ಕನ್ನಡಪ್ರಭ ವಾರ್ತೆ ಪುತ್ತೂರು
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶ ರಾಜ್ಯಾದ್ಯಂತ ನಡೆಯುತ್ತಿದ್ದು, ಮಾ.೭ರಂದು ಬೆಳಗ್ಗೆ ೧೧ ಗಂಟೆಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಪುತ್ತೂರು ವಿಧಾನಸಭಾ ವ್ಯಾಪ್ತಿಯಲ್ಲಿನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.ಅವರು ಸೋಮವಾರ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಪುತ್ತೂರು ವಿಧಾನಸಭಾ ವ್ಯಾಪ್ತಿಯಲ್ಲಿ ಈತನಕ ಒಟ್ಟು ೮೧.೯೦ ಮಹಿಳೆಯರು ಶಕ್ತಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು, ೧೭.೮೮ ಕೋಟಿ ರು. ಪಾವತಿಸಲಾಗಿದೆ. ೫೯,೭೨೭ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದಾರೆ. ೩೦ ಸಾವಿರ ಕುಟುಂಬಗಳು ಗೃಹಜ್ಯೋತಿಯ ಪ್ರಯೋಜನ ಪಡೆದುಕೊಂಡಿದ್ದಾರೆ. ೨೪,೯೪೮ ಫಲಾನುಭವಿಗಳು ಅನ್ನಭಾಗ್ಯ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರೆ. ೨೪೪೨ ಕುಟುಂಬ ಅಂತ್ಯೋದಯ ಯೋಜನೆ ಹಾಗೂ ೩೫೬ ಮಂದಿ ಯುವ ನಿಧಿಯ ಫಲಾನುಭವಿಗಳಾಗಿದ್ದಾರೆ. ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಗ್ಯಾರಂಟಿ ಸಮಾವೇಶದಲ್ಲಿ ಸುಮಾರು ೨೦ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಗ್ರಾಮೀಣ ಭಾಗದಿಂದ ಸಮಾವೇಶಕ್ಕೆ ಆಗಮಿಸಲು ಬಸ್ಸಿನ ವ್ಯವಸ್ಥೆ ಮಾಡಲಾಗುತ್ತಿದೆ. ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಇತರ ಸಚಿವರು ಭಾಗವಹಿಸಲಿದ್ದಾರೆ. ಅಲ್ಲದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಲಾಗಿದ್ದು, ಅವರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಇಂದು ಮಂಗಳೂರಲ್ಲಿ ‘ಗ್ಯಾರಂಟಿ’ ಸಮಾವೇಶಮಂಗಳೂರು: ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ಜಿಲ್ಲೆಯ ಪ್ರತಿ ಅರ್ಹ ಪಲಾನುಭವಿಗೆ ಈ ಯೋಜನೆಗಳ ಸೌಲಭ್ಯವನ್ನು ಪರಿಣಾಮಕಾರಿಯಾಗಿ ತಲುಪಿಸಲು ಪ್ರತಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ ಆಯೋಜಿಸಲಾಗಿದೆ. ಮಂಗಳೂರು ತಾಲೂಕಿನಲ್ಲಿ ಮಾರ್ಚ್ 7ರಂದು ಸಂಜೆ 4.30ಕ್ಕೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಗ್ಯಾರಂಟಿ ಸಮಾವೇಶ ಆಯೋಜಿಸಲಾಗಿದೆ ಎಂದು ಮಂಗಳೂರು ತಾಲೂಕು ತಹಸೀಲ್ದಾರ್ ಪ್ರಕಟಣೆ ತಿಳಿಸಿದೆ.