ಕನ್ನಡಪ್ರಭ ವಾರ್ತೆ ಆನಂದಪುರ
ಬಂಗಾರಪ್ಪನವರ ಗರಡಿಯಲ್ಲಿ ಬೆಳೆದು ಅವರ ನಾಯಕತ್ವವನ್ನು ಮೈಗೂಡಿಸಿಕೊಂಡಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.ಅವರು ಸೋಮವಾರ ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕೋಟಿಗೂ ಅಧಿಕ ವೆಚ್ಚದಲ್ಲಿ ರಸ್ತೆ ಹಾಗೂ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ, ನಂತರ ಗ್ರಾಮ ಪಂಚಾಯಿತಿ ಮುಂಭಾಗ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಬಂಗಾರಪ್ಪನವರ ಗರಡಿಯಲ್ಲಿ ಬೆಳೆದ ನಾನು ಅವರ ನಾಯಕತ್ವವನ್ನು ಮೈಗೂಡಿಸಿಕೊಂಡವನು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಾನು ಯಾವುದೇ ವಿಚಾರದಲ್ಲೂ ಹೆದರದೆ ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡುತ್ತೇನೆ. ಸಮಯ ಬಂದರೆ ನಾನು ಗುಡುಗಿದರೆ ವಿಧಾನಸೌಧವೇ ನಡುಗುತ್ತದೆ ಎಂದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ಬದುಕಿಗೆ ದಾರಿಯಾಗಿದೆ. ಸಾಗರ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಇಲ್ಲ ಎಂದು ಹೇಳುವಂಥವರಿಗೆ ನನ್ನ ಅವಧಿಯಲ್ಲಿ ಅಭಿವೃದ್ಧಿಯೆಂದರೆ ಏನು ಎಂದು ತೋರಿಸಿದ್ದೇನೆ ಎಂದರು. ಜನರ ಆಶೀರ್ವಾದದಿಂದ ಶಾಸಕನಾದ ನಾನು ಜನರ ಧ್ವನಿಯಾಗಿ ಅಭಿವೃದ್ಧಿ ಮಾಡುವುದರೊಂದಿಗೆ ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ, ಸಾಗರ ಕ್ಷೇತ್ರದಲ್ಲಿ 27 ಕೋಟಿ ರು.ಅನುದಾನದಲ್ಲಿ ಕೆರೆಗಳ ಕಾರ್ಯಕಲ್ಪವಾಗಲಿದೆ. ಸಾಗರ ತಾಲೂಕು ಕಚೇರಿ ಹೊಸ ಕಟ್ಟಡ ನಿರ್ಮಾಣಕ್ಕೆ 5 ಕೋಟಿ, ಸಾಗರ ಮೀನು ಮಾರುಕಟ್ಟೆಗೆ 1ಕೋಟಿ 20 ಲಕ್ಷ, ಆನಂದಪುರ - ರಿಪ್ಪನ್ ಪೇಟೆ ಹೆದ್ದಾರಿ ರಸ್ತೆಗೆ 27 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ರಿಪ್ಪನ್ ಪೇಟೆಯ ವೃತ್ತ ಎರಡು ಕೋಟಿ ಅನುದಾನದಲ್ಲಿ ಸುಂದರವಾಗಿ ನಿರ್ಮಾಣಗೊಳ್ಳಲಿದೆ. ಅಲ್ಲದೆ ಪಿಡಬ್ಲ್ಯೂಡಿ ರಸ್ತೆಗಳ ಗುಂಡಿ ಮುಚ್ಚಲು 6 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಒಟ್ಟಾರೆಯಾಗಿ ಗ್ಯಾರೆಂಟಿ ಯೋಜನೆ ನೀಡುವುದರ ಜೊತೆಗೆ ಸಾಗರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಆಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಆಚಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕಲೀಮುಲ್ಲಾ ಖಾನ್, ಉಪಾಧ್ಯಕ್ಷ ನಾಗರತ್ನ, ಸದಸ್ಯರಾದ ಬಸವರಾಜ್, ಪ್ರಕಾಶ್ ತಂಗಳವಾಡಿ, ಮೇನಕ, ಲತಾ, ಸೋಮೇಶ್, ಕೋಮಲ, ಪುಷ್ಪ, ಹಾಜಿರಾ, ಕಳಸ ಚಂದ್ರಪ್ಪ, ಅಬ್ದುಲ್ ರಜಾಕ್, ಅಶೋಕ್ ಬೆಳೆಯೂರು, ರಂಗಸ್ವಾಮಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.