ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ಬಂದ್ ಮಾಡುವುದಿಲ್ಲ: ಎಸ್.ಆರ್. ಪಾಟೀಲ

KannadaprabhaNewsNetwork | Updated : Aug 15 2024, 01:46 AM IST

ಸಾರಾಂಶ

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ಬಂದ್ ಮಾಡುವುದಿಲ್ಲ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.

ಬ್ಯಾಡಗಿ: ಬಿಟ್ಟಿ ಭಾಗ್ಯ ಜಾರಿಗೊಳಿಸಿದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ಸರ್ಕಾರದ ಬಳಿ ಅಭಿವೃದ್ದಿಗೆ ಹಣವಿಲ್ಲ ಎನ್ನುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿಕೆ ಶುದ್ದ ಸುಳ್ಳು. ಕಾಂಗ್ರೆಸ್ ಬಡವರ ಪರವಾಗಿದ್ದು, ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ಬಂದ್ ಮಾಡುವುದಿಲ್ಲ ಎಂದು ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಐದು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ರಾಜ್ಯದಲ್ಲಿ ಅನ್ಯಭಾಗ್ಯದಿಂದ ೧೧೦ ಲಕ್ಷ ಕುಟುಂಬಗಳು, ಗೃಹಜ್ಯೋತಿಯಡಿ ಗ್ರಾಮೀಣ ಪ್ರದೇಶದಲ್ಲಿ ಶೇ. ೯೭ರಷ್ಟು ಹಾಗೂ ಪಟ್ಟಣದಲ್ಲಿ ಶೇ. ೭೭ರಷ್ಟು ಕುಟುಂಬಗಳು, ಶಕ್ತಿ ಯೋಜನೆಯಡಿ ೧೮೦ ಕೋಟಿ ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಡಿ ೧೧೨ ಲಕ್ಷ ಕುಟುಂಬಗಳು ಲಾಭ ಪಡೆದಿವೆ. ೨೦೨೩ ರಲ್ಲಿ ₹೩೮ ಸಾವಿರ ಕೋಟಿ ಖರ್ಚು ಮಾಡಿದ್ದು, ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ₹೬೦ ಸಾವಿರ ಕೋಟಿ ತೆಗೆದಿರಿಸಿದ್ದೇವೆ. ವಿಧಾನಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಲೋಕೋಪಯೋಗಿ ಇಲಾಖೆ ಅನುದಾನವಿಲ್ಲ

ಹಿಂದಿನ ಬಿಜೆಪಿ ಸರ್ಕಾರ ಚುನಾವಣೆ ಕೆಲವೇ ದಿನ ಬಾಕಿಯಿದ್ದ ವೇಳೆ ₹೧೮ ಸಾವಿರ ಕೋಟಿ ಮೊತ್ತದ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದ್ದು, ಹಣವಿಲ್ಲದೆ ಮಂಜೂರಾತಿ ನೀಡಿದ್ದಾರೆ. ಮುಜರಾಯಿ ಇಲಾಖೆಯ ಬಹುತೇಕ ಕಾಮಗಾರಿಗಳಿಗೆ ಹಣ ತೆಗೆದಿರಿಸದೆ ಸಂಪೂರ್ಣ ಆರ್ಥಿಕ ವ್ಯವಸ್ಥೆ ಕೆಡಿಸಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸಿ, ಸರ್ಕಾರ ದಿವಾಳಿ ಎನ್ನುವ ಬಿಜೆಪಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ತಂತ್ರ ಹೂಡಿದೆ ಎಂದು ಆರೋಪಿಸಿದರು.

ಶೇ. ೮೦ರಷ್ಟು ಅವ್ಯವಹಾರ

ಹಿಂದಿನ ಅವಧಿಯಲ್ಲಿ ಅತಿವೃಷ್ಟಿಗೆ ಬಿದ್ದ ಬಹುತೇಕ ಮನೆಗಳ ಆಯ್ಕೆ ವೇಳೆ ಸಾಕಷ್ಟು ಅವ್ಯವಹಾರ ನಡೆದಿದ್ದು, ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಫಲಾನುಭವಿಗಳಿಂದ ಕೆಲ ಅಧಿಕಾರಿಗಳು ಹಣ ಪಡೆದು ಮಂಜೂರಾತಿ ನೀಡಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ತನಿಖೆ ಮುಂದುವರಿದಿದೆ. ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಅಮಾನತುಗೊಂಡಿದ್ದು, ಇದಕ್ಕೆ ಸಂಬಂಧಿಸಿದ ಬಹುತೇಕ ದಾಖಲೆಗಳು ಮಾಯವಾಗಿವೆ ಎಂದು ತಿಳಿಸಿದರು.

ಉಸ್ತುವಾರಿ ಮಂತ್ರಿಗಳ ತುರ್ತು ಸಭೆ

ಸುಮಾರು ೨ ದಶಕಗಳಿಂದ ನನೆಗುದಿಗೆ ಬಿದ್ದಿರುವ ಬ್ಯಾಡಗಿ ಮುಖ್ಯರಸ್ತೆ ವಿಸ್ತರಣೆ ಹೋರಾಟದಲ್ಲಿ ನಾನೂ ಪಾಲ್ಗೊಂಡಿದ್ದು, ಸರ್ಕಾರಕ್ಕೆ ಒತ್ತಾಯಿಸಿರುವೆ. ಪ್ರಕರಣ ಇತ್ಯರ್ಥಗೊಳಿಸಲು ಆ. ೧೫ರ ಬಳಿಕ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.

ಈ ವೇಳೆ ರಮೇಶ ಸುತ್ತಕೋಟಿ, ವಕೀಲ ಪ್ರಕಾಶ ಬನ್ನಿಹಟ್ಟಿ, ರಮೇಶ ಮೋಟೆಬೆನ್ನೂರು, ಖಾದರಸಾಬ ದೊಡ್ಡಮನಿ, ಉದಯ ಚೌದರಿ, ಮಂಜುನಾಥ ಬೋವಿ ಇದ್ದರು.

Share this article