ಗದಗ ಜಿಲ್ಲೆಯಲ್ಲಿ ಅಂತರ್ಜಲ ಕುಸಿತ, ಕೊಳವೆಬಾವಿಗಳಲ್ಲಿ ನೀರಿನ ಕೊರತೆ!

KannadaprabhaNewsNetwork | Published : Feb 26, 2024 1:33 AM

ಸಾರಾಂಶ

ಮಳೆ ಕೊರತೆಯಿಂದಾಗಿ ಅಂತರ್ಜಲವೂ ಕುಸಿತವಾಗಿದ್ದು, ನೀರು ಪೂರೈಕೆ ಹೊಣೆ ಹೊತ್ತಿರುವವರು ಕೂಡಾ ಅಸಹಾಯಕರಾಗಿದ್ದಾರೆ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಬೇಸಿಗೆ ಪೂರ್ವದಲ್ಲಿಯೇ ಜಿಲ್ಲೆಯಲ್ಲಿ ಹಲವು ರೀತಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ನೀರಿನ ಮೂಲಗಳಾದ ಮಲಪ್ರಭಾ, ತುಂಗಭದ್ರಾ ಸಂಪೂರ್ಣ ಬತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳು ಕೊಳವೆಬಾವಿಗಳನ್ನೇ ಆಶ್ರಯಿಸಿವೆ. ಆದರೆ ಮಳೆ ಕೊರತೆಯಿಂದಾಗಿ ಅಂತರ್ಜಲವೂ ಕುಸಿತವಾಗಿದ್ದು, ನೀರು ಪೂರೈಕೆ ಹೊಣೆ ಹೊತ್ತಿರುವವರು ಕೂಡಾ ಅಸಹಾಯಕರಾಗಿದ್ದಾರೆ.

ಕೊಳವೆ ಬಾವಿಗಳಲ್ಲಿ ದಿನೇ ದಿನೇ ನೀರಿನ ಮಟ್ಟ ಇಳಿಯುತ್ತಿದ್ದು, ಕೊಳವೆ ಬಾವಿಯನ್ನೇ ಆಧರಿಸಿದ ಪಟ್ಟಣಗಳ ಬಡಾವಣೆ ಜನರಿಗೆ ಸಮಸ್ಯೆಯಾಗುತ್ತಿದ್ದು, ರಾತ್ರಿಯೆಲ್ಲ ನೀರು ಸಂಗ್ರಹಿಸಿ, ಬೆಳಗ್ಗೆ ಪೂರೈಕೆ ಮಾಡುವ ಪ್ರಯತ್ನಗಳು ನಡೆಯುತ್ತಿದೆಯಾದರೂ, ಕೊಳವೆ ಬಾವಿಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ.3 ತಿಂಗಳಲ್ಲಿ 3 ಮೀಟರ್‌ ಕುಸಿತ:ಕಳೆದ ಸಾಲಿನ ನವೆಂಬರ್‌ನಲ್ಲಿ ಜಿಲ್ಲೆಯ ಅಂತರ್ಜಲ ಸರಾಸರಿ 10.51 ಮೀಟರ್‌ಗಳಷ್ಟು ಕುಸಿತ ಕಂಡಿತ್ತು. ಇದಕ್ಕೆ ಕಳೆದ ಸಾಲಿನ ಮುಂಗಾರು ಮಳೆ ಕೊರತೆ ಪ್ರಮುಖ ಕಾರಣವಾಗಿತ್ತು. ಆದರೆ ಜನವರಿ ಅಂತ್ಯದಲ್ಲಿ 13.08 ಮೀಟರ್‌ಗೆ ಕುಸಿತವಾಗಿದ್ದು ಕಳೆದ 3 ತಿಂಗಳಲ್ಲಿ 3 ಮೀಟರ್‌ನಷ್ಟು ಅಂತರ್ಜಲ ಮಟ್ಟ ಇಳಿದಿದೆ. ತಿಂಗಳಿಗೆ ಒಂದು ಮೀಟರ್‌ನಷ್ಟು ನೀರು ಆಳಕ್ಕೆ ಇಳಿದಿದೆ. ಇದರ ಪ್ರಮಾಣ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. 145 ಕೊಳವೆ ಬಾವಿಗಳು ಬತ್ತಿವೆ:ಪ್ರಸ್ತುತ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ 1161 ಕೊಳವೆ ಬಾವಿಗಳಿವೆ, ಅವುಗಳಲ್ಲಿ ಫೆಬ್ರವರಿ ಮೊದಲ ವಾರದಲ್ಲಿಯೇ 145 ಸಂಪೂರ್ಣ ಬತ್ತಿದ್ದು, 254 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿತವಾಗಿ, ನಿರೀಕ್ಷಿಸಿದಷ್ಟು ನೀರು ಲಭ್ಯವಾಗುತ್ತಿಲ್ಲ. ಬೇಸಿಗೆ ಪೂರ್ವದಲ್ಲಿಯೇ ಜಿಲ್ಲೆಯಲ್ಲಿ ಮಳೆಯಾಗಬೇಕು, ಇಲ್ಲವಾದಲ್ಲಿ ಇನ್ನಷ್ಟು ಕೊಳವೆಬಾವಿಗಳು ಬತ್ತುವ ಸಾಧ್ಯತೆ ಇದೆ ಎನ್ನುತ್ತಾರೆ ನೀರು ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳು.

ಇನ್ನು ಕುಸಿಯುವ ಭೀತಿ:

2022ನೇ ವರ್ಷಕ್ಕೆ ಹೋಲಿಕೆ ಮಾಡಿದರೆ 2023 ಮತ್ತು 2024ರ ಆರಂಭದಲ್ಲೇ ಅಂತರ್ಜಲ ತೀವ್ರ ಮಟ್ಟದ ಕುಸಿತ ಕಂಡಿದೆ. 2022ರಲ್ಲಿ 8 ಮೀಟರ್ ಕುಸಿದಿದ್ದ ಅಂತರ್ಜಲ, 2023 ಮತ್ತು 2024ರ ಆರಂಭಕ್ಕೆ 11ರಿಂದ 13 ಮೀಟರ್ ಗೆ ಕುಸಿತ ಕಂಡಿದೆ. ಪ್ರಸಕ್ತ ಸಾಲಿನ ಮುಂಗಾರಿಗಾಗಿ ಜೂನ್ ತಿಂಗಳವರೆಗೂ ಕಾಯಬೇಕು, ಅಲ್ಲಿಯವರೆಗೂ ಇದೇ ರೀತಿಯ ವಾತಾವರಣ ಮುಂದುವರಿದರೆ ಅಂತರ್ಜಲ ಹೆಚ್ಚು ಕುಸಿತ ಕಾಣಲಿದೆ.

ಕೆರೆಗಳ ಭರ್ತಿಗೆ ಕ್ರಮ: ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಕೆರೆಗಳು ಭರ್ತಿಯಾಗಲಿಲ್ಲ, ಹಳ್ಳಗಳು ಒಮ್ಮೆಯೂ ತುಂಬಿ ಹರಿದಿಲ್ಲ, ರೈತರ ಕೃಷಿ ಹೊಂಡಗಳಲ್ಲಿಯೂ ನೀರು ಸಂಗ್ರಹವಾಗಿಲ್ಲ, ಇದರ ಪರಿಣಾಮವಾಗಿಯೇ ಅಂತರ್ಜಲ ಕುಸಿತವಾಗಿದೆ. ಬೇಸಿಗೆ ಪೂರ್ವದಲ್ಲಿಯೇ ನವಿಲು ತೀರ್ಥ, ಸಿಂಗಟಾಲೂರು ಬ್ಯಾರೇಜ್‌ಗಳಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣವನ್ನು ಆಧಾರವಾಗಿಟ್ಟು ವಿವಿಧ ಗ್ರಾಮಗಳ ಕೆರೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ನೀರಾವರಿ ಇಲಾಖೆ ಅಧಿಕಾರಿಗಳು.ಜಿಲ್ಲೆಯ ನೀರಿನ ಸಮಸ್ಯೆ ಸೇರಿದಂತೆ ಮುಂಬರುವ ಬೇಸಿಗೆ ಎದುರಿಸಲು ತಾಲೂಕುವಾರು ತಹಸೀಲ್ದಾರರು ಪ್ರತಿ ವಾರಕ್ಕೊಮ್ಮೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಿ, ಚರ್ಚಿಸಿ ವರದಿ ನೀಡುತ್ತಾರೆ. ವರದಿ ಆಧಾರದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಸಕಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಹೇಳಿದರು.

Share this article