ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಎಲ್ಲರೂ ಜೊತೆಯಾಗಿ ಸಾಗಬೇಕು ಸಮಾನವಾಗಿ ಅಭ್ಯುದಯ ಸಾಧಿಸಬೇಕು. ಇದು ಭಾರತೀಯ ಶಿಕ್ಷಣ ಪದ್ಧತಿ ಮತ್ತು ಪರಂಪರೆಯ ಜೀವಾಳ. ಗುರು ಶಿಷ್ಯ ಪರಂಪರೆ ಭಾರತೀಯ ಶಿಕ್ಷಣ ಪದ್ಧತಿಯ ಬೆನ್ನೆಲುಬು. ಬದಲಾದ ಶಿಕ್ಷಣ ವ್ಯವಸ್ಥೆಯಿಂದಾಗಿ ಸಮಾಜದಲ್ಲಿ ವೈಪರೀತ್ಯಗಳು ತಲೆದೋರುವಂತಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿಗ್ರಾಮದ ಶ್ರೀ ಸತ್ಯಸಾಯಿ ಪ್ರೇಮಾಮೃಂ ಸಭಾ ಭವವನದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕುಲಪತಿಗಳ ಸಮ್ಮೇಳನದ ಸಾನ್ನಿಧ್ಯ ವಹಿಸಿ ಉಪನ್ಯಾಸ ನೀಡಿ, ನಮ್ಮ ವೈಭವದ ಪರಂಪರೆಯನ್ನು ಮರು ಸ್ಥಾಪಿಸಿ ಪ್ರಾಚೀನ ಕಾಲದಲ್ಲಿದ್ದ ವಿವೇಕಯುಕ್ತ ಶಿಕ್ಷಣವನ್ನು ಮರಳಿ ಸಮಾಜಕ್ಕೆ ಒದಗಿಸುವ ಕಲ್ಪನೆ ಶಿಕ್ಷಣ ಪದ್ಧತಿಯ ಗುರಿಯಾಗಬೇಕು ಎಂದರು.
ವಾಣಿಜ್ಯೀಕರಣದ ಸರಕಾಗಿದೆಶಿಕ್ಷಣದಲ್ಲಿ ಮೌಲ್ಯ ಅತ್ಯಗತ್ಯ. ಪಾಶ್ಚಾತ್ಯ ಶಿಕ್ಷಣ ಪದ್ಧತಿಗೆ ಮಾರುಹೋದ ಕಾರಣ ಇಂದು ಶಿಕ್ಷಣವು ಸಹ ವಾಣಿಜ್ಯದ ಸರಕಾಗಿ ಹೋಗಿದೆ. ಭಾರತೀಯ ಶಿಕ್ಷಣ ಪುರಾತನ ವೃಕ್ಷವಿದ್ದಂತೆ. ಅದರಲ್ಲಿ ವಿವೇಕ ತುಂಬಿದ ಹೊಸ ಚಿಗುರು ಮೂಡಬೇಕಾಗಿದೆ. ಆ ನಿಟ್ಟಿನಲ್ಲಿ ಕಾರ್ಯಸಾಧನೆ ಸಾಧ್ಯವಾದರೆ ನಮ್ಮ ಪ್ರಯತ್ನ ಸಾರ್ಥಕವಾಗುವುದು. ಸರಿಯಾದ ಶಿಕ್ಷಣ ವ್ಯವಸ್ಥೆ ಇಲ್ಲದ ಕಾರಣ ಅಪರಾಧಗಳು ಹೆಚ್ಚುವಂತಾಗಿದೆ. ಸಮರ್ಪಕ ಶಿಕ್ಷಣವನ್ನು ನೀಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂದರು. ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಶಿಕ್ಷಣದ ಗುರಿಯ ಬಗೆಗೆ ತಿಳಿಸುತ್ತಾ ಶಿಕ್ಷಣದಲ್ಲಿ ಮೌಲ್ಯಗಳ ಅಗತ್ಯವನ್ನು ಪ್ರಾಚೀನ ದಾರ್ಶನಿಕರ ಸೂಕ್ತಿ ಮತ್ತು ಅನುಭವಗಳ ಆಧಾರದಲ್ಲಿ ಪ್ರತಿಪಾದಿಸಿದರು.
ಶಿಕ್ಷಣದಲ್ಲಿ ಮಾನವೀಯ ಮೌಲ್ಯಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆಯ ಕುರಿತಾಗಿ ನಡೆದ ಕುಲಪತಿಗಳ ಸಮಾವೇಶ ಸದಾಚಾರದ ಪಾಲನೆ, ಶಿಕ್ಷಣ ಮತ್ತು ಸಮಾಜ ಸೇವೆ ಎಂಬ ವಿಚಾರದ ಕುರಿತು ಗೋಷ್ಠಿಗಳು ವ್ಯವಸ್ಥೆಯಾಗಿದ್ದವು. ಒಟ್ಟು ಎರಡು ಅವಧಿಯಲ್ಲಿ ನಡೆದ ಸಂವಾದ ಮತ್ತು ವಿಚಾರ ಸಂಕಿರಣ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆಯ ಕುರಿತು ಪ್ರಾಯೋಗಿಕ ಅನುಷ್ಠಾನದ ಬಗೆಗೆ ಚರ್ಚಿಸಲಾಯಿತು.
ಈ ಗೋಷ್ಠಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ಮೌಲ್ಯಗಳ ಅಳವಡಿಕೆ, ಶಿಕ್ಷಣ ಕ್ರಮ, ಶೈಕ್ಷಣಿಕ ಸಂಶೋಧನೆ, ಶಿಕ್ಷಣದಲ್ಲಿ ಸಾಮಾಜಿಕ ಬದ್ಧತೆ, ಮಾನವೀಯ ಮೌಲ್ಯಗಳ ಪ್ರಾಯೋಗಿಕ ಅನುಷ್ಠಾನ, ಶಿಕ್ಷಣದ ಯಶಸ್ಸಿನಲ್ಲಿ ಪೋಷಕರ ಪಾತ್ರ ಮುಂತಾದ ವಿಚಾರಗಳ ಬಗೆಗೆ ಚರ್ಚಿಸಿ ಮೌಲ್ಯಾಧಾರಿತ ಸಮಗ್ರ ಶಿಕ್ಷಣವನ್ನು ರೂಪಿಸಲು ಒಮ್ಮತಕ್ಕೆ ಬರಲಾಯಿತು. ದೇಶದ 47 ವಿವಿಗಳ ವಿಸಿಗಳು ಭಾಗಿಗೋಷ್ಠಿಯಲ್ಲಿ ದೇಶದ ಹದಿನೆಂಟು ರಾಜ್ಯಗಳ 47 ವಿಶ್ವವಿದ್ಯಾಲಯಗಳ ಕುಲಪತಿಗಳು ಭಾಗವಹಿಸಿದ್ದರು. ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ ಎನ್ ನರಸಿಂಹಮೂರ್ತಿ, ಜಾರ್ಖಂಡ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊಫೆಸರ್ ಜೈಪ್ರಕಾಶ್ ಲಾಲ್, ಗುಜರಾತಿನ ಆತ್ಮೀಯ ವಿಶ್ವವಿದ್ಯಾಲಯದ ಪ್ರೋ-ಚಾನ್ಸಲರ್ ಡಾ.ಶೀಲಾ ರಾಮಚಂದ್ರನ್, ಡಾ.ಜೆ.ಶಶಿಧರ ಪ್ರಸಾದ್ ವಿಚಾರ ಸಂಕಿರಣ ಮತ್ತು ಸಂವಾದದ ನೇತೃತ್ವ ವಹಿಸಿದ್ದರು.
ಜಾರ್ಖಂಡ್ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಯಪ್ರಕಾಶ್ ಲಾಲ್ ಮಾತನಾಡಿ, ಆಧ್ಯಾತ್ಮಿಕ ವಿವೇಕ ಮತ್ತು ಪ್ರಾಯೋಗಿಕ ಜ್ಞಾನ ರಹಿತವಾದ ಶಿಕ್ಷಣ ನಿರರ್ಥಕ. ಮೌಲ್ಯಗಳ ಲೇಪನ ಇಲ್ಲದ ಶಿಕ್ಷಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇವೆರಡು ಮಿಳಿತವಾದ ಪ್ರಾಯೋಗಿಕ ಶಿಕ್ಷಣ ಇಂದಿನ ಅಗತ್ಯವಾಗಿದೆ, ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಡಾ.ಶ್ರೀಕಂಠಮೂರ್ತಿ, ಕುಲಸಚಿವ ಡಾ.ಹನುಮಂತ ರಾವ್ ನಾಯುಡು, ಮತ್ತಿತರರು ಇದ್ದರು.