ಹೊಸಪೇಟೆ: ಹನ್ನೆರಡನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮಹಾನುಭಾವಿ, ಅನುಪಮ ಚೇತನ ಹಾಗೂ ಬಸವಣ್ಣನವರ ನಿಕಟವರ್ತಿಯಾಗಿದ್ದ ಹಡಪದ ಅಪ್ಪಣ್ಣನವರ ವಚನಗಳ ಸಾರವನ್ನರಿತು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಜಯನಗರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗುರುವಾರ ಅವರು ಮಾತನಾಡಿದರು. ಕಲ್ಯಾಣದಲ್ಲಿ ಸರ್ವ ಶಿವಶರಣರ ನಿಕಟ ಸಂಪರ್ಕ ಹೊಂದಿದ್ದ ಇವರು ಶುದ್ಧ ಮನಸ್ಸಿನ ಬಲದಿಂದ ಬಸವಣ್ಣನವರಿಗೆ ಬಲಗೈ ಬಂಟನೆಂದೆ ಹೆಸರು ಪಡೆದಿದ್ದರು. ಬೆಳಗಿನಿಂದ ರಾತ್ರಿಯ ವರೆಗೆ ಬಸವಣ್ಣನವರ ಜತೆಯಲ್ಲೆ ಇದ್ದ ಅಪ್ಪಣ್ಣನವರು ಒಡನಾಡಿಯಾಗಿ, ಆತ್ಮಜ್ಞಾನಿಗಳಾದವರು. ಸಮಾಜ ಸುಧಾರಣೆಗಾಗಿ ಜಾತಿ, ಧರ್ಮ, ವರ್ಣ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಚೆನ್ನವೀರಪ್ಪ, ದೇವಕ್ಕೆಮ್ಮನವರ ಸುಪುತ್ರನಾಗಿದ್ದು, ದೇಗಿನಾಳ ಗ್ರಾಮದ ಜೀರನಾಗಪ್ಪ ಚೆನ್ನಬಸಮ್ಮನವರ ಮಗಳಾದ ಲಿಂಗಮ್ಮ ಅಪ್ಪಣ್ಣನ ಪತ್ನಿಯಾಗಿದ್ದರು. ಅವರ ಕಾಲವನ್ನು ಕ್ರಿ.ಶ.1160 ಎಂದು ಗುರುತಿಸಲಾಗಿದೆ. ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತ ನಾಮದಲ್ಲಿ 250ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಅವರ ಪತ್ನಿ ಶಿವಶರಣೆ ಲಿಂಗಮ್ಮ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ ಅಂಕಿತದಲ್ಲಿ 114 ವಚನಗಳನ್ನು ರಚಿಸಿದ್ದಾರೆ. ಹಡಪದ (ಕ್ಷೌರಿಕ) ಕಾಯಕ ಇವರದು. ಕಾರ್ಯನಿಷ್ಠೆ, ಜೀವನ ನಿಷ್ಠೆ ಹಾಗೂ ಸೇವಾ ನಿಷ್ಠೆಗಳು ಇವರ ವ್ಯಕ್ತಿತ್ವದ ವಿಶೇಷತೆಗಳಾಗಿವೆ. ಇವರ ವಚನಗಳಲ್ಲಿ ಗಮನಿಸಿದರೆ ಅವರ ಪಾಂಡಿತ್ಯದ ಪರಿಚಯ ಆಗುತ್ತದೆ. ಋಗ್ವೇದ, ಯಜುರ್ವೇದ, ಆದಿತ್ಯ ಪುರಾಣ, ಲಿಂಗ ಪುರಾಣಗಳ ಶ್ಲೋಕಗಳನ್ನು ಶಿವರಹಸ್ಯ, ಶಿವಧರ್ಮ, ಸ್ಕಂದಪುರಾಣ, ಆಗಮ, ಉಪನಿಷತ್ತುಗಳು ಹೀಗೆ ಆಧಾರಗಳನ್ನು ತಮ್ಮ ವಚನಗಳಲ್ಲಿ ಬಳಸಿದ ಅಪ್ಪಣ್ಣ ಇತರ ವಚನಕಾರರಿಗಿಂತ ಭಿನ್ನವಾಗಿ ಮಹಾಜ್ಞಾನಿಯಾಗಿ ಕಾಣುತ್ತಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಹಡಪದ ಸಮುದಾಯದ ಮುಖಂಡರು ಭಾಗವಹಿಸಿದ್ದರು.