ಗದಗ: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಬಡಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿವೆ. ಅರ್ಹರಿಗೆ ಯೋಜನೆ ಸೌಲಭ್ಯ ಸುಲಭವಾಗಿ ತಲುಪಲು ಅಧಿಕಾರಿ ವರ್ಗ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.
ಸೆ. 19 ರಂದು ಜಿಲ್ಲಾಡಳಿತದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ನೇತೃತ್ವದಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಸಚಿವರ ಸೂಚನೆ ನೀಡಿದಂತೆ ತಾಲೂಕು ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಹಾಗೂ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಇರುವ ತಾಂತ್ರಿಕ ತೊಡಕು ನಿವಾರಣೆಗೆ ಸಮಿತಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುವಂತೆ ಹೇಳಿದ್ದರು. ಅವರ ಮಾರ್ಗದರ್ಶನದಂತೆ ನಾವೆಲ್ಲರೂ ಅರ್ಹರಿಗೆ ಗ್ಯಾರಂಟಿಗಳ ಸೌಲಭ್ಯ ತಲುಪುವಂತೆ ಕಾರ್ಯ ನಿರ್ವಹಿಸೋಣ ಎಂದರು.
ಪಂಚ ಗ್ಯಾರಂಟಿ ಅನುಷ್ಠಾನದಲ್ಲಿರುವ ತಾಂತ್ರಿಕ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಮುತುವರ್ಜಿ ವಹಿಸಿ ಸಮಿತಿ ಸದಸ್ಯರನ್ನು ಒಳಗೊಂಡಂತೆ ಪ್ರತ್ಯೇಕ ಸಭೆ ಏರ್ಪಡಿಸಿ ತಾಂತ್ರಿಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗೋಣ. ಅಧಿಕಾರಿಗಳು ಸೂಕ್ತ ಸಹಕಾರದೊಂದಿಗೆ ಕೆಲಸ ನಿರ್ವಹಿಸಿ. ಸರ್ಕಾರದ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಲವರ್ಧನೆಯಾಗಿದೆ. ಸರ್ಕಾರದ ಉದ್ದೇಶ ಸಾಕಾರಕ್ಕಾಗಿ ನಾವೆಲ್ಲ ಒಮ್ಮತದಿಂದ ಶ್ರಮಿಸೋಣ ಎಂದರು.ಸಮಿತಿ ಸದಸ್ಯ ಕೃಷ್ಣಗೌಡ ಪಾಟೀಲ ಮಾತನಾಡಿ, ರಾಜ್ಯದ 1.10 ಕೋಟಿ ಕುಟುಂಬಗಳ ಬಡತನ ನಿರ್ಮೂಲನೆ ಮಾಡುವಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಸಫಲವಾಗಿವೆ. ಪಂಚ ಗ್ಯಾರಂಟಿಗಳ ಸದ್ಭಳಕೆಯಿಂದ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ ₹ 5,000 ಸಹಾಯ ಸಿಗುತ್ತಿದೆ. ಬಡವರು ಹಸಿವಿನಿಂದ ಬಳಲಬಾರದು. ಜನಪ್ರತಿನಿಧಿಗಳಾದವರು ಸರ್ಕಾರದ ಸೌಲಭ್ಯ ಅರ್ಹರಿಗೆ ತಲುಪಿಸುವವರು ಎಂದರು.
ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಪಡಿತರ ಪಡೆಯಲು ಪಡಿತರದಾರರು ಥಂಬ್ ನೀಡಿದರೂ ತಾಂತ್ರಿಕ ಸಮಸ್ಯೆಗಳಿಂದ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿ ಹಲವಾರು ತಿಂಗಳುಗಳೇ ಗತಿಸಿದರು ಈವರೆಗೂ ಮಂಜೂರಾತಿ ದೊರೆತಿರುವುದಿಲ್ಲ.ಇಂತಹ ಹಲವಾರು ಸಮಸ್ಯೆಗಳಿದ್ದು ಅವುಗಳ ನಿವಾರಣೆಗೆ ವಿಶೇಷ ಶಿಬಿರ ಹಮ್ಮಿಕೊಳ್ಳುವ ಮೂಲಕ ಸ್ಥಳದಲ್ಲೇ ತಾಂತ್ರಿಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗೋಣ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೆ. ಮಾತನಾಡಿ, ಕಳೆದ ಪ್ರಗತಿ ಪರಿಶೀಲನಾ ಸಭೆಯ ನಡುವಳಿ ಹಾಗೂ ಆಗಿರುವ ಪ್ರಗತಿ ಅಂಕಿ ಅಂಶ ಸಭೆಗೆ ಮಂಡಿಸುತ್ತಾ ಶೇ.100 ರಷ್ಟು ಪ್ರಗತಿ ನಮ್ಮ ಗುರಿಯಾಗಿರಲಿ. ರಾಜ್ಯದಲ್ಲಿಯೇ ಗದಗ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನದಲ್ಲಿ ಉನ್ನತ ಸ್ಥಾನದಲ್ಲಿರುವಂತೆ ನೋಡಿಕೊಳ್ಳೋಣ ಎಂದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ದಯಾನಂದ ಪವಾರ, ಸಂಗು ಕರಕಲಕಟ್ಟಿ, ಮೀನಾಕ್ಷಿ ಬೆನಕಣ್ಣವರ, ಶಂಭು ಕಾಳೆ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ, ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡಿ, ಮಲ್ಲಪ್ಪ ಬಾರಕೇರ, ಭಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆ ನೀಡಿದರು. ಪಂಚ ಗ್ಯಾರಂಟಿಗಳ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಇದ್ದರು.