ಗುದ್ನೆಪ್ಪನ ಮಠದ ಒಂದು ಗುಂಟೆ ಜಾಗವನ್ನೂ ಕೊಡುವುದಿಲ್ಲ: ಶ್ರೀ ಪ್ರಭುಲಿಂಗ ದೇವರು

KannadaprabhaNewsNetwork | Published : Apr 13, 2024 1:04 AM

ಸಾರಾಂಶ

ಗುದ್ನೆಪ್ಪನ ಮಠದ ಆಸ್ತಿ ಸರ್ವ ಭಕ್ತಾದಿಗಳದ್ದು, ಸರ್ಕಾರದ ಆಸ್ತಿಯಲ್ಲ. ಗುದ್ನೆಪ್ಪನ ಮಠದ ಒಂದು ಗುಂಟೆ ಜಾಗವನ್ನೂ ತಾಲೂಕಾಡಳಿತ ಕಟ್ಟಡಕ್ಕೆ ಕೊಡುವುದಿಲ್ಲ ಎಂದು ಶ್ರೀ ಪ್ರಭುಲಿಂಗ ದೇವರು ಹೇಳಿದರು.

ಕುಕನೂರು: ಗುದ್ನೆಪ್ಪನ ಮಠದ ಒಂದು ಗುಂಟೆ ಜಾಗವನ್ನೂ ತಾಲೂಕಾಡಳಿತ ಕಟ್ಟಡಕ್ಕೆ ಕೊಡುವುದಿಲ್ಲ ಎಂದು ಶ್ರೀ ಪ್ರಭುಲಿಂಗ ದೇವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 800 ವರ್ಷಗಳ ಹಿಂದೆ ಪ್ರಾರಂಭವಾದ ಶ್ರೀ ಗುದ್ನೇಶ್ವರ ಜಾತ್ರೆಯು ಈ ಭಾಗದಲ್ಲೇ ಖ್ಯಾತಿ ಪಡೆದಿದೆ. ಕುಂತಳ ರಾಜನು ಉಂಬಳಿಯಾಗಿ ಕೊಟ್ಟ ಜಾಗವನ್ನು ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಕಬಳಿಕೆ ಮಾಡುತ್ತಿರುವುದು ಖಂಡನೀಯ. ಗುದ್ನೆಪ್ಪನ ಮಠದ ಆಸ್ತಿ ಸರ್ವ ಭಕ್ತಾದಿಗಳದ್ದು, ಸರ್ಕಾರದ ಆಸ್ತಿಯಲ್ಲ ಎಂದು ಹೇಳಿದರು.

ಸರ್ಕಾರ ಗುದ್ನೆಪ್ಪನ ಮಠಕ್ಕೆ ಸೇರಿದ ಜಾಗವನ್ನು ವಿವಿಧ ಹಂತಗಳಲ್ಲಿ ಕಬಳಿಕೆ ಮಾಡುತ್ತಾ ಬಂದಿವೆ. ಇದು ಮುಜರಾಯಿ ಇಲಾಖೆಗೆ ಸೇರಿದೆ ಎಂದು ಹೇಳುತ್ತಾರೆ. ಆದರೆ ಅಂದಿನಿಂದ ಇಂದಿನ ವರೆಗೂ ಸರ್ಕಾರದಿಂದ ನಯಾ ಪೈಸಾ ಅನುದಾನ ಮಠಕ್ಕೆ ಬಂದಿಲ್ಲ. ಯಾವೊಬ್ಬ ಎಂಎಲ್ಎ, ಎಂಪಿ ಕೂಡ ಮಠದ ಜೀರ್ಣೋದ್ಧಾರ ಮಾಡಿಲ್ಲ. ಭಕ್ತರಿಗೆ ಸೇರಿದ ಆಸ್ತಿಯನ್ನು ಸರ್ಕಾರ ಕಬಳಿಸುವ ಹುನ್ನಾರ ನಡೆಸಿದೆ. 18 ಸೇವಾದಾರರಿಗೆ ಜಮೀನು ನೀಡಿ ಪಟ್ಟಾ ಮಾಡಿಕೊಂಡುವಂತೆ ಜಿಲ್ಲಾಧಿಕಾರಿಗೆ ಶಾಸಕರು ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಯಾರಿಗೂ ಅದರ ಮಾಹಿತಿ ಇಲ್ಲ. ಯಾರಿಗೆ ಯಾವ ಕಡೆ ಜಾಗ ಬರುತ್ತದೆ ಎಂಬುದೆ ಗೊತ್ತಿಲ್ಲ. ಈಗ ಸರ್ಕಾರಿ ಕಟ್ಟಡಗಳ ಜಾಗ ಗುರುತು ಮಾಡುತ್ತಿದ್ದಾರೆ. ನಕಾಶೆಗಳನ್ನು ಬಿಡುತ್ತಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಲಿಂಗಾಯತ ವೀರಶೈವ ಧರ್ಮದ ಆಸ್ತಿಗಳ ಮೇಲೆ ಸರ್ಕಾರ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿವೆ. ಅವರಿಗೆ ತಾಲೂಕನ್ನು ಅಭಿವೃದ್ಧಿಪಡಿಸುವ ಇಚ್ಛೆ ಇದ್ದರೆ ಕುಕನೂರು ಪಟ್ಟಣದಲ್ಲಿಯೇ ಸರ್ವೆ ನಂಬರ್ 122ರಲ್ಲಿ 31 ಎಕರೆ ಸರ್ಕಾರಿ ಜಮೀನು ಇದೆ. ಸರ್ವೆ ನಂಬರ್ 126 ಹರಿಶಂಕರ ಬಂಡಿ ರಸ್ತೆಯಲ್ಲಿ 2 ಎಕರೆ, ಕುಕನೂರು ಹೃದಯ ಭಾಗದಲ್ಲಿ ಪ್ರವಾಸಿ ಮಂದಿರದ ಎದುರುಗಡೆ 14 ಎಕರೆ ವಕ್ಫ್ ಬೋರ್ಡ್ ಆಸ್ತಿ ಇದೆ. ಅಲ್ಲಿ ಯಾಕೆ ಇವರು ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವುದಿಲ್ಲ? ಆ ತಾಕತ್ತು ಇವರಿಗೆ ಇದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಗುದ್ನೆಪ್ಪನ ಮಠದ ಆಸ್ತಿಯಲ್ಲಿ ಒಂದು ಇಂಚು ಜಾಗವನ್ನೂ ಬಿಟ್ಟು ಕೊಡುವುದಿಲ್ಲ. ಗುದ್ನೆಪ್ಪನಮಠದ ಆಸ್ತಿ ಲಕ್ಷ ಲಕ್ಷ ಭಕ್ತರದ್ದಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಆಧಾರದ ಮೇಲೆ ಶೀಘ್ರ ಕೋರ್ಟ್ ಮೊರೆ ಹೋಗುತ್ತೇವೆ. ಇನ್ನೂ ಮುಂದುವರಿದರೆ ಏಕಾಂಗಿಯಾಗಿ ಆ ಜಾಗದಲ್ಲಿ ಕುಳಿತು ಮೌನಾಚರಣೆಯಲ್ಲಿ ಹೋರಾಟ ಮಾಡುತ್ತೇನೆ ಎಂದರು.

ಪ್ರಮುಖರಾದ ಗುದ್ನೆಯ್ಯ ದೂಪದ್, ಗುರುಲಿಂಗಯ್ಯ ಬಂಡಿ, ಚನ್ನಬಸಯ್ಯ ಇನಾಮದಾರ, ಶರಣಯ್ಯ ಹಾಗೂ ಗ್ರಾಮಸ್ಥರು ಇದ್ದರು.

Share this article