ಪರಿಸರ ಸಮತೋಲನಕ್ಕೆ ಮರ ಬೆಳೆಸಿ: ಸಚಿವ ಕೆ.ಎಚ್.ಮುನಿಯಪ್ಪ

KannadaprabhaNewsNetwork | Published : Aug 4, 2024 1:16 AM

ಸಾರಾಂಶ

ಪ್ರಕೃತಿ ವಿಕೋಪಗಳನ್ನು ತಪ್ಪಿಸಲು ಪ್ರಕೃತಿಯ ಸಮತೋಲನ ಕಾಪಾಡಲು ಗಿಡ-ಮರಗಳನ್ನು ಬೆಳೆಸಲು ನಾವೆಲ್ಲರು ಅಣಿಯಾದಾಗ ಮಾತ್ರ ಸಕಾಲದಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆಗೆ ಸಹಕಾರಿಯಾಗುತ್ತದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಕುಂದಾಣದಲ್ಲಿ ಆಯೋಜಿಸಿದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರಣ್ಯ ಇಲಾಖೆಯಿಂದ ವನ ಮಹೋತ್ಸವ -ರೈತರು ಜಮೀನಲ್ಲಿ ಮೂರನೇ ಒಂದರಷ್ಟು ಗಿಡ ನೆಡಿಕನ್ನಡಪ್ರಭ ವಾರ್ತೆ ಕುಂದಾಣ

ಪ್ರಕೃತಿ ವಿಕೋಪಗಳನ್ನು ತಪ್ಪಿಸಲು ಪ್ರಕೃತಿಯ ಸಮತೋಲನ ಕಾಪಾಡಲು ಗಿಡ-ಮರಗಳನ್ನು ಬೆಳೆಸಲು ನಾವೆಲ್ಲರು ಅಣಿಯಾದಾಗ ಮಾತ್ರ ಸಕಾಲದಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆಗೆ ಸಹಕಾರಿಯಾಗುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಕುಂದಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ವನ ಮಹೋತ್ಸವ-೨೦೨೪’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ತಮ್ಮ ಜಮೀನುಗಳಲ್ಲಿ ಮೂರನೇ ಒಂದು ಭಾಗ ಮಾವು, ತೆಂಗು, ಹಲಸು, ನೇರಳೆ ಮುಂತಾದ ಆದಾಯದ ಗಿಡ-ಮರಗಳನ್ನು ಬೆಳೆಸಿದರೆ ಆದಾಯದ ಜತೆಗೆ ಪರಿಸರ ಸಮತೋಲನ ನಿರ್ಮಾಣವಾಗುತ್ತದೆ. ಬೆಟ್ಟ-ಗುಡ್ಡ ಪ್ರದೇಶಗಳಲ್ಲಿ ಗಿಡ ಮರಗಳನ್ನು ಬೆಳೆಸುವುದರಿಂದ ಭೂ ಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸುವುದನ್ನು ತಪ್ಪಿಸಬಹುದು. ಜಿಲ್ಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ರಸ್ತೆಗಳ ಎರಡು ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಮರಗಳನ್ನು ನೆಡಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗಾರ್ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ೨,೨೯೮ ಕಿ.ಮೀ. ವ್ಯಾಪ್ತಿ, ೨೨,೮೦೦ ಹೆಕ್ಟೇರ್ ಭೂ ವಿಸ್ತೀರ್ಣ ಹೊಂದಿದೆ. ೨೦೩.೮೯ ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವಿದೆ. ಒಟ್ಟು ಭೂ ಪ್ರದೇಶದಲ್ಲಿ ಶೇಕಡ ೮.೮ ರಷ್ಟು ಅರಣ್ಯ ಭೂಮಿ ಆವೃತ್ತಿಯಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಮತೋಲನ ಕಾಪಾಡಲು ಅರಣ್ಯೀಕರಣ, ವನ್ಯಜೀವಿ ಸಂರಕ್ಷಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಕಳೆದ ಐದು ವರ್ಷಗಳಲ್ಲಿ ೨೪೦೦ ಹೆಕ್ಟೇರ್ ನೆಡುತೋಪು ಮಾಡಲಾಗಿದೆ. ೩೮೩ ರೈತ ಫಲಾನುಭವಿಗಳಿಗೆ ೧೬ ಲಕ್ಷ ಸಸಿಗಳನ್ನು ವಿತರಿಸಲಾಗಿದ್ದು ಗಿಡಗಳನ್ನು ಬೆಳೆಸಿ ಪೋಷಿಸಲು ಇದುವರೆಗೆ ೭೪ ಲಕ್ಷ ರು. ಹಣ ರೈತ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಹೇಳಿದರು.

ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ ೩೦೬೫ ಫಲಾನುಭವಿಗಳಿಗೆ ಸಸಿ ವಿತರಿಸಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ೨೦೨೪ ನೇ ಸಾಲಿನಲ್ಲಿ ೨೫೧ ಲಕ್ಷ ರು. ಯೋಜನಾ ವೆಚ್ಚ ರೂಪಿಸಲಾಗಿದ್ದು ೧೬೫ ಕಿಲೋ ಮೀಟರ್ ನೆಡುತೋಪು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಾದೇಶಿಕ ಅರಣ್ಯ ಮತ್ತು ಸಾಮಾಜಿಕ ಅರಣ್ಯ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಸಿಬ್ಬಂದಿಗೆ ಸಚಿವರು ಪ್ರಶಂಸೆ ಪತ್ರ ವಿತರಿಸಿ ಅಭಿನಂದಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಾಂತಕುಮಾರ್, ಸದಸ್ಯ ಪ್ರಸನ್ನಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಜಣ್ಣ, ಕುಂದಾಣ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಎ.ಆರ್, ಉಪಾಧ್ಯಕ್ಷೆ ನೀಲಮ್ಮ, ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧಾ, ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್. ಪಿ.ಎನ್., ದೇವನಹಳ್ಳಿ ತಾಲೂಕು ತಹಶೀಲ್ದಾರ್ ಬಾಲಕೃಷ್ಣ, ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಕುಂದಾಣ ಉಪ ತಹಸೀಲ್ದಾರ್ ಚೈತ್ರ, ದೇವನಹಳ್ಳಿ ಅರಣ್ಯ ವಲಯ ಅಧಿಕಾರಿ ಪವಿತ್ರ, ಕುಂದಾಣ ಗ್ರಾಪಂ ಸದಸ್ಯರಾದ ಕೆ.ವಿ.ಸ್ವಾಮಿ, ಕ್ಯಾತೇಗೌಡ, ಸೇರಿ ಎಲ್ಲಾ ಅಧಿಕಾರಿಗಳು, ವಸತಿ ಶಾಲಾ ವಿದ್ಯಾರ್ಥಿಗಳಿದ್ದರು.

Share this article