ಕನ್ನಡಪ್ರಭ ವಾರ್ತೆ ಗುಬ್ಬಿ
ಕಲಾವಿದನೊಬ್ಬನ ಬದುಕು ಅವನು ಬಣ್ಣ ಹಚ್ಚುವವರೆಗೆ ಮಾತ್ರ. ನಂತರ ಅವನಿಗೆ ಯಾವ ರೀತಿಯ ಸೌಕರ್ಯ ಸೌಲಭ್ಯ ಸಿಗದು ಎನ್ನುವ ಮಾತಿತ್ತು. ಆದರೆ ವೃತ್ತಿ ರಂಗಭೂಮಿಯ ಕಂಪನಿಯನ್ನು 100 ವರ್ಷಗಳ ಕಾಲ ನೆಡೆಸಿ ಈ ನಾಡಿಗೆ ಅಸಂಖ್ಯಾತ ಕಲಾವಿದರನ್ನು ಪರಿಚಯಿಸಿದ ಕೀರ್ತಿ ಡಾ.ಗುಬ್ಬಿ ವೀರಣ್ಣನವರಿಗೆ ಸಲ್ಲುತ್ತದೆ ಎಂದು ಜೀವಿತಾ ನಾಟಕೋತ್ಸವದ ಸಂಚಾಲಕ ಹಾಗೂ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಹಿರಿಯ ರಂಗ ಕರ್ಮಿ ನಟ ನಿರ್ದೇಶಕ ಎಚ್.ಎಂ. ರಂಗಯ್ಯ ತಿಳಿಸಿದರು.ಸೋಮವಾರ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನೆಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಬ್ಬಿ ವೀರಣ್ಣ ನವರ ರಂಗ ಪರಂಪರೆಯನ್ನು ಉಳಿಸಿ ಬೆಳೆಸಯುವ ನಿಟ್ಟಿನಲ್ಲಿ ಸರ್ಕಾರ ಪ್ರಾಂರಂಭಿಸಿದ ಡಾ ಗುಬ್ಬಿ ವೀರಣ್ಣ ಟ್ರಸ್ಟ್‌ಗೆ ಇಂದು ದಶಮಾನದ ಸಂಭ್ರಮ. ಈ ಸಂದರ್ಭದಲ್ಲಿ ನೆಡೆಯುತ್ತಿರುವ ನಾಟಕೋತ್ಸವಕ್ಕೆ ಕಲಾ ಪ್ರೋತ್ಸಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು. ಫೆ. 22 ರಿಂದ 27 ರವರೆಗೆ ಒಟ್ಟು ಆರು ದಿನಗಳ ಕಾಲ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲಾಶ್ರೀ ಡಾ. ಲಕ್ಷ್ಮಣ್ ದಾಸ್, ಫೆ. 22 ರ ಸಂಜೆ 6.30 ಕ್ಕೆ ನಾಟಕೋತ್ಸವವನ್ನು ಖ್ಯಾತ ನಾಟಕಕಾರ ಡಾ. ರಾಜಪ್ಪ ದಳವಾಯಿ ಉದ್ಘಾಟಿಸಲಿದ್ದು, ಅಂದು ಈ ವರ್ಷ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಬಾಜನರಾಗಿರುವ ಗುಬ್ಬಿ ತಾಲೂಕು ಮತ್ತಿಘಟ್ಟ ಗ್ರಾಮದ ಚನ್ನಬಸವಯ್ಯ ನವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಮ್ಯಾನೇಜರ್ ಎಸ್.ವಿ. ಚಕ್ರಪಾಣಿ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಚಿದಾನಂದಮೂರ್ತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಉದ್ಘಾಟನಾ ನಂತರ ತುಮಕೂರಿನ ರಂಗ ರಂಗ ತಂಡದಿಂದ ರಂಗಗೀತೆಗಳು ಮತ್ತೇ ವೈಭವದತ್ತ ರಂಗ ಗೀತೆಗಳು ಹೆಸರಿನಲ್ಲಿ ಅಂದಿನ ರಂಗ ಗೀತೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಲಿದ್ದಾರೆ. ಫೆ.23 ರ ಸಂಜೆ 6.30 ಕ್ಕೆ ಸಿರಿಗೇರಿ ಧಾತ್ರಿ ರಂಗಸಂಸ್ಥೆಯಿಂದ ಅಕ್ಕ ನಾಗಲಾಂಬಿಕೆ ನಾಟಕ ಬಸವಣ್ಣನವರ ಹೋರಾಟದ ಹಾದಿ ತಿಳಿಸಲಿದೆ. 24 ರ ಸಂಜೆ ಬೆಂಗಳೂರಿನ ಜಂಗಮ ಕಲೆಕ್ಟಿವ್ಸ್ ತಂಡ ಪಂಚಮ ಪದ ಎಂಬ ದಲಿತ ಹೋರಾಟದ ಹಾಡುಗಳ ಸಂಕಲನ ವ್ಯಕ್ತವಾಗಲಿದೆ ಎಂದರು.
ಫೆ.25 ರ ಸಂಜೆ ಬೆಂಗಳೂರಿನ ನಗ್ನ ಥಿಯೇಟರ್ ತಂಡ ಡೈರೆಕ್ಟ್ ಆ್ಯಕ್ಷನ್ ಎಂಬ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಅವರ ಜೀವನ ಚರಿತ್ರೆ ವೇದಿಕೆಯಲ್ಲಿ ಬರಲಿದೆ. ಫೆ.26 ರ ಸಂಜೆ ತುಮಕೂರು ನಾಗಾರ್ಜುನ ಕಲಾಸಂಘದಿಂದ ಪ್ರಚಂಡ ರಾವಣ ಎಂಬ ಪೌರಾಣಿಕ ನಾಟಕ ಪ್ರದರ್ಶಿಸಲಾಗುವುದು. ಫೆ.27 ರ ಸಂಜೆ ತುಮಕೂರು ಶ್ರೀ ಸೀಬಿ ನರಸಿಂಹಸ್ವಾಮಿ ಕಲಾ ಸಂಘದಿಂದ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ ನಡೆದು ನಾಟಕೋತ್ಸವ ಅಂತಿಮಗೊಳ್ಳಲಿದೆ ಎಂದರು.ಟ್ರಸ್ಟಿ ಡಾ. ರಾಜೇಶ್ ಗುಬ್ಬಿ, ಕಾಡಶೆಟ್ಟಿ ಸತೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರಾದ ಕುಮಾರ್ ಗುಬ್ಬಿ ವೀರಣ್ಣ ಉಪಸ್ಥಿತರಿದ್ದರು. ನಾಟಕಗಳು ಪ್ರತಿ ದಿನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು ಟಿಕೆಟ್ ದರ 30ರು. ನಿಗದಿಗೊಳಿಸಲಾಗಿದೆ.