ಗ್ಯಾರಂಟಿ ಯೋಜನೆಗಳು ಸರ್ಕಾರದ ಹೆಮ್ಮೆ: ಲಕ್ಷ್ಮೀ ಹೆಬ್ಬಾಳ್ಕರ್‌

KannadaprabhaNewsNetwork | Published : Jan 27, 2024 1:15 AM

ಸಾರಾಂಶ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸು ಸರ್ಕಾರಕ್ಕೆ ಹೆಮ್ಮೆಯನ್ನುಂಟು ಮಾಡಿದೆ. ಈ ಐದು ಯೋಜನೆಗಳಿಂದ ಜನರ ಬದುಕು ಸಾಕಷ್ಟು ಬದಲಾಗಿದೆ ಎಂದು ಹೆಬ್ಬಾಳ್ಕರ್‌ ಹೆಳಿದ್ದಾರೆ. ಅವರು ಉದುಪಿ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯ ಸರ್ಕಾರದ ಯೋಜನೆಗಳು ಸರ್ವರಿಗೂ ಅನುಕೂಲವಾಗುವಂತಿರಬೇಕು ಎಂಬ ದೃಷ್ಠಿಯಿಂದ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿ, ಜಾತಿ, ಧರ್ಮ, ಲಿಂಗಬೇಧಗಳಿಲ್ಲದೆ ಸರ್ವರಿಗೂ ಈ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆ ಮೆರೆಯುತ್ತಿದೆ‌ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದ್ದಾರೆ.

ಶುಕ್ರವಾರ ನಗರದ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸು ಸರ್ಕಾರಕ್ಕೆ ಹೆಮ್ಮೆಯನ್ನುಂಟು ಮಾಡಿದೆ. ಈ ಐದು ಯೋಜನೆಗಳಿಂದ ಜನರ ಬದುಕು ಸಾಕಷ್ಟು ಬದಲಾಗಿದೆ ಎಂದರು.

ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿದ್ದು, ಈ ಜಿಲ್ಲೆಯ ಮೂರು ತಾಲೂಕುಗಳಲ್ಲೂ ಬರದ ಛಾಯೆ ಆವರಿಸಿದ್ದು, ಜಿಲ್ಲೆಯ ಹೆಬ್ರಿ, ಬ್ರಹ್ಮಾವರ ಹಾಗೂ ಕಾರ್ಕಳ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಈಗಾಗಲೇ ಸೇರಿಸಲಾಗಿದೆ. ಬರ ಸಮೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 13,937 ಹೆಕ್ಟೇರ್ ನಷ್ಟು ಭತ್ತದ ಬೆಳೆ ಹಾನಿ ಅಂದಾಜಿಸಲಾಗಿದ್ದು, ರು.11 ಕೋಟಿ 85 ಲಕ್ಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದಿಂದ ಮೊದಲನೇ ಕಂತಿನಲ್ಲಿ 19,071 ರೈತರಿಗೆ ರು.2 ಕೋಟಿ 64 ಲಕ್ಷ ಪರಿಹಾರವನ್ನು ಪಾವತಿಸಲಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರು ಜಿಲ್ಲೆಯ ಸಾಧಕ ರೈತರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

ಸಮಾರಂಭದಲ್ಲಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಯಾಲ್, ಎಡಿಸಿ ಮಮತಾ ದೇವಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Share this article