಲ್ಲಿ ಲಿಡ್ಕರ್ ವಸತಿ ನಿರ್ಮಾಣಕ್ಕೆ ಮೀಸಲಿಟ್ಟಿರುವ ಜಾಗ ಕೆಲವು ತಾಂತ್ರಿಕ ತೊಂದರೆಯಿಂದ ವಸತಿ ನಿರ್ಮಿಸಲು ಆಗಿಲ್ಲ. ಕೂಡಲೇ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ, ಲಿಡ್ಕರ್ ವಸತಿಗಳನ್ನು ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಕೆಲವು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರೆ, ಇನ್ನು ಕೆಲವು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಅಸಡ್ಡೆ ತೋರುತ್ತಿರುವ ದೂರುಗಳು ಬರುತ್ತಿವೆ. ಅಂತಹ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ. ನಿಷ್ಠೆಯಿಂದ ಕೆಲಸ ಮಾಡುವುದಾದರೆ ಇಲ್ಲಿ ಇರಬಹುದು, ಇಲ್ಲದಿದ್ದರೆ ಬೇರೆಡೆ ಹೋಗಬಹುದು ಎಂದು ಎಚ್ಚರಿಕೆ ನೀಡಿದರು.ವಿಧವೆ ವೇತನ, ಗೃಹಲಕ್ಷ್ಮಿ ಹಣ ಸೇರಿದಂತೆ ವಿವಿಧ ಸೌಲಭ್ಯಗಳ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಫಲಾನುಭವಿಗಳ ಹಣ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ನಕಾಶೆ ದಾರಿ ಒತ್ತುವರಿ ಪ್ರಕರಣಗಳು ಸಾಕಷ್ಟು ಬರುತ್ತಿವೆ. ಕೂಡಲೇ ನಕಾಶೆ ದಾರಿ ಒತ್ತುವರಿ ತೆರವುಗೊಳಿಸಿ ನಕಾಶೆ ದಾರಿ ಒತ್ತುವರಿಮುಕ್ತ ಕ್ಷೇತ್ರ ಮಾಡಬೇಕೆಂದು ನಿರ್ಧಾರ ಮಾಡಲಾಗಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರ್, ಸಂಬಂಧಪಟ್ಟ ಅಧಿಕಾರಿಗಳು ತ್ವರಿತ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.ಇದೇ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳು, ಸಂಧ್ಯಾ ಸುರಕ್ಷಾ ಯೋಜನೆ, ರೈತ ಆತ್ಮಹತ್ಯೆ ಪರಿಹಾರ ನಿಧಿ, ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್, ಅಂಗನವಾಡಿಯ ಮಕ್ಕಳಿಗೆ ಅಳತೆಯ ಸ್ಕೇಲು ತೂಕ ಮಾಡುವ ಮಷೀನ್ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಬಸವರಾಜ್, ಸದಸ್ಯ ಕರಿಬಸಪ್ಪ, ತಹಸೀಲ್ದಾರ್ ಡಾ.ಎಂ.ಬಿ.ಅಶ್ವತ್ಥ್, ತಾಲೂಕು ಪಂಚಾಯತಿ ಇಒ ರಾಮಭೋವಿ, ಉಪ ತಹಸೀಲ್ದಾರ್ ರಾಮಸ್ವಾಮಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ತೋಟಗಾರಿಕಾ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಫಲಾನುಭವಿಗಳು ಭಾಗವಹಿಸಿದ್ದರು.- - - ಕೋಟ್
ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ. ಸಾರ್ವಜನಿಕರಿಂದ ದೂರುಗಳು ಬಾರದಂತೆ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು. ಕಾರ್ಯಕ್ರಮ ತರಾತುರಿಯಲ್ಲಿ ಮಾಡಿದ್ದು ಜನರಿಗೆ ಅನಾನುಕೂಲವಾಗಿದೆ. ಮುಂದೆ ಈ ರೀತಿ ಆಗದಂತೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ ಜನರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಕೆಲಸ ಅಧಿಕಾರಿಗಳು ಮಾಡಬೇಕು- ಕೆ.ಎಸ್. ಬಸವಂತಪ್ಪ, ಶಾಸಕ
- - - -30ಕೆಡಿವಿಜಿ31ಃ:ದಾವಣಗೆರೆ ತಾಲೂಕು ಆನಗೋಡು ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. -30ಕೆಡಿವಿಜಿ32ಃ:
ದಾವಣಗೆರೆ ತಾಲೂಕು ಆನಗೋಡು ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು.